ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಹೊಳಲು; ಸಮಸ್ಯೆಗಳ ಮಡಿಲು

ಅಕ್ಷರ ಗಾತ್ರ

ಕೃಷ್ಣರಾಜಪೇಟೆ: ಶುದ್ಧ ಕುಡಿಯವ ನೀರಿನ ಅಸಮರ್ಪಕ ಪೂರೈಕೆ, ಗ್ರಾಮ ನೈರ್ಮಲ್ಯ ಕಾಪಾಡುವಲ್ಲಿ ಸಿಬ್ಬಂದಿ ನಿರಾಸಕ್ತಿ, ಸರಾಗವಾಗಿ ಹರಿಯದ ಚರಂಡಿಗಳು... ಇವು ತಾಲ್ಲೂಕಿನ ಹೊಸಹೊಳಲು ಗ್ರಾಮದ ದಲಿತ ಕಾಲೊನಿಗೆ ಕಾಲಿಟ್ಟ ತಕ್ಷಣ ಅನಾವರಣಗೊಳ್ಳುವ ಸಮಸ್ಯೆಗಳು.

ಪುರಸಭೆಯ ವ್ಯಾಪ್ತಿಗೆ ಸೇರುವ ಈ ಗ್ರಾಮವು ಒಂದು ಕಾಲದಲ್ಲಿ ನೇಯ್ಗೆಗೆ ಹೆಸರಾಗಿತ್ತು. ಇತಿಹಾಸ ಪ್ರಸಿದ್ಧ ಹೊಯ್ಸಳ ಶೈಲಿಯ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯವೂ ಇಲ್ಲಿದೆ. ಇಂತಹ ಪ್ರಮುಖ ಗ್ರಾಮದಲ್ಲಿ ಹತ್ತು ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ಕಳೆದ ಹಲವು ದಿನಗಳಿಂದ ಇಲ್ಲಿನ ದಲಿತ ಕಾಲೊನಿಗೆ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ. ಕುಡಿಯುವ ನೀರಿನ ಪೈಪ್‌ ಒಡೆದುಹೋಗಿ ಚರಂಡಿಯೊಂದರ ಕೊಳಚೆ ನೀರು ಅದರಲ್ಲಿ ಸೇರುತ್ತಿದೆ. ಇದರಿಂದ ಹಲವು ರೋಗರುಜಿನಗಳು ಹರಡುತ್ತಿರುವುದು ಸಹ ಕಂಡುಬಂದಿದೆ. ಈ ಬಗ್ಗೆ ಸ್ವತಃ ಸ್ಥಳೀಯ ಪುರಸಭೆ ಸದಸ್ಯ ನಂಜುಂಡಯ್ಯ ದುರಸ್ತಿ ಮಾಡುವಂತೆ ಹಲವಾರು ಬಾರಿ ಒತ್ತಾಯಿಸಿದ್ದು ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರೇ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಸಮೀಪದ ಸರ್ಕಾರಿ ಆಯುರ್ವೇದ ಆಸ್ಪತ್ರೆ ಸುತ್ತಮುತ್ತ ಅನೈರ್ಮಲ್ಯ ತಾಂಡವವಾಡುತ್ತಿದೆ. ಆಸ್ಪತ್ರೆ ತ್ಯಾಜ್ಯ, ಕುಡಿದು ಬಿಸಾಡಿದ ಟೀ ಲೋಟಗಳು ಸೇರಿದಂತೆ ಕಸದ ರಾಶಿಯೇ ಇಲ್ಲಿ ಚೆಲ್ಲಾಡುತ್ತಿದೆ. ಈ ಭಾಗದಲ್ಲಿ ಇರುವ ಚರಂಡಿ ಕಸಕಡ್ಡಿಗಳಿಂದ ಕಟ್ಟಿಕೊಂಡು ನಾರುತ್ತಿದೆ. ಕುಡಿಯುವ ನೀರಿಗಾಗಿ ಹಾಕಿರುವ ಕೊಳವೆಬಾವಿಗಳು ಕೆಟ್ಟು ನಿಂತಿವೆ. ಕಿರು ನೀರು ಸರಬರಾಜು ಯೋಜನೆಯಲ್ಲಿ ನಿರ್ಮಾಣಗೊಂಡಿರುವ ಟ್ಯಾಂಕ್‌ ಉದ್ಘಾಟನೆಗೊಳ್ಳದೆ ನಿಷ್ಪ್ರಯೋಜಕವಾಗಿದೆ. ಕೆಟ್ಟುಹೋದ ಬೀದಿದೀಪಗಳ ದುರಸ್ತಿಗೂ ಸಂಬಂಧಿಸಿದ ಸಿಬ್ಬಂದಿ ಆಸಕ್ತಿ ತೋರುವುದಿಲ್ಲ ಎಂಬುದು ಸ್ಥಳೀಯರ ಆರೋಪ.

ತಕ್ಷಣ ಇಲ್ಲಿನ ನಾಗರಿಕರ ಸಮಸ್ಯೆಗಳಿಗೆ ಪರಿಹಾರ ದೊರಕಲಿ. ನೈರ್ಮಲ್ಯ ಕಾಪಾಡುವ ಮೂಲಕ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಸ್ಥಳೀಯ ಆಡಳಿತ ಮುಂದಾಗಲಿ ಎಂಬುದು ಎಲ್ಲರ ಅಪೇಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT