ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ವೈಪರೀತ್ಯ: ಮಾವಿನ ಮಿಡಿಗೆ ಸಂಚಕಾರ, ಇಳುವರಿ ಕುಂಠಿತ

Last Updated 26 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ:‌ ವಸಂತ ಋತು ಬಂತೆಂದರೆ ಸಾಕು ದೂರದ ಅಮೆರಿಕಾದಲ್ಲಿ ನೆಲೆಸಿದವರ ಬಾಯಲ್ಲಿಯೂ ನೀರೂರಿಸುವ ಮಲೆನಾಡಿನ ಅರಸಾಳು ಅಪ್ಪೆ ಮಿಡಿ ಉಪ್ಪಿನಕಾಯಿ ಈ ಬಾರಿ ಹವಾಮಾನ ವೈಪರೀತ್ಯದಿಂದ ಹೊಳೆ ಸಾಲಿನ ಮಾವಿನ ಮಿಡಿ ಶೇ 50ರಷ್ಟು ಇಳುವರಿ ಕುಂಠಿತಗೊಂಡು ಲಕ್ಷಾಂತರ ರೂಪಾಯಿ ವಹಿವಾಟು ಹಿನ್ನಡೆ ಕಂಡಿದೆ.

ಮರದಲ್ಲಿ ನಿರೀಕ್ಷೆಗೂ ಮೀರಿ ಹೂ ಬಿಟ್ಟು ಮಧ್ಯಮ ವರ್ಗದ ಕೃಷಿ ಕಾರ್ಮಿಕರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.
ಅಕಾಲಿಕ ಒಣಹವೆ, ಇಬ್ಬನಿ, ಅಲಿಕಲ್ಲು ಮಳೆಗೆ ಸಿಲುಕಿದ ಹೂವು ಕಮರಿ ಹೋಯಿತು.

ಈ ಭಾಗದ ಕುಮಧ್ವತಿ ಹೊಳೆ ಅಂಚಿನ ದಡದಲ್ಲಿನ ಬಟಾಣಿ ಜಡ್ಡು, ಕೊಳವಂಕ, ಬಸವಾಪುರ, ಗುಳಿಗುಳಿ ಶಂಕರ, ಅಡ್ಡೇರಿ, ಹೊಸಕೊಪ್ಪ, ಅಲುವಳ್ಳಿ , ಸೂಡೂರು, ಗೇಟ್‌ ಹಾಗೂ ಶರಾವತಿ ನದಿ ತಟದ ದಡದ ಸಾಲಿನ ಗವಟೂರು, ಬಿಳಕಿ, ಕೊಡ್ರಿಗೆ, ಮಾವಿನಸರ ಮುಂತಾದ ಸ್ಥಳದಲ್ಲಿ ಸಿಗುವ ಮಾವಿನ ಮಿಡಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಇದನ್ನೇ ನಂಬಿ ಜೀವನ ನಡೆಸುವ ಕುಟುಂಬಗಳು ಇಲ್ಲಿವೆ.

ಹಿಂದೆಲ್ಲ 1000 ಮಿಡಿಗೆ ₹2ರಿಂದ 3 ಸಾವಿರಗಳಿಗೆ ಬಿಕರಿಯಾಗುತ್ತಿದ್ದ ಮಿಡಿ ಮಾವು ದಲ್ಲಾಳಿಗಳ ಕೈಗೆ ಸಿಲುಕಿ ಲೆಕ್ಕದಲ್ಲಿನ ವಂಚನೆ ತಪ್ಪಿಸಲು, ರೈತರು ಇಂದು ಮಾರುಕಟ್ಟೆಯಲ್ಲಿ ಕೆಜಿಗೆ ₹200ರಿಂದ ₹300ರ ವರೆಗೆ ಮಾರಾಟ ಮಾಡುತ್ತಿದ್ದಾರೆ.

ಸರಾಸರಿ ಮಿಡಿ ಒಂದಕ್ಕೆ ₹5ರಿಂದ 6ರವರೆಗೆ ವೆಚ್ಚತಗಲಲಿದೆ. ಅದು ಉಪ್ಪಿನ ಕಾಯಿಯಾಗಿ ಸಿದ್ಧಪಡಿಸಿ ಮಾರುಕಟ್ಟೆಗೆ ಪ್ರವೇಶಿಸುವಾಗ ಸುಮಾರು ₹ 8ರಿಂದ 10 ಬೀಳುತ್ತದೆ ಎನ್ನುವುದೇ ಕಟು ಸತ್ಯ.

ಗ್ರಾಮೀಣ ಭಾಗದಲ್ಲಿ ಜಾಡಿಗೆ ಮಾವಿನ ಮಿಡಿ ಹಾಕಿಡುವ ಪದ್ಧತಿ ಇದೆ. ನೆಂಟರಿಷ್ಟರು ಬಂದಾಗ ಮಿಡಿ ಮಾವು ಇದ್ದಲ್ಲಿ ಊಟ ಹೆಚ್ಚಿಗೆ ಸೇರುತ್ತದೆ ಎಂಬ ವಾಡಿಕೆಯೂ ಇದೆ. ಪ್ರತಿಯೊಬ್ಬರ ಬಾಯಲ್ಲಿ ನೀರೂರಿಸುವ ಈ ಉಪ್ಪಿನಕಾಯಿಯ ರುಚಿ ಮಾತ್ರ ಬಲ್ಲವರೇ ಬಲ್ಲರು.

ತರಹೇವಾರಿ ಮಿಡಿ

ಮಾವಿನ ಮಿಡಿಯಲ್ಲಿಯೂ ವೈವಿಧ್ಯತೆ ಇದೆ. ಇಲ್ಲಿ ಸಿಗುವ ಅರಸಾಳು ಅಪ್ಪೆ, ಗುಂಡಪ್ಪೆ, ಗೋಕರ್ಣ ಅಪ್ಪೆ, ಕರ್ಪೂರ ಅಪ್ಪೆ ಹಾಗೂ ಅಡ್ಡೇರಿ, ಕೋಡ್ರಿಗೆ ಜೀರಿಗೆ ಮಿಡಿಗಳು ಸೇರಿ ಹಲವು ಜಾತಿಯ ಮಿಡಿ ಮಾವು ದೀರ್ಘ ಬಾಳಿಕೆ ಹಾಗೂ ರುಚಿಯಿಂದ ತನ್ನದೆ ಆದ ಹೆಸರಿನಿಂದ ಖ್ಯಾತಿ ಪಡೆದಿವೆ.

ರಿಪ್ಪನ್‌ಪೇಟೆ ಮಾವಿನ ಮಿಡಿ ವಹಿವಾಟಿಗೆ ಹೇಳಿ ಮಾಡಿಸಿದ ಜಾಗ. ಹೊನ್ನಾಳಿ, ನ್ಯಾಮತಿ, ಸವಳಂಗ ಕಡೆಯ ಒಂದಷ್ಟು ಲಂಬಾಣಿಗರು ಮಿಡಿ ಕೀಳುವುದರಲ್ಲಿ ನಿಸ್ಸಿಮರು. ಇವರು ಚಿಕ್ಕಮಗಳೂರು, ಹಾಸನ, ಮೂಡಿಗೆರೆ, ಗೆಂಡೆಹಳ್ಳಿ, ಬಸ್ಕಲ್‌, ಬೇಲೂರು, ಸಕಲೇಶಪುರದಿಂದ ಮಿಡಿಯನ್ನು ತಂದು ‘ಅರಸಾಳು ಮಿಡಿ’ ಎಂದು ಇಲ್ಲಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ಶಿರಸಿ, ಹೊನ್ನಾವರ, ಸಿದ್ದಾಪುರ, ಉಡುಪಿ, ಮಂಗಳೂರು, ಗೋಕರ್ಣ, ಕೊಲ್ಲೂರು, ಬೆಂಗಳೂರು, ಚಿಕ್ಕಮಗಳೂರು, ಬಾಳೆಹೊನ್ನೂರು, ಕಳಸ–ಹೊರನಾಡು ಮೂಡಿಗೆರೆಯ ಜನ ಆ ಮಿಡಿಗಳನ್ನು ದುಬಾರಿ ಬೆಲೆ ತೆತ್ತು ಹೋಗುತ್ತಾರೆ.

ದಿನವೊಂದಕ್ಕೆ ಮಿಡಿ ಇಳಿಸಲು ₹1ಸಾವಿರದಿಂದ ₹ 2ಸಾವಿರದವರೆಗೆ ಪಗಾರ ಪಡೆಯುವ ಇವರು ಮಧ್ಯವರ್ತಿಗಳ ಮೂಲಕ ಮಿಡಿ ಮಾರಾಟಕ್ಕೆ ಅಣಿಯಾಗುತ್ತಾರೆ.

2 ತಿಂಗಳ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುವ ಇಲ್ಲಿ ಸುಮಾರು ₹1ಲಕ್ಷದಿಂದ 2ಲಕ್ಷದವರೆಗೆ ಮಧ್ಯವರ್ತಿಗಳು ಹಣ ಗಳಿಕೆ ಮಾಡುವುದುಂಟು. ಆದರೆ ಈ ಭಾರಿ ಮಾವಿನ ಇಳುವರಿ ಕುಂಠಿತದಿಂದ ಹತಾಶರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT