ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿ ಕಚೇರಿ ಕಟ್ಟಡಕ್ಕೆ ‘ಕಪ್ಪು ಕಲೆ’!

Last Updated 18 ನವೆಂಬರ್ 2013, 5:39 IST
ಅಕ್ಷರ ಗಾತ್ರ

ಮಂಡ್ಯ: ಹೊಸ ರೂಪ ಪಡೆದುಕೊಂಡಿದ್ದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಅಂದಗೆಡಿಸುವಂತೆ, ಅಲ್ಲಲ್ಲಿ ಭಿತ್ತಿಪತ್ರಗಳನ್ನು ಅಂಟಿಸಲಾಗಿದ್ದು, ಭವ್ಯ ಕಟ್ಟಡದ ಸೌಂದರ್ಯವನ್ನು ಮುಸುಕಾಗಿಸಿದೆ.

‘ಈ ಕಚೇರಿ ಕಟ್ಟಡದ ಗೋಡೆ, ಕಂಬ, ಬಾಗಿಲು, ಕಿಟಕಿ ಮೇಲೆ ಯಾರೂ ಭಿತ್ತಿಪತ್ರ, ಪೋಸ್ಟರ್‌ ಇತ್ಯಾದಿ ಅಂಟಿಸತಕ್ಕದಲ್ಲ. ಈ ಆಜ್ಞೆ ಉಲ್ಲಂಘಿಸಿದ್ದಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು’ ಎಂಬ ಸೂಚನೆ ಇದ್ದರೂ, ಅದನ್ನು ನಿರ್ಲಕ್ಷಿಸಿ ಪೋಸ್ಟರ್‌ ಅಂಟಿಸಲಾಗಿದೆ.

ಕಚೇರಿಯ ಕಂಬಗಳು, ಕಟ್ಟಡದ ಪೂರ್ವ, ಪಶ್ಚಿಮ ಹಾಗೂ ಉತ್ತರ ದಿಕ್ಕಿಗಿರುವ ಭಾಗದಲ್ಲೂ, ಮನಸೋ ಇಚ್ಛೆ ಪೋಸ್ಟರ್‌ ಅಂಟಿಸಿರುವುದು ಜಿಲ್ಲಾಧಿಕಾರಿ ಅವರ ಅದೇಶವನ್ನೇ ಅಣಕ ಮಾಡಿದಂತಿದೆ.

ಸುಮಾರು ಎರಡೂವರೆ ವರ್ಷದ ಹಿಂದೆ ಸಾವಿರಾರು ರೂ ವೆಚ್ಚ ಮಾಡಿ, ಜಿಲ್ಲಾಧಿಕಾರಿ ಕಚೇರಿಯ ಕಟ್ಟಡಕ್ಕೆ ಹೊಸ ಮೆರಗು ನೀಡಲಾಗಿತ್ತು. ಕಪ್ಪು ಬಣ್ಣಕ್ಕೆ ತಿರುಗಿದ್ದಂತಹ ಕಟ್ಟಡದ ಕಲ್ಲುಗಳಿಗೆ ಪಾಲಿಶ್‌ ಮಾಡಲಾಗಿತ್ತು. ಇದಕ್ಕಾಗಿ, ಹತ್ತಾರು ಕಾರ್ಮಿಕರು ಹಗಲು–ರಾತ್ರಿ ದುಡಿದಿದ್ದರು.

ಹೀಗೆ, ಹತ್ತಾರು ದಿನ ದುಡಿದು ಹೊಳಪು ನೀಡಿದ್ದ ಕಟ್ಟಡಕ್ಕೆ ಹತ್ತೇ ನಿಮಿಷದಲ್ಲಿಯೇ ‘ಪೋಸ್ಟರ್‌್ಸ್‌’ ಎಂಬ ಕೊಳಕು ಮೆತ್ತಲಾಗಿದೆ. ಇದರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ? ದಂಡ ವಿಧಿಸಲಾಗಿದೆಯೇ? ಎಂಬ ಪ್ರಶ್ನೆಗೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಯಿಂದ ಯಾವುದೇ ಉತ್ತರ ಸಿಗುವುದಿಲ್ಲ.

ಶಿಕ್ಷೆ ಅಥವಾ ದಂಡ ಹಾಕುವ ಮಾತಿರಲಿ, ಕನಿಷ್ಠ ಪೋಸ್ಟರ್‌್ಸ್‌ ಅನ್ನಾದರೂ ಏಕೆ ತೆಗೆಸಿಲ್ಲ? ಎಂದು ಪ್ರಶ್ನಿಸಿದರೆ, ಅದಕ್ಕೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುವುದಿಲ್ಲ.

ಅಂದಹಾಗೆ, ಈ ಕಟ್ಟಡದಲ್ಲೇ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಅವರೂ ಕೆಲಸ ನಿರ್ವಹಿಸುತ್ತಾರೆ. ಪೂರ್ವ ಮತ್ತು ಉತ್ತರ ದಿಕ್ಕಿನ ದ್ವಾರದ ಮೂಲಕವೇ ಬಹುತೇಕ ವೇಳೆ ಇವರು ಕಚೇರಿಗೆ ಬರುತ್ತಾರೆ. ಇವರ ಕಣ್ಣಿಗೂ ಬಿದ್ದಿಲ್ಲವೇ? ಕ್ರಮ ಏಕೆ ತೆಗೆದುಕೊಂಡಿಲ್ಲ? ಎನ್ನುವ ಸಾರ್ವಜನಿಕರ ಪ್ರಶ್ನೆಗಳಿಗೆ ಇದೇ ಪೋಸ್ಟರ್‌್ಸ ಉತ್ತರ ಎಂಬಂತಿವೆ.

ಸರ್ಕಾರಿ ಕಟ್ಟಡ, ಕಾಂಪೌಂಡ್‌ಗಳ ಮೇಲೆ ಭಿತ್ತಿಪತ್ರ ಅಂಟಿಸುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಐ.ನಾ. ರಾವ್‌, ‘ಸರ್ಕಾರಿ ಕಟ್ಟಡಗಳ ಮೇಲೆ ಪೋಸ್ಟರ್‌ ಅಂಟಿಸಿ ವಿರೂಪಗೊಳಿಸುವುದು ಸರಿಯಲ್ಲ. ತಮ್ಮ ಮನೆಯ ಮೇಲೂ ಹೀಗೆ ಮಾಡುತ್ತಾರೆಯೇ?. ಸರ್ಕಾರಿ ಕಟ್ಟಡಗಳು ಸಾರ್ವಜನಿಕ ಆಸ್ತಿಯೇ, ವಿನಾ ಸ್ವಂತ ಆಸ್ತಿ ಅಲ್ಲ, ವಿರೂಪ ಮಾಡಬಾರದೆನ್ನುವ ಎಚ್ಚರಿಕೆ ಇರಬೇಕು. ಈ ಬಗೆಗೆ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಜಿಲ್ಲಾಧಿಕಾರಿ ಕಚೇರಿ ಕಟ್ಟಡವೇ ಹೀಗಿರಬೇಕಾದರೆ, ಉಳಿದ ಸರ್ಕಾರಿ ಕಟ್ಟಡಗಳ ಬಗೆಗೆ ಹೇಳುವಂತೆಯೇ ಇಲ್ಲ. ಆಜ್ಞೆ ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲವೇ ಕಟ್ಟಡದ ಮೇಲೆ ಬರೆದಿರುವ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ‘ಪ್ರಕಟಣೆ’ಯನ್ನು ಅಳಿಸಿ ಹಾಕಬೇಕು’ ಎಂದು ತೀಷ್ಣವಾಗಿ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT