ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವೆಡೆ ಶಮನ, ಹಲವೆಡೆ ಬಂಡಾಯದ ಬಿಸಿ

ವಿವಿಧ ಪಕ್ಷದ ಅಭ್ಯರ್ಥಿಗಳಲ್ಲಿ ಆತಂಕ; ಕೆಲವು ಕಡೆ ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ವಿಫಲ
Last Updated 12 ಫೆಬ್ರುವರಿ 2016, 7:12 IST
ಅಕ್ಷರ ಗಾತ್ರ

ಮಂಡ್ಯ: ಬಂಡಾಯ ಅಭ್ಯರ್ಥಿಗಳ ನಾಮಪತ್ರ ಹಿಂತೆಗೆಸುವ ನಾಯಕರ ಶತಪ್ರಯತ್ನದ ನಂತರವೂ ಹಲವು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಇದು ಕಣದಲ್ಲಿ ರುವ ಅಭ್ಯರ್ಥಿಗಳ ಆತಂಕ ಹಾಗೂ ನಾಯಕರ ತಲೆನೋವು ಹೆಚ್ಚಿಸಿದೆ.

ಕೆಲವು ಕ್ಷೇತ್ರಗಳಲ್ಲಿ ಬಂಡಾಯ ಶಮನಗೊಳಿಸುವಲ್ಲಿ ನಾಯಕರು ಯಶಸ್ವಿಯಾಗಿದ್ದಾರೆ. ಇನ್ನೂ ಕೆಲವು ಕ್ಷೇತ್ರಗಳಲ್ಲಿ ವಿಫಲರಾಗಿದ್ದಾರೆ. ನಾಯಕರ ಯಾವ ಪಟ್ಟುಗಳಿಗೂ ಮಣಿಯದೇ ಕೆಲವರು ಚುನಾವಣಾ ಕಣದಲ್ಲಿ ಉಳಿದಿದ್ದಾರೆ.

ಟಿಕೆಟ್‌ ನೀಡುತ್ತೇನೆ ಎಂದು ಭರವಸೆ ನೀಡಿದ ಪಕ್ಷದ ಮುಖಂಡರು ತಮ್ಮನ್ನು ಕೈ ಬಿಟ್ಟಿರಬಹುದು. ಆದರೆ, ಬೆಂಬಲಿ ಗರು ಹಾಗೂ ಕ್ಷೇತ್ರದ ಮತದಾರರು ಕೈಬಿಡುವುದಿಲ್ಲ ಎಂಬ ಆಶಾಭಾವನೆ ಪಕ್ಷೇತರರಾಗಿ ಸ್ಪರ್ಧಿಸುವ ಅಭ್ಯರ್ಥಿಗಳದ್ದಾಗಿದೆ.

ಮಂಡ್ಯ ತಾಲ್ಲೂಕಿನ ಬಸರಾಳು ಜಿ.ಪಂ. ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ವಿರುದ್ಧ ಮೂವರು ಬಂಡಾಯ ಅಭ್ಯರ್ಥಿ ಗಳಾಗಿ ಕಣಕ್ಕೆ ಇಳಿದಿದ್ದರು. ಇಬ್ಬರು ನಾಮಪತ್ರ ಹಿಂತೆಗೆದುಕೊಂಡಿದ್ದು, ಮಾಜಿ ಶಾಸಕ ಎನ್‌. ತಮ್ಮಣ್ಣ ಅವರ ಸಹೋದರ ಎನ್‌. ಶಿವಣ್ಣ ಕಣದಲ್ಲಿ ಉಳಿದಿದ್ದಾರೆ. ನಾಮಪತ್ರ ಹಿಂತೆಗೆದು ಕೊಂಡಿರುವವರೂ ಶಿವಣ್ಣ ಅವರ ಪರವಾಗಿದ್ದಾರೆ ಎನ್ನಲಾಗಿದೆ.

ಬಸರಾಳು ಜಿ.ಪಂ. ಕ್ಷೇತ್ರದ ವ್ಯಾಪ್ತಿಯ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿಯೂ ಎನ್‌. ಶಿವಣ್ಣ ಬೆಂಬಲಿಗ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಹೀಗಾಗಿ, ಈ ಕ್ಷೇತ್ರದಲ್ಲಿ ಬಂಡಾಯದ ಬಿಸಿ ಜೆಡಿಎಸ್ ಪಕ್ಷಕ್ಕೆ ತಟ್ಟುತ್ತಿದೆ.

ಬೂದನೂರು ಕ್ಷೇತ್ರದಿಂದ ಜೆಡಿಎಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ರುವ ಪುಟ್ಟಸ್ವಾಮಿ ಕಟ್ಟೆದೊಡ್ಡಿ ಅವರೂ ಕಣದಲ್ಲಿ ಉಳಿದಿದ್ದಾರೆ. ಮಳವಳ್ಳಿ ತಾಲ್ಲೂಕಿನ ಚೊಟ್ಟನಹಳ್ಳಿಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್‌ನ ಸುಜಾತಾ ವೀರಭದ್ರ ಬಂಡಾಯ, ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್‌ನ ಎನ್‌.ಆರ್‌. ಆತ್ಮಾನಂದ, ಕೆರಗೋಡಿನಲ್ಲಿ ಜೆಡಿಎಸ್‌ನ ತಾಯಮ್ಮ ಅಭ್ಯರ್ಥಿಯಾಗಿ ಉಳಿದಿದ್ದಾರೆ.

ಹೊಳಲು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಬಂಡಾಯ ಎದ್ದು ನಾಮಪತ್ರ ಸಲ್ಲಿಸಿದ್ದ ರಾಣಿ ಕೆಬ್ಬಳ್ಳಿ ಆನಂದ್‌ ಅವರೂ ಬಂಡಾಯ ಅಭ್ಯರ್ಥಿ ಯಾಗಿ ಕಣದಲ್ಲಿ ಉಳಿದಿದ್ದಾರೆ. ಅಂಬರೀಷ್‌ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಅವರೊಂದಿಗೆ ಮಾತುಕತೆ ನಡೆಸುವ ಯತ್ನವನ್ನೂ ಕಾಂಗ್ರೆಸ್‌ ನಾಯಕರು ಮಾಡಲಿಲ್ಲ.

ಬಸರಾಳು ಕ್ಷೇತ್ರದಿಂದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಿದ್ದರೂಢ ಅವರನ್ನು ಮನ ಒಲಿಸುವಲ್ಲಿ ಕಾಂಗ್ರೆಸ್‌ ನಾಯಕರು ಯಶಸ್ವಿಯಾಗಿದ್ದು, ಅವರು ನಾಮಪತ್ರ ಹಿಂಪಡೆದಿದ್ದಾರೆ.

ಶ್ರೀರಂಪಟ್ಟಣ ತಾಲ್ಲೂಕಿನ ಕೆ. ಶೆಟ್ಟಿಹಳ್ಳಿ ಜಿ.ಪಂ. ಕ್ಷೇತ್ರದಿಂದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿದ್ದ ದರ್ಶನ್‌ ಲಿಂಗರಾಜು, ಎಂ. ಭಾಸ್ಕರ್‌ (ಅಂಬರೀಷ್‌ಗೌಡ), ಬೆಳಗೋಳ ಜಿ.ಪಂ. ಕ್ಷೇತ್ರದ ವಿನುತಾ ಮಂಜುನಾಥ್‌ ನಾಮಪತ್ರ ವಾಪಸ್‌ ಪಡೆದಿದ್ದಾರೆ.

ದೇವಲಾಪುರ ಜಿ.ಪಂ. ಕ್ಷೇತ್ರದಿಂದ ಜೆಡಿಎಸ್‌ನ ವಸಂತಮಣಿ, ಬೆಳ್ಳೂರು ಕ್ಷೇತ್ರದಿಂದ ಜೆಡಿಎಸ್‌ನ ಮೋಹನ ಕುಮಾರ್‌ ನಾಮಪತ್ರ ವಾಪಸ್‌ ಪಡೆದಿದ್ದಾರೆ.  ಬಿಂಡಿಗನವಿಲೆ ಕ್ಷೇತ್ರದಿಂದ ಕಾಂಗ್ರೆಸ್‌ನ ಗಿರಿಗೌಡ ನಾಮಪತ್ರ ವಾಪಸ್‌ ಪಡೆಯದಿರುವುದು ಅಭ್ಯರ್ಥಿ ನಾರಾಯಣಮೂರ್ತಿ ಅವರ ಸಂಕಷ್ಟ ಹೆಚ್ಚಿಸಿದೆ. ಜಿ.ಪಂ. ಹಾಗೂ ತಾ.ಪಂ.ನ ವಿವಿಧ ಕ್ಷೇತ್ರಗಳಲ್ಲಿಯೂ ಬಂಡಾಯದ ಬಾವುಟ ಹಾರಿಸಿದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಿಂದ ಪಕ್ಷದ ಅಭ್ಯರ್ಥಿ ಫಲಿತಾಂಶ ಏನಾಗಲಿದೆ ಎಂಬುದು ಕಾದು ನೋಡಬೇಕಿದೆ.

***
ಬಂಡಾಯವಾಗಿ ಸ್ಪರ್ಧಿಸಿದವರ ಕುರಿತು ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಾಗುವುದು. ಅವರ ಸೂಚನೆ ಮೇರೆಗೆ ಕ್ರಮಕೈಗೊಳ್ಳಲಾಗುವುದು.
-ಡಿ. ರಮೇಶ್‌,
ಅಧ್ಯಕ್ಷ, ಜೆಡಿಎಸ್‌ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT