7
ಮಳೆಗಾಲದಲ್ಲೂ ತರಕಾರಿ ಧಾರಣೆ ಗಗನಮುಖಿಯಾಗಿರುವುದಕ್ಕೆ ತತ್ತರಿಸಿದ ಗ್ರಾಹಕರು

ಬಜಾರ್‌ನಲ್ಲಿ ಕಾಯಿಪಲ್ಲೆ–ತಪ್ಪಲ ದುಬಾರಿ..!

Published:
Updated:
ವಿಜಯಪುರದ ಲಿಂಗದಗುಡಿ ರಸ್ತೆಯಲ್ಲಿ ಭಾನುವಾರ ನಡೆದ ಕಾಯಿಪಲ್ಲೆ ಬಜಾರ್‌ನ ಚಿತ್ರಣ

ವಿಜಯಪುರ: ನಗರದ ಭಾನುವಾರದ ಬಜಾರ್‌ಗಳಲ್ಲಿ ಕಾಯಿಪಲ್ಲೆ, ತಪ್ಪಲದ (ತರಕಾರಿ–ಸೊಪ್ಪು) ಧಾರಣೆ ಗಗನಮುಖಿಯಾಗಿದೆ. ಮಳೆಗಾಲ ಆರಂಭಗೊಂಡ ನಂತರ ಬೆಲೆ ಏರಿಕೆ ಗ್ರಾಹಕ ವಲಯದಲ್ಲಿ ತಳಮಳ ಮೂಡಿಸಿದೆ.

ಮಳೆಗಾಲ ಆರಂಭಗೊಂಡ ಬೆನ್ನಿಗೆ ಧಾರಣೆ ಇಳಿಮುಖವಾಗಿತ್ತು. 15 ದಿನದ ಹಿಂದಿನ ಧಾರಣೆಗೂ ಇಂದಿನ ಬೆಲೆಗೂ ಅಜಗಜಾಂತರ ವ್ಯತ್ಯಾಸವಿದೆ. ಕೆಲ ಕಾಯಿಪಲ್ಲೆ ಬಲು ತುಟ್ಟಿಯಾಗಿವೆ. ಧಾರಣೆ ದುಪ್ಪಟ್ಟುಗೊಂಡಿದೆ. ಈ ವೇಳೆಗೆ ಅಗ್ಗವಾಗಿರಬೇಕಾದ ಸೊಪ್ಪಿನ ಬೆಲೆಯೂ ಗಗನಮುಖಿಯಾಗಿರುವುದು ಮಧ್ಯಮ ವರ್ಗದವರ ಜೇಬಿಗೆ ಹೊರೆಯಾಗಿದೆ.

ಹುರುಪಿನಿಂದ ಕಾಯಿಪಲ್ಲೆ ಖರೀದಿಸುತ್ತಿದ್ದ ಗೃಹಿಣಿಯರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ತಲಾ ಅರ್ಧ ಕೆ.ಜಿ. ಖರೀದಿಸುತ್ತಿದ್ದವರು ಇದೀಗ ಪಾವ್‌ ಕಿಲೋ ಖರೀದಿಗಿಳಿದಿದ್ದಾರೆ. ಕೆಲ ಕಾಯಿಪಲ್ಲೆ ಖರೀದಿಯನ್ನೇ ಕೈ ಬಿಟ್ಟು, ತಮ್ಮ ಬಜೆಟ್‌ನಲ್ಲಿ ಸಸ್ತಾ ಸಿಗುವ ತರಕಾರಿ ಖರೀದಿಗೆ ಭಾನುವಾರದ ಬಜಾರ್‌ನಲ್ಲಿ ಮುಗಿಬಿದ್ದರು. ಬಹುತೇಕರು ಕಾಯಿಪಲ್ಲೆ ಖರೀದಿಗೆ ಮುಂದಾಗದೆ ಕಡಿಮೆ ಧಾರಣೆಗೆ ದೊರಕಿದ ಉಳ್ಳಾಗಡ್ಡಿಯನ್ನೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದು ಗೋಚರಿಸಿತು.

ಬಡವರಿಗೆ ಭಾರ:

‘ಕಾಯಿಪಲ್ಲೆ ಖರೀದಿ ಮಧ್ಯಮ ವರ್ಗದ ಜನರಿಗೆ ಭಾರವಾಗಿದೆ. ಬಡವರಿಗಂತೂ ಕಷ್ಟ ಎನಿಸಿದೆ. ಕೂಲಿ ಕಾರ್ಮಿಕರು ವಾರದ ಸಂತೆ ಮಾಡುವಂತಿಲ್ಲ. ಮೆಂತೆ ಪಲ್ಯ ಒಂದು ಕಟ್ಟಿಗೆ ₹ 15 ಅಂದ್ರೇ ಹೇಗೆ ಖರೀದಿಸಬೇಕು ಎಂಬುದೇ ತೋಚದಾಗಿದೆ. ಹದಿನೈದು ದಿನದ ಹಿಂದಿನ ಧಾರಣೆಗೆ ಹೋಲಿಸಿದರೇ ಈ ವಾರ ಬಹುತೇಕ ಉತ್ಪನ್ನಗಳ ಬೆಲೆ ದುಬಾರಿಯಾಗಿದೆ’ ಎಂದು ಗ್ರಾಹಕ ಶ್ರೀಕಾಂತ ಪನಾಳಕರ ತಿಳಿಸಿದರು.

‘ಬೇಸಿಗೆಯಲ್ಲಿ ಕಾಯಿಪಲ್ಲೆ ತುಟ್ಟಿ ಅಂದ್ರೇ ಓಕೆ. ಆದ್ರೇ ಮಳೆಗಾಲ ಆರಂಭವಾಗಿ ತಿಂಗಳಾದ್ರೂ ತಪ್ಪಲ ಬೆಲೆಯಾದ್ರೂ ಕಡಿಮೆಯಾಗದಿದ್ರೇ ಹೆಂಗೆ. ನಮ್ಮಲ್ಲಿ ಮಳೆಗಿಂತ ಗಾಳಿಯ ಅಬ್ಬರವೇ ಹೆಚ್ಚಿದೆ. ಬೆಳಗಾವಿ ಭಾಗದಲ್ಲಿ ಸಾಕಷ್ಟು ಮಳೆ ಸುರಿದಿದೆ. ಆದ್ರೂ ಧಾರಣೆ ಏಕೆ ಏರುತ್ತಿದೆ ಎಂಬುದೇ ತಿಳಿಯದಾಗಿದೆ’ ಎಂದು ಬಾಬುರಾವ್ ಅಂಗಡಿ ಹೇಳಿದರು.

ಕ್ಷೀಣಿಸಿದ ಆವಕ:

‘ಬೆಳಗಾವಿ ಭಾಗದಿಂದ ಉತ್ಪನ್ನ ವಿಜಯಪುರದ ಮಾರುಕಟ್ಟೆಗೆ ಬರುತ್ತಿಲ್ಲ. ಇದರ ಪರಿಣಾಮ ಧಾರಣೆ ಹೆಚ್ಚಿದೆಯಷ್ಟೇ. ಇದರ ಜತೆಗೆ ಇದೀಗ ಶುಭ ಸಮಾರಂಭಗಳ ಸಮಯ. ಹೆಚ್ಚಿನ ಪ್ರಮಾಣದ ಉತ್ಪನ್ನವನ್ನು ಮದುವೆ ಮನೆಯವರು ಖರೀದಿಸುವುದರಿಂದ ಮಾರುಕಟ್ಟೆಯಲ್ಲಿ ಕಾಯಿಪಲ್ಲೆ ಕೊರತೆ ಉಂಟಾಗಿ, ದರ ಹೆಚ್ಚಿದೆ’ ಎಂದು ವ್ಯಾಪಾರಿ ರಿಯಾಜ್ ಬಾಗವಾನ ತಿಳಿಸಿದರು.

‘ಕೆಲವೊಂದು ಕಡೆ ಸಮರ್ಪಕವಾಗಿ ಮಳೆ ಸುರಿದಿಲ್ಲ. ಚಲೋ ಮಳೆಯಾದ ವಾರದ ಅವಧಿಯೊಳಗೆ ಕಾಯಿಪಲ್ಲೆ ಧಾರಣೆಯೂ ಕುಸಿಯುತ್ತದೆ. ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಿರುತ್ತದೆ. ಪೂರೈಕೆ ಕಡಿಮೆಯಿರುತ್ತದೆ. ಮಳೆಗಾಲದಲ್ಲಿ ಬೇಡಿಕೆಗಿಂತ ಪೂರೈಕೆಯೇ ಹೆಚ್ಚಿರುವುದರಿಂದ ಮುಂದಿನ ದಿನಗಳಲ್ಲಿ ಧಾರಣೆ ಕುಸಿಯಬಹುದು’ ಎನ್ನುತ್ತಾರೆ ವ್ಯಾಪಾರಿ ಧರೆಪ್ಪ ತೊರವಿ.

‘ಈಗಿನ ವ್ಯಾಪಾರವೂ ಅಷ್ಟಕ್ಕಷ್ಟೇ. ದಿನದ ಪಗಾರ ಸಿಕ್ಕಿದರೇ ಹೆಚ್ಚು ಎನ್ನುವಂತಹ ಸ್ಥಿತಿ ಮಾರುಕಟ್ಟೆಯಲ್ಲಿದೆ’ ಎಂದು ಅವರು ಹೇಳಿದರು.

ತರಕಾರಿ ಧಾರಣೆ

ಬದನೆಕಾಯಿ, ಹಿರೇಕಾಯಿ, ಗಜ್ಜರಿ, ಹಾಗಲಕಾಯಿ ಒಂದು ಕೆ.ಜಿ.ಗೆ ತಲಾ ₹ 80, ಸೌತೆಕಾಯಿ, ಬೆಂಡೆಕಾಯಿ, ಹಸಿ ಮೆಣಸಿನಕಾಯಿ, ಡಬ್ಬು ಮೆಣಸಿನಕಾಯಿ ತಲಾ ₹ 60, ಟೊಮೆಟೊ, ಆಲೂಗಡ್ಡೆ ₹ 30, ಹೂಕೋಸು ಒಂದಕ್ಕೆ ₹ 10, ಗೆಡ್ಡೆಕೋಸು ಒಂದಕ್ಕೆ ₹ 20.

ಮೆಂತೆ ಒಂದು ಕಟ್ಟಿಗೆ ₹ 15, ಸಬ್ಸಿಗೆ ₹ 10, ರಾಜಗಿರಿ, ಕಿರಿಕ್‌ಸಾಲಿ ತಲಾ ₹ 20ಕ್ಕೆ ಮೂರು ಕಟ್ಟು, ಪಾಲಕ್‌ ₹ 10ಕ್ಕೆ ಮೂರು ಕಟ್ಟು, ಕರಿಬೇವು, ಕೊತ್ತಂಬರಿ, ಹುಳ್ಚಿಕಾಯಿ ಸೊಪ್ಪು ತಲಾ ಒಂದು ಕಟ್ಟಿಗೆ ₹ 5.

ವಿಜಯಪುರ ಸುತ್ತಮುತ್ತ ಮಳೆಯಾಗಿ 15 ದಿನ ಕಳೆದಿದೆ. ಒಂದೆರೆಡು ಹದ ವರ್ಷಧಾರೆಯಾದರೆ ಸ್ಥಳೀಯ ಉತ್ಪನ್ನವೇ ಮಾರುಕಟ್ಟೆಗೆ ಸಾಕಷ್ಟು ಬರಲಿದೆ. ಪ್ರಸ್ತುತ ವ್ಯಾಪಾರ ಕ್ಷೀಣಿಸಿದೆ
- ರಿಯಾಜ್ ಬಾಗವಾನ, ತರಕಾರಿ ವ್ಯಾಪಾರಿ

ಮಳೆಯಾದರೆ ಧಾರಣೆ ಕುಸಿಯಲಿದೆ. ಪ್ರಸ್ತುತ ಬಹುತೇಕ ಉತ್ಪನ್ನಗಳ ಬೆಲೆ ಪಾವ್‌ ಕಿಲೋಗೆ ₹ 20ರಷ್ಟಿರುವುದು ಕೂಲಿ ಕಾರ್ಮಿಕರಿಗೆ ಖರೀದಿ ನಡೆಸಲಾಗದಷ್ಟು ಹೊರೆಯಾಗಿದೆ
- ನೆಹರೂ ಪೂಜಾರಿ, ಗ್ರಾಹಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !