ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟ ಗ್ರಾಮದಲ್ಲಿ ದೊಡ್ಡ ದೊಡ್ಡ ಸಮಸ್ಯೆ!

Last Updated 31 ಜುಲೈ 2013, 10:07 IST
ಅಕ್ಷರ ಗಾತ್ರ

ಕೃಷ್ಣರಾಜಪೇಟೆ: ತಾಲ್ಲೂಕು ಕೇಂದ್ರದಿಂದ 20 ಕಿ.ಮೀ. ದೂರದಲ್ಲಿರುವ, ಜಿಲ್ಲೆಯ ಗಡಿ ಗ್ರಾಮವಾದ ಹಂಗರಮುದ್ದನಹಳ್ಳಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪರಿಣಾಮ ಸಮರ್ಪಕ ಸಾರಿಗೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಹಲವಾರು ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ.

650 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಮತ್ತು ನೀರು ಬಳಕೆದಾರರ ಸಹಕಾರ ಸಂಘಗಳು ಇವೆ. ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಅಳವಡಿಸಿರುವ ಕಿರು ನೀರಾವರಿ ಯೋಜನೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೊಳವೆ ಬಾವಿಗಳಿದ್ದರೂ ನಿಸ್ಪ್ರಯೋಜಕವಾಗಿವೆ. ಪರಿಣಾಮ ಗ್ರಾಮದ ಜನರು ನೀರಿಗಾಗಿ ಪರದಾಡುವಂತಾಗಿದೆ.

ಗ್ರಾಮದ ಬಳಿಯೇ ರಾಜೀವ್‌ಗಾಂಧಿ ಕೇಂದ್ರೀಯ ಕುಡಿಯುವ ನೀರು ಸರಬರಾಜು ಯೋಜನೆಯ ಕೇಂದ್ರವಿದೆ. ಆದರೆ, ತಾಂತ್ರಿಕ ಕಾರಣಗಳಿಂದ ಗ್ರಾಮಕ್ಕೆ ನೀರು ಪೂರೈಸಲಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಗ್ರಾಮದ ಮುಖ್ಯ ರಸ್ತೆಯು ಅಕ್ಕಿಹೆಬ್ಬಾಳು ಹಾಗೂ ಬೀರವಳ್ಳಿ ಮೂಲಕ ತಾಲ್ಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಆ ರಸ್ತೆಯೂ ಸಂಚಾರಕ್ಕೆ ಯೋಗ್ಯವಾಗಿಲ್ಲ. ರಸ್ತೆ ಡಾಂಬರೀಕರಣ ಕಾಣದ ಬಹು ವರ್ಷಗಳೇ ಕಳೆದುಹೋಗಿವೆ. ಉಳಿದಿರುವ ಗ್ರಾಮದ ಯಾವ ರಸ್ತೆಯೂ ಡಾಂಬರು ಕಂಡೇ ಇಲ್ಲ.

ಚರಂಡಿಗಳು ಹಾಳಾಗಿರುವುದರಿಂದ ಅಲ್ಲಿನ ನೀರು ರಸ್ತೆಯ ಬದಿಯಲ್ಲಿಯೇ ಸಂಗ್ರಹವಾಗಿದೆ. ಸೊಳ್ಳೆಗಳ ತಾಣವಾಗಿದ್ದು, ರೋಗ ರುಜಿನಗಳ ಹರಡುವಿಕೆಗೆ ಕಾರಣವಾಗಿದೆ.

ಸಂಚಾರ ಸೌಲಭ್ಯದ ಸಮಸ್ಯೆಯೂ ಇಲ್ಲಿದ್ದು, ತಾಲ್ಲೂಕು ಕೇಂದ್ರ ತಲುಪಲು ನೇರವಾದ ಬಸ್ ವ್ಯವಸ್ಥೆಯಿಲ್ಲ. ಗ್ರಾಮಕ್ಕೆ ನಿತ್ಯ ಕೇವಲ ಎರಡು ಬಸ್‌ಗಳು ಮಾತ್ರ ಬರುತ್ತವೆ. ಅವೂ ಸರಿಯಾದ ಸಮಯಕ್ಕೆ ಆಗಮಿಸದ್ದರಿಂದ ಶಾಲಾ, ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ದೂರುತ್ತಾರೆ ಗ್ರಾಮಸ್ಥರು.

ಮಂಡ್ಯ, ಹಾಸನ ಮತ್ತು ಮೈಸೂರು ಜಿಲ್ಲೆಗಳ ಗಡಿಭಾಗದಲ್ಲಿದೆ. ಭೌಗೋಳಿಕವಾಗಿ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿದ್ದರೂ, ವ್ಯಾವಹಾರಿಕವಾಗಿ ಹೊಳೆನರಸೀಪುರ ಮತ್ತು ಭಾವನಾತ್ಮಕವಾಗಿ ಕೃಷ್ಣರಾಜನಗರ ತಾಲ್ಲೂಕುಗಳ ಜತೆಗೆ ಅಲ್ಲಿನ ಜನರು ಸಂಬಂಧ ಹೊಂದಿದ್ದಾರೆ.

ಗ್ರಾಮದಲ್ಲಿ ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಗ್ರಾಮದ ಬಳಿ ಇರುವ ಹೇಮಾವತಿ ನಾಲೆಯಲ್ಲಿ ಹೂಳಿದ್ದು, ಅದನ್ನು ಸ್ವಚ್ಛಗೊಳಿಸಬೇಕು ಎಂಬ ಆಗ್ರಹ ಗ್ರಾಮಸ್ಥರದ್ದಾಗಿದೆ.

ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕು ಎಂಬುದು ಅವರ ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT