ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಪುಷ್ಕರಕ್ಕೆ ಹರಿದು ಬಂದ ಭಕ್ತರ ದಂಡು

Last Updated 20 ಸೆಪ್ಟೆಂಬರ್ 2017, 6:40 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ನಡೆಯುತ್ತಿರುವ ಕಾವೇರಿ ಮಹಾ ಪುಷ್ಕರಕ್ಕೆ ಮಂಗಳವಾರ ಕೂಡ ಅಪಾರ ಭಕ್ತರು ಭೇಟಿ ನೀಡಿ ಕಾವೇರಿ ಪೂಜೆ ಮತ್ತು ಪುಣ್ಯ ಸ್ನಾನ ಮಾಡಿದರು. ಶ್ರೀರಂಗನಾಥಸ್ವಾಮಿ ದೇವಾಲಯದ ಉತ್ತರ ದಿಕ್ಕಿನಲ್ಲಿರುವ ಕಾವೇರಿ ನದಿಯ ಸೋಪಾನ ಕಟ್ಟೆಯ ಬಳಿಗೆ ಬೆಳಿಗ್ಗೆ 5ರಿಂದಲೇ ಭಕ್ತರು ಬರಲಾರಂಭಿಸಿದರು. ಬೆಳಿಗ್ಗೆ 10.30ರ ವೇಳೆಗೆ ನದಿ ತೀರದಲ್ಲಿ ಜನ ಜಾತ್ರೆಯೇ ನೆರೆದಿತ್ತು. ಜನರನ್ನು ನಿಯಂತ್ರಿಸಲು ಲಾಲ್‌ ಮಹಲ್‌ ಉದ್ಯಾನದಿಂದ ನದಿ ದಂಡೆಯವರೆಗೆ ಬ್ಯಾರಿಕೇಡ್‌ ಅಳವಡಿಸಲಾಗಿತ್ತು.

ಜನರು ಒಮ್ಮುಖವಾಗಿ ಹೋಗಿ ಬರುವ ವ್ಯವಸ್ಥೆ ಮಾಡಲಾಗಿತ್ತು. ಹೆಜ್ಜೆ ಹೆಜ್ಜೆಗೂ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಭಕ್ತರು ನದಿಗೆ ತುಪ್ಪದ ದೀಪದ ಆರತಿ ಬೆಳಗಿ ಭಕ್ತಿ, ಭಾವ ತೋರಿದರು. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮಾತ್ರವಲ್ಲದೆ ಉತ್ತರ ಭಾರತದಿಂದಲೂ ಬಂದಿದ್ದರು.

ಪುಷ್ಕರದ ಸಂಚಾಲಕ ಡಾ.ಭಾನುಪ್ರಕಾಶ್‌ ನೇತೃತ್ವದಲ್ಲಿ ಗಂಗಾ ಜಲ ಮತ್ತು ಕಾವೇರಿ ಪವಿತ್ ಜಲಗಳ ಕುಂಭ ಪೂಜೆ, ಗಣ ಹೋಮ, ವೇದ ಪಾರಾಯಣ, ಮಹಾ ಸಂಕಲ್ಪ, ಸೂರ್ಯ ನಮಸ್ಕಾರ, ಅರ್ಘ್ಯ ಅರ್ಪಣೆ, ಸ್ವಯಂ ಪಾಕ ದಾನ, ಮಹಾ ಆರತಿ, ಕಾವೇರಿಗೆ ಬಾಗಿನ ಸಮರ್ಪಣೆ ಇತರ ವಿಧಿ, ವಿಧಾನಗಳು ಜರುಗಿದವು.

ಉಚಿತ ಬಸ್‌ ವ್ಯವಸ್ಥೆ: ಕೋಟೆಯ ಒಳಗೆ ಮತ್ತು ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ತಪ್ಪಿಸಲು ಪಟ್ಟಣದ ಒಳಕ್ಕೆ ದೊಡ್ಡ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿತ್ತು. ಬೆಂಗಳೂರು– ಮೈಸೂರು ಹೆದ್ದಾರಿ ವೃತ್ತದಿಂದ ಭಕ್ತರನ್ನು ಪ್ರತ್ಯೇಕ ವಾಹನಗಳಲ್ಲಿ ಕರೆದೊಯ್ಯಲಾಗುತ್ತಿತ್ತು. ಉಚಿತ ಬಸ್‌ ಸೇವೆಗಾಗಿ ಪೊಲೀಸ್‌ ಇಲಾಖೆ 10 ಬಸ್‌ಗಳನ್ನು ಮೀಸಲಿಟ್ಟಿತ್ತು. ಚೆಕ್‌ ಪೋಸ್ಟ್‌ ಮಾರ್ಗವಾಗಿ ಪಟ್ಟಣ ಪ್ರವೇಶಿಸುವ ವಾಹನಗಳು ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ನಿಲ್ಲುತ್ತಿದ್ದವು.

ಬೆಂಗಳೂರು ಇತರ ಕಡೆಗಳಿಂದ ಬರುವ ವಾಹನಗಳ ನಿಲುಗಡೆಗೆ ಸರ್ಕಾರಿ ಜೂನಿಯರ್‌ ಕಾಲೇಜು ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಿದ್ದರಿಂದ ಭಾನುವಾರ ಉಂಟಾದ ಟ್ರಾಫಿಕ್‌ ಜಾಮ್‌ ಸಮಸ್ಯೆ ಮಂಗಳವಾರ ಕಂಡುಬರಲಿಲ್ಲ. ಸೋಪಾನಕಟ್ಟೆ, ಶ್ರೀರಂಗನಾಥಸ್ವಾಮಿ ದೇವಾಲಯ, ಕಾವೇರಿ ಸಂಗಮ, ನಿಮಿಷಾಂಬ ದೇವಾಲಯ ಸೇರಿದಂತೆ ವಿವಿಧೆಡೆ ಬಂದೋಬಸ್ತ್‌ಗಾಗಿ 700 ಪೊಲೀಸರನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT