ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊತ್ತತ್ತಿ: ಅನೈರ್ಮಲ್ಯ ಸಮಸ್ಯೆ ಉತ್ಪತ್ತಿ

Last Updated 20 ನವೆಂಬರ್ 2013, 6:56 IST
ಅಕ್ಷರ ಗಾತ್ರ

ಮಂಡ್ಯ: ಇದು, ಕೊತ್ತತ್ತಿ ಗ್ರಾಮ. ಹೋಬಳಿ ಕೇಂದ್ರದ ‘ಪಟ್ಟ’ವಿದ್ದರೂ, ಈ ಊರಿನ ಬಹಳಷ್ಟು ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ಹೊಂದುವುದು ಗೌರವದ ಪ್ರಶ್ನೆ ಎನಿಸಿಲ್ಲ.

ಮಂಡ್ಯ ನಗರಕ್ಕೆ ಕೇವಲ ಏಳು ಕಿ.ಮೀ. ದೂರದಲ್ಲಿರುವ ಈ ಗ್ರಾಮದ 500ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ಬಹಿರ್ದೆಸೆಗೆ ಆಶ್ರಯಿಸಿರುವುದು ಬಯಲನ್ನೇ. ಗ್ರಾಮದಲ್ಲಿ ಒಟ್ಟು 1,614 ಕುಟುಂಬಗಳಿದ್ದು, 4,008 ಜನಸಂಖ್ಯೆ ಇದೆ. 648 ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ಇಲ್ಲ. ಗ್ರಾಮ ಪಂಚಾಯಿತಿ ಕಡತಗಳೂ ಇದನ್ನು ಖಾತರಿ ಪಡಿಸುತ್ತವೆ.

ಸಂಪೂರ್ಣ ಸ್ವಚ್ಛತಾ ಆಂದೋಲನ ಅಥವಾ ನಿರ್ಮಲ ಭಾರತ್‌ ಆಭಿಯಾನದಂತಹ ಕಾರ್ಯಕ್ರಮಗಳೂ ಸಹ ಇಲ್ಲಿನ ವಾತಾವರಣವನ್ನು ಬದಲಿಸಿಲ್ಲ. ಜನರೂ ಸಹ ಬದಲಾವಣೆ ಬಯಸಿದಂತಿಲ್ಲ. ಸಾರ್ವಜನಿಕ ಸಮುದಾಯ ಶೌಚಾಲಯಗಳನ್ನು ನಿರ್ಮಿಸಿ ಬಯಲಿಗೆ ಹೋಗುವುದನ್ನು ತಡೆಯಬಹುದಾಗಿದ್ದ ಗ್ರಾಮ ಪಂಚಾಯಿತಿ ಆಡಳಿತ ವರ್ಗವೂ ತನ್ನ ಹೊಣೆಗಾರಿಕೆಯನ್ನು ಮರೆತಂತಿದೆ.

ಪ್ರೌಢಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾ.ಪಂ. ಕೇಂದ್ರ, ಐದು ಅಂಗನವಾಡಿ ಕೇಂದ್ರಗಳು, ಪಶು ಸಂಗೋಪನೆ ಆಸ್ಪತ್ರೆ, ರೈತ ಸಂಪರ್ಕ ಕೇಂದ್ರ, ಬ್ಯಾಂಕ್‌ ಸೇರಿದಂತೆ ಹತ್ತಾರು ಸೌಲಭ್ಯಗಳು ಇರುವ ಈ ದೊಡ್ಡ ಊರಿನಲ್ಲಿ, ಶೌಚಾಲಯವಿಲ್ಲದಿರುವುದೇ ದೊಡ್ಡ ಸಮಸ್ಯೆ.
ರಸ್ತೆ ಪರವಾಗಿಲ್ಲ: ಗ್ರಾಮದಲ್ಲಿ ಸ್ವಚ್ಛತೆ ಎಂಬುದು ತಕ್ಕಮಟ್ಟಿಗಿದೆ. ಕೆಲ ರಸ್ತೆಗಳಿಗೆ ಡಾಂಬರು ಹಾಕಲಾಗಿದ್ದರೆ, ಇನ್ನೂ ಕೆಲವು ರಸ್ತೆಗಳು ಸಿಮೆಂಟ್‌ನಿಂದ ರೂಪಿಸಲಾಗಿದೆ. ಒಂದೆರಡು ಕಚ್ಚಾ ರಸ್ತೆಗಳೂ ಇವೆ.

ಒಳಚರಂಡಿ ವ್ಯವಸ್ಥೆ ಇಲ್ಲ. ತೆರೆದ ಚರಂಡಿಗಳಲ್ಲಿ ಕಲ್ಮಷ ನೀರು ಮುಂದೆ ಚಲಿಸದಂತಹ ಸ್ಥಿತಿ ಇದೆ. ಗ್ರಾಮದಲ್ಲಿನ ನಿವೇಶನ ರಹಿತ ಹಾಗೂ ಮನೆ ರಹಿತ ಕುಟುಂಬಗಳ  ಸಂಖ್ಯೆ ಎಷ್ಟಿದೆ ಎಂಬ ಮಾಹಿತಿ ಗ್ರಾ.ಪಂ. ನಲ್ಲಿ ಇಲ್ಲ. ಕಳೆದ ಆರ್ಥಿಕ ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಣ್ಣಪುಟ್ಟ ಕೆಲಸಗಳಾಗಿವೆ. ವಸತಿ ಯೋಜನೆಗಳಿಗೆ ಫಲಾನುಭವಿಗಳನ್ನು ಗುರುತಿಸುವ ಕೆಲಸ ನಡೆದಿದೆ. ಎಲ್ಲ ಕುಟುಂಬಗಳಿಗೂ ವೈಯುಕ್ತಿಕ ಶೌಚಾಲಯ ದೊರಕಿಸಲಾಗುವುದು ಎಂದು ಗ್ರಾ.ಪ. ಪಿಡಿಒ ಎಚ್‌.ಜಿ. ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೆರೆ ಅಭಿವೃದ್ಧಿ ಆಗ್ಬೇಕು: ‘ಊರ್ನಲ್ಲಿ ಎರಡು ಕೆರೆಗಳಿವೆ. ಹೂಳು ತುಂಬಿದ್ದು, ನೀರು ತುಂಬ್ತಿಲ್ಲ. ಕೆರೆ ಅಭಿವೃದ್ಧಿ ಆಗ್ಬೇಕು. ಸಮುದಾಯ ಶೌಚಾಲಯ ಆದ್ರೆ ಜನ ಬಯಲಿಗೆ ಹೋಗೋದು ತಪ್ಪುತ್ತೆ. ಈ ಎರಡೂ ಕೆಲ್ಸನೂ ಆದಷ್ಟು ಬೇಗ ಆಗ್ಬೇಕು ಸಾ..’ ಎಂದು ಗ್ರಾಮದ ಮಾಯಿಗೌಡ ತಿಳಿಸಿದರು.
‘ನಮ್ದು ದೊಡ್ಡೂರು ಸಾಮಿ. ನಮ್ಗೆ ಪ್ರಯಾಣಿಕರ ತಂಗುದಾಣ ಬೇಕು. ಫಸಲನ್ನ ಒಕ್ಕಣೆ ಮಾಡೋಕೆ ಕಣ ಬೇಕು. ಸ್ಮಶಾನ ಸಮತಟ್ಟು ಮಾಡಿ, ಒಳ್ಳೆ ರಸ್ತೆ ಮಾಡಿಕೊಟ್ರೆ ಅನುಕೂಲ ಆಗ್ತದೆ’ ಎಂದು ಅದೇ ಗ್ರಾಮದ ವಿಷಕಂಠೇಗೌಡ ಪ್ರತಿಕ್ರಿಯಿಸಿದರು.

ಮಂಗಳವಾರವಷ್ಟೇ ವಿಶ್ವ ಶೌಚಾಲಯ ದಿನ ಆಗಿದೆ. ಪ್ರತಿ ಮನೆಗೂ ಶೌಚಾಲಯ ನಮ್ಮ ಯುಕ್ತಿ, ಆಗಲಿ ನಮ್ಮ ಗ್ರಾಮಗಳು ಬಯಲು ಬಹಿರ್ದೆಸೆಯಿಂದ ಮುಕ್ತಿ ಎಂಬ ಘೋಷಣೆಯೊಂದಿಗೆ 10 ದಿನಗಳ ಸ್ವಚ್ಛತಾ ಉತ್ಸವ ಆರಂಭವಾಗಿದೆ. ಶೌಚಾಲಯ ಹೊಂದಲು ಇಂಥ ಉತ್ಸವಗಳು ಈ ಗ್ರಾಮದಲ್ಲಿ ಇನ್ನೆಷ್ಟು ನಡೆಯಬೇಕೋ..!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT