ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ಕ್ರಮಕ್ಕೆ ಕಟ್ಟುನಿಟ್ಟಿನ ಸೂಚನೆ

ಕಾವೇರಿ ನದಿ ಅಂಚಿನ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ: ಪರಿಶೀಲನೆ
Last Updated 5 ಆಗಸ್ಟ್ 2013, 6:53 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ:  ಕಾವೇರಿ ನದಿ ಪಾತ್ರದಲ್ಲಿರುವ ಪಟ್ಟಣ ಹಾಗೂ ತಾಲ್ಲೂಕಿನ ಗ್ರಾಮಗಳಿಗೆ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಸ್ಥಳೀಯ ಅಧಿಕಾರಿಗಳ ಜತೆ ಭಾನುವಾರ ಭೇಟಿ ನೀಡಿ ಅವಘಡ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.

  ಇಲ್ಲಿನ ಪ್ರವಾಸಿ ಮಂದಿರ, ವೆಲ್ಲೆಸ್ಲಿ ಸೇತುವೆ, ಸ್ನಾನಘಟ್ಟ, ರಾಂಪುರ ಸಂಪರ್ಕ ರಸ್ತೆ ಇತರೆಡೆ ಅವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ರಾಂಪುರ ಸೇತುವೆ ಮೇಲೆ ವಾಹನ ಸಂಚಾರ ಅಪಾಯಕಾರಿಯಾಗಿದ್ದು, ಅನಾಹುತ ಘಟಿಸದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು. ನದಿಯ ಹತ್ತಿರಕ್ಕೆ ಜನರು ತೆರಳದಂತೆ ನಿರ್ಬಂಧಿಸಬೇಕು. ಜನದಟ್ಟಣೆ ಇರುವ ಸ್ಥಳಗಳಲ್ಲಿ ನುರಿತ ಈಜುಗಾರರನ್ನು ನಿಯೋಜಿಸಬೇಕು. ದೋಣಿ, ಹಗ್ಗ, ಜಾಕೆಟ್ ಹಾಗೂ ಟಾರ್ಚ್‌ಗಳನ್ನು ಸಿದ್ದ ಮಾಡಿ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.

ಜಲಾಶಯದಿಂದ ಇನ್ನೂ ಹೆಚ್ಚು ನೀರು ಹರಿದರೆ ಆಗಬಹುದಾದ ಬೆಳೆ ಇತರ ನಷ್ಟಗಳ ಕುರಿತು ಅಂದಾಜು ಮಾಡಲಾಗುವುದು. ನದಿ ಅಂಚಿನಲ್ಲಿ ಜಮೀನು ಉಳ್ಳ ರೈತರು ಜಮೀನಿಗೆ ತೆರಳದಂತೆ ಎಚ್ಚರ ವಹಿಸಲಾಗಿದೆ. ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರನ್ನು ನಿಯೋಜಿಸಲಾಗಿದೆ. ಅನಾಹುತ ಘಟಿಸಿದರೆ ಜನರು ತಾಲ್ಲೂಕು ಆಡಳಿತಕ್ಕೆ ತಕ್ಷಣ ಮಾಹಿತಿ ನೀಡಬೇಕು ಎಂದು ಪ್ರಭಾರ ತಹಶೀಲ್ದಾರ್ ಸುರೇಶ್ ಹೇಳಿದರು. ಇನ್‌ಸ್ಪೆಕ್ಟರ್ ಕೆ.ಆರ್. ಪ್ರಸಾದ್, ಕಂದಾಯ ನಿರೀಕ್ಷಕರಾದ ಎ.ಎಂ. ಶಿವರಾಜು, ಪ್ರಸನ್ನ ಇತರರು ಇದ್ದರು.
ಕಾವೇರಿ ದಡದಲ್ಲಿ ಜನವೋ.. ಜನ!

ಶ್ರೀರಂಗಪಟ್ಟಣ:  ಶ್ರೀರಂಗಪಟ್ಟಣದಲ್ಲಿ ಭಾನುವಾರ ನದಿ ದಂಡೆಯ ಉದ್ದಕ್ಕೂ ಜನವೋ ಜನ. ಸೋಪಾನಕಟ್ಟೆ, ವೆಲ್ಲೆಸ್ಲಿ ಸೇತುವೆ, ಓಬೆಲಿಸ್ಕ್, ಪಶ್ಚಿಮ ವಾಹಿನಿ, ನಿಮಿಷಾಂಬ ದೇಗುಲ, ಗೋಸಾಯಿಘಾಟ್, ಸಂಗಮ ಸ್ಥಳಗಳ ಬಳಿ ಜನ ಜಾತ್ರೆಯೇ ನೆರೆದಿತ್ತು.

  ರಜೆಯ ದಿನವಾದ್ದರಿಂದ ಪ್ರವಾಸಿ ತಾಣವಾದ ಇಲ್ಲಿಗೆ ಪ್ರವಾಸಿಗರ ದಂಡೇ ಆಗಮಿಸಿತ್ತು. ನದಿ ಪಾತ್ರದ ಉದ್ದಕ್ಕೂ ನೀರಿನ ಹರಿವು ಮತ್ತು ಹರವು ನೋಡಲು ಸಂಜೆ ವರೆಗೆ ಜನ ಬರುತ್ತಲೇ ಇದ್ದರು.

ಕಾರು, ಬಸ್, ಆಟೋ, ಬೈಕ್‌ಗಳಲ್ಲಿ ಬಂದವರು ಕಾವೇರಿಯ ವನಪು, ವಯ್ಯಾರ ನೋಡುತ್ತ ಖುಷಿ ಪಟ್ಟರು. ನದಿಯ ಸನಿಹಕ್ಕೆ ತೆರಳಲು ಅವಕಾಶ ಇಲ್ಲದ ಕಾರಣ ದೂರದಿಂದಲೇ ಬಾಗಿ, ಬಳುಕಿ ಹರಿಯುತ್ತಿರುವ ಕಾವೇರಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಪ್ರವಾಸಿಗರು ನದಿಗೆ ಅಭಿಮುಖವಾಗಿ ನಿಂತು ಕುಟುಂಬನ ಸದಸ್ಯರು, ಸ್ನೇಹಿತರ ಜತೆ ಫೋಟೋ ತೆಗೆಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.

ನಾಕಾಬಂಧಿ: ಉಕ್ಕಿ ಹರಿಯುತ್ತಿರುವ ನದಿಯನ್ನು ವೀಕ್ಷಿಸಲು ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾನುವಾರದಿಂದ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ನದಿ ಬಳಿ ಜನರು ತೆರಳದಂತೆ ಪೊಲೀಸರು ತಡೆಯುತ್ತಿದ್ದಾರೆ. ವೆಲ್ಲೆಸ್ಲಿ ಸೇತುವೆಯ ಮೇಲೆ ಜನ ಹಾಗೂ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಸ್ನಾನಘಟ್ಟಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಿದ್ದು ಜನರ ಚಲನವಲನದ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ನೀರು: ಶನಿವಾರ ರಾತ್ರಿ ನದಿಯಲ್ಲಿ ಒಂದು ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದಿದ್ದು, ಮತ್ತಷ್ಟು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮಂಟಪಗಳು, ದೇಗುಲಗಳು ಜಲಾವೃತವಾಗಿವೆ. ಸಾಯಿಬಾಬಾ ಆಶ್ರಮದ ಒಳಕ್ಕೆ ನೀರು ಹರಿದಿದೆ. ನಿಮಿಷಾಂಬ ದೇಗುಲದ ಬಳಿ ಮೆಟ್ಟಿಲುಗಳು ಮುಳುಗಡೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT