ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸರ್ಗಿಕ ಕೃಷಿ; ಸ್ವಾವಲಂಬಿ ಬದುಕಿಗೆ ರಹದಾರಿ

ಕೃಷಿ ಖುಷಿ
Last Updated 20 ಫೆಬ್ರುವರಿ 2014, 6:40 IST
ಅಕ್ಷರ ಗಾತ್ರ

ಕೃಷ್ಣರಾಜಪೇಟೆ: ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಕಬ್ಬು ಬೆಳೆ ಬೆಳೆಯುವುದು. ಅದರೊಂದಿಗೆ ಮಿಶ್ರ ಬೆಳೆಗಳಾಗಿ ಅಲಸಂದೆ, ಹಸಿ ಮೆಣಸಿನಕಾಯಿ, ಈರುಳ್ಳಿಯಂತಹ ಬೆಳೆಗಳನ್ನು ಬೆಳೆಯುವ ಮೂಲಕ ಇಲ್ಲೊಬ್ಬ ರೈತರು ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ.

ನೈಸರ್ಗಿಕ ಕೃಷಿಯಿಂದಲೂ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ತೋರಿಸಿದ್ದಾರೆ ತಾಲ್ಲೂಕಿನ ಸಿಂಧಘಟ್ಟದ ರೈತ ಎಸ್‌.ಜೆ. ಮುದ್ದುಕುಮಾರ್.

ತಮ್ಮ ಪೂರ್ವಿಕರ ಕಾಲದಿಂದಲೂ ರೂಢಿಯಲ್ಲಿದ್ದ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನೇ ಅವಲಂಬಿಸಿದ್ದ ರೈತ ಮುದ್ದುಕುಮಾರ್ ಅವರು, ಕಳೆದ 7– 8 ವರ್ಷಗಳಿಂದ ನೈಸರ್ಗಿಕ ಕೃಷಿಯತ್ತ ಒಲವು ತೋರಿಸಿದ್ದಾರೆ. ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಸಂಪೂರ್ಣ ಕೈಬಿಟ್ಟಿದ್ದು, ಸ್ವಾವಲಂಬಿ ಬದುಕು ಸಾಗಿಸಲು ನೈಸರ್ಗಿಕ ಕೃಷಿಯಿಂದ ಮಾತ್ರ ಸಾಧ್ಯ ಎಂಬ ನಂಬಿಕೆ ಮುಂದಡಿ ಇಟ್ಟಿದ್ದಾರೆ. ಇವರ ನಂಬಿಕೆ ಸುಳ್ಳಾಗಿಲ್ಲ.

ಮೊದಲಿಗೆ ಅರ್ಧ ಎಕರೆ ಭೂಮಿಯಲ್ಲಿ ಕಬ್ಬು ನೆಟ್ಟ ಇವರು, ತೆನೆ (ಮೊದಲ) ಬೆಳೆಯಲ್ಲೇ 24 ಟನ್‌ ಕಬ್ಬು ಬೆಳೆದಿದ್ದಾರೆ. ಪ್ರಸ್ತುತ 5ನೇ ಕೂಳೆ ಬೆಳೆಯುತ್ತಿದ್ದು, ಈ ಬಾರಿಯೂ ಸಹ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.

ಸಾಮಾನ್ಯವಾಗಿ ರೈತರು ಕಬ್ಬಿನ ನಾಟಿಯನ್ನು ಪ್ರತಿ 1.5 ರಿಂದ 2 ಅಡಿ ಅಂತರದಲ್ಲಿ ನೆಟ್ಟರೆ, ಇವರು 6 ಅಡಿ  ಅಂತರದಲ್ಲಿ ನೆಟ್ಟಿದ್ದಾರೆ.  ಇದರಿಂದ ಕಬ್ಬಿನ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಗಾಳಿ, ಬೆಳಕು ದೊರೆಯುತ್ತದೆ. ಬೆಳೆಯೂ ಉತ್ತಮವಾಗಿ ಬರುತ್ತದೆ. ಒಂದೇ ಕಣ್ಣು ಇರುವ ಬಿತ್ತನೆ ಬೀಜವನ್ನು (ತೊಂಡೆ) ಬೀಜಾಮೃತದಿಂದ ಬೀಜೋಪಚಾರ ಮಾಡಿ ನೆಡುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕವಲುಗಳು ಬರುವುದರಿಂದ ಇಳುವರಿಯೂ ಹೆಚ್ಚುತ್ತದೆ ಎನ್ನುತ್ತಾರೆ.

ಕಬ್ಬಿನ ಸಾಲುಗಳ ನಡುವಿನ ಸ್ಥಳದಲ್ಲಿ ಅಲಸಂದೆ, ಹಸಿಮೆಣಸಿನಕಾಯಿ, ಈರುಳ್ಳಿಯಂತಹ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆದುಕೊಳ್ಳುತ್ತಾರೆ. ಈ ಬೆಳೆಗಳು ಭೂಮಿಯಲ್ಲಿನ ಪೋಷಕಾಂಶಗಳು ಬಿಸಿಲಿನ ಝಳಕ್ಕೆ ಹಾಳಾಗದಂತೆ ಹಸಿರು ಹೊದಿಕೆಯಾಗಿ (ಮಲ್ಚಿಂಗ್‌) ಸಹಕರಿಸುತ್ತವೆ. ಇವುಗಳಿಂದ ಫಸಲು ಪಡೆದ ನಂತರ ಭೂಮಿಯಲ್ಲಿಯೇ ಬಿಡುವುದರಿಂದ ಗೊಬ್ಬರವೂ ಆಗುತ್ತದೆ. ಈ ಉಪ ಬೆಳೆಗಳಿಂದ ಕಬ್ಬಿನ ಬೇಸಾಯಕ್ಕೆ ಅಗತ್ಯವಾದ ಖರ್ಚನ್ನು ಭರಿಸಲು ಸಾಧ್ಯವಾಗಿ, ಕಬ್ಬಿನ ಹಣ ಪೂರ್ಣವಾಗಿ ಉಳಿಯುತ್ತಿದೆ ಎನ್ನುತ್ತಾರೆ ಇವರು.

ಜೀವಾಮೃತ ಹಾಗೂ ಮನೆ ಗೊಬ್ಬರ ಬಳಸುತ್ತಾರೆ. ಹುಲ್ಲು, ಭತ್ತದ ಜೊಳ್ಳು, ಕಬ್ಬಿನ ತರಗು, ಎಳ್ಳಿನ ಕಡ್ಡಿ ಮತ್ತಿತರ ಒಣ ಕಸದಿಂದ ಹೊಲಕ್ಕೆ ಹೊದಿಕೆ ನೀಡಿದ್ದಾರೆ. ಇದು ಜೀವಾಮೃತದ ಮೂಲಕ ಭೂಮಿಗೆ ಸೇರುವ ಸೂಕ್ಷ್ಮಾಣು ಜೀವಿಗಳನ್ನು ಸಂರಕ್ಷಿಸುತ್ತದೆ. ಅಲ್ಲದೆ ಭೂಮಿಯಲ್ಲಿನ ತೇವಾಂಶ ಉಳಿಯಲು ಸಹಾಯಕವಾಗಿದೆ. ಇದೇ ವಿಧಾನದಲ್ಲಿ ಬಾಳೆ ಮತ್ತು ಭತ್ತದ ಬೆಳೆಯನ್ನೂ ಬೆಳೆದು ಯಶಸ್ವಿಯಾಗಿದ್ದಾರೆ.

‘ಸುಭಾಷ್‌ ಪಾಳೇಕರ್‌ ಅವರ ಶೂನ್ಯ ಬಂಡವಾಳದ ಪದ್ಧತಿಯಿಂದ ಭೂಮಿಯ ಫಲವತ್ತತೆ ಹೆಚ್ಚಲು ಸಾಧ್ಯ. ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ತಾಳ್ಮೆ ಮುಖ್ಯ. ಪರಿಶ್ರಮವೂ ಬೇಕು. ಈ ಪದ್ಧತಿಯಲ್ಲಿ ಬೆಳೆದ ವಸ್ತುಗಳಿಗೆ ಹೆಚ್ಚಿನ ಬೆಲೆ ಹಾಗೂ ಬೇಡಿಕೆ ಎರಡೂ ಇದೆ. ಒಂದಷ್ಟು ಶ್ರಮಪಟ್ಟರೆ ಉತ್ತಮ ಲಾಭ ಕಟ್ಟಿಟ್ಟಬುತ್ತಿ’ ಎನ್ನುತ್ತಾರೆ ಮುದ್ದುಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT