ಸೋಮವಾರ, ಆಗಸ್ಟ್ 26, 2019
21 °C
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಂ.ಬಿ.ಪಾಟೀಲ ಹೇಳಿಕೆ

ವೃಕ್ಷ ಅಭಿಯಾನ; ಮ್ಯಾರಥಾನ್ ನಾಳೆ

Published:
Updated:
Prajavani

ವಿಜಯಪುರ: ‘ವೃಕ್ಷ ಅಭಿಯಾನ ಪ್ರತಿಷ್ಠಾನ ವತಿಯಿಂದ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ಆ.4ರಂದು ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ’ ಎಂದು ವೃಕ್ಷ ಅಭಿಯಾನ ಪ್ರತಿಷ್ಠಾನದ ರೂವಾರಿ, ಶಾಸಕ ಎಂ.ಬಿ.ಪಾಟೀಲ ಹೇಳಿದರು.

‘ರಾಜಸ್ಥಾನದ ಜೈಸಲ್ಮೇರ್ ಮತ್ತು ಕರ್ನಾಟಕದ ವಿಜಯಪುರ ಜಿಲ್ಲೆಗಳು ಅತ್ಯಂತ ಕಡಿಮೆ ಅರಣ್ಯ ಪ್ರದೇಶ ಹೊಂದಿವೆ. ರಾಜ್ಯ ಮತ್ತು ರಾಷ್ಟ್ರದ ಸರಾಸರಿ ಅರಣ್ಯ ಪ್ರದೇಶ ಶೇ 22ರಷ್ಟಿದ್ದರೆ, ವಿಜಯಪುರದ ಸರಾಸರಿ ಶೇ 0.17ರಷ್ಟು ಮಾತ್ರ. ಇದನ್ನು ಹೆಚ್ಚಿಸುವ ಉದ್ದೇಶದಿಂದ ಕೋಟಿ ವೃಕ್ಷ ಅಭಿಯಾನ ಆರಂಭಿಸಲಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಜಿಲ್ಲೆಯಲ್ಲಿ ಇದುವರೆಗೆ 60 ಲಕ್ಷ ಸಸಿಗಳನ್ನು ನೆಡಲಾಗಿದೆ. ಈ ವರ್ಷ 25 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಕೆಬಿಜೆಎಲ್‌ಎಲ್‌ನಲ್ಲಿ ಸಸಿಗಳನ್ನು ಬೆಳೆಸಿ, ಜನರಿಗೆ ಕೊಡಲಾಗುತ್ತಿದೆ. ಗಿಡ–ಮರಗಳ ಸಂಖ್ಯೆ ಹೆಚ್ಚಾದರೆ ಉಷ್ಣಾಂಶ ಕಡಿಮೆಯಾಗುತ್ತದೆ. ಸಕಾಲಕ್ಕೆ ಮಳೆಯೂ ಆಗುತ್ತದೆ. ಹೀಗಾಗಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ನಾನು ಜಲಸಂಪನ್ಮೂಲ ಸಚಿವನಾಗಿದ್ದ ಕೈಗೊಂಡಿದ್ದ ಕೆರೆ ತುಂಬಿಸುವ ಯೋಜನೆಯಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಆಲಮಟ್ಟಿ ಜಲಾಶಯದ ಹೆಚ್ಚುವರಿ ನೀರನ್ನು ಕೆರೆ, ಹಳ್ಳಗಳಿಗೆ ತುಂಬಿಸಲಾಗುತ್ತಿದೆ. ಕೆರೆಗಳ ಅಕ್ಕಪಕ್ಕ ಸಸಿಗಳನ್ನು ನೆಡಲಾಗುವುದು’ ಎಂದರು.

ಬಿಎಸ್‌ವೈರಿಂದ ಆಪರೇಷನ್: ‘ಆಪರೇಷನ್‌ ಕಮಲ ಮಾಡಿದ್ದು ಬಿಜೆಪಿಯವರೇ ಎಂಬುದನ್ನು ಬಿ.ಎಸ್.ಯಡಿಯೂರಪ್ಪನವರೇ ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸುವ ಮೂಲಕ ಸ್ವತಃ ಒಪ್ಪಿಕೊಂಡಂತಾಗಿದೆ. ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಯಡಿಯೂರಪ್ಪನವರು ಬಾಗಿನ ಅರ್ಪಿಸಲು ಬರಲಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಮುಖಂಡ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉದ್ಯಮಿ ಡಿ.ಎಸ್.ಗುಡ್ಡೋಡಗಿ, ಪ್ರತಿಷ್ಠಾನದ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ, ಬಾಬು ನಾಗೂರ ಇದ್ದರು.

Post Comments (+)