ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರ ಪೂರಕ

Last Updated 7 ಮೇ 2012, 7:45 IST
ಅಕ್ಷರ ಗಾತ್ರ

ಮದ್ದೂರು: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತರುವಲ್ಲಿ ಬೇಸಿಗೆ ಶಿಬಿರಗಳು ಪೂರಕ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಮಚಂದ್ರು ಶನಿವಾರ ತಿಳಿಸಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶನಿವಾರ ಆರಂಭಗೊಂಡ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗಾಗಿ ಸರ್ಕಾರವು ಬೇಸಿಗೆ ಶಿಬಿರ ಆಯೋಜಿಸಿದೆ. ಈ ಶಿಬಿರದಿಂದ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಅನಾವರಣಗೊಳ್ಳಲಿದೆ ಎಂದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಂತರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಬಾಲಭವನ ಸೊಸೈಟಿ ಮೂಲಕ ಒಟ್ಟು 15ದಿನಗಳ ಕಾಲ ಈ ಶಿಬಿರ ಸಂಘಟಿಸಲಾಗಿದ್ದು, ಶಿಬಿರದಲ್ಲಿ ಚಿತ್ರಕಲೆ, ಜೇಡಿ ಮಣ್ಣಿನ ರಚನೆ ಸೇರಿದಂತೆ ಪಠ್ಯಕ್ಕೆ ಪೂರಕವಾದ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದರು.

ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಬಸವರಾಜು, ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಐಸಾಕ್, ನಾಗರಾಜು, ಮೇಲ್ವಿಚಾರಕಿ ರಾಜೇಶ್ವರಿ, ಕಚೇರಿ ಅಧೀಕ್ಷಕ ಚಿಕ್ಕಪುಟ್ಟಯ್ಯ, ಮಾದಯ್ಯ ಇದ್ದರು.

ಒತ್ತುವರಿ ತೆರವು: ಭರವಸೆ
ಮದ್ದೂರು: ತಾಲ್ಲೂಕಿನ ನಗರಕೆರೆ ಸ್ಮಶಾನ ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಶೀಘ್ರವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಒತ್ತುವರಿ ತೆರವಿಗೆ ಮುಂದಾಗುವುದಾಗಿ ತಹಶೀಲ್ದಾರ್ ನಾಗರಾಜು ಶನಿವಾರ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲ್ಲೂಕಿನ ಯಾವುದೇ ಹಳ್ಳಿಗಳಲ್ಲಿ ಸರ್ಕಾರಿ ಗೋಮಾಳ, ಕೆರೆ, ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡಿದ್ದರೆ ಆ ಕುರಿತು ಸಾರ್ವಜನಿಕರು ದೂರು ಸಲ್ಲಿಸಬೇಕು ಎಂದು ವಿನಂತಿಸಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ವಿವಿಧ ಸಮಸ್ಯೆಗಳ ಕುರಿತು 68ಅರ್ಜಿಗಳನ್ನು ಸಲ್ಲಿಸಿದರು. ಅದರಲ್ಲಿ 32 ಕಂದಾಯ ಇಲಾಖೆ, 8 ಕುಡಿಯುವ ನೀರಿನ ಸಮಸ್ಯೆ, 3 ವಿದ್ಯುತ್ ಸಂಪರ್ಕ ಸಮಸ್ಯೆ ಇನ್ನುಳಿದಂತೆ ವಿವಿಧ ಮಾಸಾಶನಗಳ ಮಂಜೂರಾತಿಗಾಗಿ ಜನರು ಅರ್ಜಿ ಸಲ್ಲಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಶಮಂತಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಂತರಾಜು, ಪುರಸಭಾ ಮುಖ್ಯಾಧಿಕಾರಿ ಚಿಕ್ಕನಂಜಯ್ಯ, ರೇಷ್ಮೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುಷ್ಮಾ, ಶಿರಸ್ತೇದಾರ್‌ಗಳಾದ ಕರಿಯಪ್ಪ, ಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT