ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್‌ಎಲ್‌ ಟೆಂಡರ್‌ ತಿರಸ್ಕಾರ ಮಾಡಿದ್ದೇಕೆ?

ಪಿಎಸ್‌ಎಸ್‌ಕೆ ಖಾಸಗೀಕರಣಕ್ಕೆ ಹೈಕೋರ್ಟ್‌ ತಡೆ, ಕೊಪ್ಪದ ಕಾರ್ಖಾನೆಯಿಂದ ರಿಟ್‌ ಅರ್ಜಿ
Last Updated 17 ಜುಲೈ 2020, 14:21 IST
ಅಕ್ಷರ ಗಾತ್ರ

ಮಂಡ್ಯ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ (ಪಿಎಸ್‌ಎಸ್‌ಕೆ) ಟೆಂಡರ್‌ ಪ್ರಕ್ರಿಯೆಯಲ್ಲಿ ಕೊಪ್ಪದ ಎನ್‌ಎಸ್‌ಎಲ್‌ ಕಾರ್ಖಾನೆ ಸಲ್ಲಿಸಿದ್ದ ಟೆಂಡರ್‌ ಅರ್ಜಿಯನ್ನು ಸರ್ಕಾರ ತಿರಸ್ಕಾರ ಮಾಡಿದ್ದೇ ರಿಟ್‌ ಅರ್ಜಿ ಸಲ್ಲಿಸಲು ಕಾರಣ ಎಂಬ ವಿಷಯ ಬೆಳಕಿಗೆ ಬಂದಿದೆ.

ನಿರಾಣಿ ಶುಗರ್ಸ್‌ಗೆ 40 ವರ್ಷಗಳವರೆಗೆ ಪಿಎಸ್‌ಎಸ್‌ಕೆ ಗುತ್ತಿಗೆ ನೀಡಲಾಗಿದ್ದ ಟೆಂಡರ್‌ ಪ್ರಕ್ರಿಯೆಗೆ ರಾಜ್ಯ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಹೀಗಾಗಿ ಆಗಸ್ಟ್‌ ತಿಂಗಳಿನಿಂದಲೇ ಕಾರ್ಖಾನೆ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದ ಶಾಸಕ ಮುರುಗೇಶ್‌ ನಿರಾಣಿ ಅವರಿಗೆ ಹಿನ್ನಡೆಯಾಗಿದೆ. ಕಾರ್ಖಾನೆ ಖಾಸಗೀಕರಣಗೊಳಿಸುವ ಕುರಿತು ರಾಜ್ಯ ಸರ್ಕಾರ ನಡೆಸಿದ ಗ್ಲೋಬಲ್‌ ಟೆಂಡರ್‌ನಲ್ಲಿ ಮುರುಗೇಶ್‌ ನಿರಾಣಿ ಅವರ ಸಕ್ಕರೆ ಕಂಪನಿ ಅತೀ ಹೆಚ್ಚು ₹ 405 ಕೋಟಿ ಬಿಡ್‌ ಮಾಡಿ ಕಾರ್ಖಾನೆ ಪಡೆಯುವಲ್ಲಿ ಯಶಸ್ವಿಯಾಗಿತ್ತು.

ಆದರೆ ಇದರ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ ಎನ್‌ಎಸ್‌ಎಲ್‌ ಕಾರ್ಖಾನೆ ಆಡಳಿತ ಮಂಡಳಿ, ಸರ್ಕಾರ ಏಕಪಕ್ಷೀಯವಾಗಿ ಟೆಂಡರ್‌ ಪ್ರಕ್ರಿಯೆ ನಡೆಸಿದೆ. ಎನ್‌ಎಸ್‌ಎಲ್‌ ಕಾರ್ಖಾನೆ ಸಲ್ಲಿಸಿದ್ದ ಟೆಂಟರ್‌ ಅರ್ಜಿಯನ್ನು ಯಾವುದೇ ಕಾರಣ ನೀಡದೆ ತಿರಸ್ಕಾರ ಮಾಡಿದೆ. ಇದರ ವಿರುದ್ಧ ಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಲಾಗಿತ್ತು, ಮನವಿ ಪುರಸ್ಕರಿಸಿದ ಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದು ಕೊಪ್ಪ ಕಾರ್ಖಾನೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಪಿಎಸ್‌ಎಸ್‌ಕೆ ವ್ಯಾಪ್ತಿಯ ರೈತರ ಮೇಲೆ ನಮಗೆ ಕಾಳಜಿ ಇದೆ. ಆ ವ್ಯಾಪ್ತಿಯ ಕಬ್ಬು ಪಡೆಯುವ ದುರುದ್ದೇಶದಿಂದ ನಾವು ತಡೆಯಾಜ್ಞೆ ತಂದಿಲ್ಲ. ಟೆಂಡರ್‌ ಪ್ರಕ್ರಿಯೆಯಲ್ಲಿ ನಾವು ಪಾಲ್ಗೊಂಡಿದ್ದರೂ ನಮ್ಮ ಟೆಂಡರ್‌ ತಿರಸ್ಕರಿಸಿ ನಿರಾಣಿ ಕಂಪನಿಗೆ ಏಪಪಕ್ಷೀಯವಾಗಿ ಟೆಂಡರ್‌ ನಿಡಿದ್ದು ಏಕೆ ಎಂಬುದು ನಮ್ಮ ಪ್ರಶ್ನೆಯಾಗಿದೆ. ಮುಂದೆ ಸರ್ಕಾರ ಮರು ಟೆಂಡರ್‌ ಆಹ್ವಾನಿಸಿದರೆ ಕಾನೂನುಬದ್ಧವಾಗಿ ನಾವು ಟೆಂಡರ್‌ ಸಲ್ಲಿಸುತ್ತೇವೆ’ ಎಂದು ಎನ್‌ಎಸ್‌ಎಲ್‌ ಕಾರ್ಖಾನೆ ಮಾನವ ಸಂಪನ್ಮೂಲ ಅಧಿಕಾರಿ ಪುಟ್ಟರಂಗಶೆಟ್ಟಿ ಹೇಳಿದರು.

ಆತಕದಲ್ಲಿ ರೈತರು: ಆಗಸ್ಟ್‌ ತಿಂಗಳಿಂದಲೇ ಪಿಎಸ್‌ಎಸ್‌ಕೆ ಕಾರ್ಯಾರಂಭ ಮಾಡುತ್ತದೆ ಎಂದು ನಿರೀಕ್ಷಿಸಿದ್ದ ಈ ಭಾಗದ ಸಾವಿರಾರು ಕಬ್ಬು ಬೆಳೆಗಾರರಿಗೆ ಹೈಕೋರ್ಟ್‌ ತಡೆಯಾಜ್ಞೆ ಆಘಾತ ತಂದಿದೆ. ಈ ಹಂಗಾಮಿನಲ್ಲಿ ಕಾರ್ಖಾನೆ ಆರಂಭವಾಗದಿದ್ದರೆ ಬೆಳೆದು ನಿಂತಿರುವ ಕಬ್ಬನ್ನು ಎಲ್ಲಿಗೆ ಸಾಗಿಸಬೇಕು ಎಂದು ಪ್ರಶ್ನೆ ನಿರ್ಮಾಣವಾಗಿದೆ.

‘ಬಂಡವಾಳಶಾಹಿಗಳ ಗುದ್ದಾಟದಲ್ಲಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಒಳ್ಳೆಯ ಉದ್ದೇಶವಿದ್ದರೆ ಎನ್‌ಎಸ್‌ಎಲ್‌ ಕಾರ್ಖಾನೆಯವರು ಪಿಎಸ್‌ಎಸ್‌ಕೆ ಕಾರ್ಯಾರಂಭಕ್ಕೆ ಅವಕಾಶ ನಿಡಬೇಕಾಗಿತ್ತು. ಆದರೆ ತಡೆಯಾಜ್ಞೆ ತಂದು ರೈತರ ಕೋಪಕ್ಕೆ ಗುರಿಯಾಗಿದ್ದಾರೆ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪುಗೌಡ ಹೇಳಿದರು.

******

ರೈತರಿಗೆ, ಬ್ಯಾಂಕ್‌ಗೆ ವಂಚನೆ: ನಿರಾಣಿ

‘ಎನ್‌ಎಸ್‌ಎಲ್‌ ಕಾರ್ಖಾನೆ ಕಳೆದ ನಾಲ್ಕು ವರ್ಷಗಳಿಂದ ರೈತರಿಗೆ ಬಾಕಿ ಪಾವತಿ ಮಾಡದೇ ವಂಚನೆ ಮಾಡಿದೆ. ಜೊತೆಗೆ ಬ್ಯಾಂಕ್‌ ಸಾಲದ ವಿಷಯದಲ್ಲಿ ನಿಯಮ ಪಾಲಿಸಿಲ್ಲ. ಈ ಅಂಶ ಪರಿಗಣಿಸಿ ಸರ್ಕಾರ ಎನ್‌ಎಸ್‌ಎಲ್‌ ಟೆಂಡರ್‌ ತಿರಸ್ಕಾರ ಮಾಡಿದೆ’ ಎಂದು ಶಾಸಕ ಮುರುಗೇಶ್‌ ನಿರಾಣಿ ಪ್ರತಿಕ್ರಿಯೆ ನೀಡಿದರು.

‘ಪಿಎಸ್‌ಎಸ್‌ಕೆ ವಿಚಾರದಲ್ಲಿ ಅತೀ ಹೆಚ್ಚು ಹಣಕ್ಕೆ ಬಿಡ್‌ ಮಾಡುವ ಮೂಲಕ ನಾವು ದಾಖಲೆ ನಿರ್ಮಿಸಿದ್ದೇವೆ. ಇದನ್ನು ಸಹಿಸದ ಎನ್‌ಎಸ್‌ಎಲ್‌ ರಿಟ್‌ ಅರ್ಜಿ ಸಲ್ಲಿಸಿದೆ. ಜುಲೈ 20ರಂದು ಸಭೆಯಿದ್ದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT