ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆ ಬರಬೇಕು; ಮೀಸಲಾತಿ ಇರಬೇಕು: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

‘ಮತ್ತೆ ಕಲ್ಯಾಣ’; ವಿದ್ಯಾರ್ಥಿಗಳೊಂದಿಗೆ ಸಂವಾದ
Last Updated 28 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ವಿಜಯಪುರ: ‘ಸಮಾಜದಲ್ಲಿ ಸಮಾನತೆ ಬರಬೇಕು. ಸೌಲಭ್ಯ ವಂಚಿತರಿಗೆ ಮೀಸಲಾತಿಯೂ ಇರಬೇಕು’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಗ್ರಂಥಾಲಯ ಸಭಾಂಗಣದಲ್ಲಿ ‘ಮತ್ತೆ ಕಲ್ಯಾಣ’ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಸವಿತಾ ಎಂಬುವರ ಪ್ರಶ್ನೆಗೆ ಅವರು ಉತ್ತರ ನೀಡಿದರು.

‘ರಾಜಕಾರಣಿಗಳು ಭಾಷಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡುತ್ತೇವೆ, ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುತ್ತೇವೆ ಎಂದು ಹೇಳುತ್ತಾರೆ. ಹೀಗಾದಾಗ ಸಮಾನತೆ ಹೇಗೆ ಬರಲು ಸಾಧ್ಯ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ, ‘ಮನೆಯಲ್ಲಿ ಒಂದು ಮಗು ಸದೃಢವಾಗಿದ್ದು, ಇನ್ನೊಂದು ಮಗು ಅಂಗವಿಕಲನಾಗಿದ್ದರೆ ಆ ಮಗುವಿನ ಬಗ್ಗೆ ಪೋಷಕರು ವಿಶೇಷ ಕಾಳಜಿ ವಹಿಸುತ್ತಾರೆ. ಹಾಗೆಯೇ, ಸಮಾಜದಲ್ಲಿ ಸೌಲಭ್ಯಗಳಿಂದ ವಂಚಿತರಾದವರು ಅನೇಕರಿದ್ದಾರೆ. ಅವರಿಗೆ ಮೀಸಲಾತಿ ಕೊಡುವುದು ತಪ್ಪಲ್ಲ’ ಎಂದರು.

‘ಇಂದಿನ ಶಿಕ್ಷಣ ಪದ್ಧತಿಯಲ್ಲಿ ಬಹಳಷ್ಟು ದೋಷವಿದೆ. ಪದವಿ ಅಷ್ಟೇ ಮುಖ್ಯವಲ್ಲ. 12ನೇ ಶತಮಾನದ ಕಾಯಕ ಜೀವಿಗಳು ಶಾಲೆಯ ಮೆಟ್ಟಿಲನ್ನೇ ತುಳಿದಿರಲಿಲ್ಲ. ಅವರಿಗೆ ಬದುಕಿನ ಅನುಭವ, ಅನುಭಾವ ಇತ್ತು. ಇಂದಿನ ಮಕ್ಕಳಿಗೆ ಅಕ್ಷರದ ಜತೆಗೆ ಬದುಕಿನ ಅರ್ಥವನ್ನು ಕಲಿಸದೇ ಇದ್ದರೆ ದ್ರೋಹ ಬಗೆದಂತೆ’ ಎಂದರು.

‘ಇಂದಿನ ವಿದ್ಯಾವಂತರು, ಅದರಲ್ಲೂ ಉನ್ನತ ಅಧಿಕಾರಿಗಳಲ್ಲಿ ನೈತಿಕ ನೆಲೆಗಟ್ಟು ಕುಸಿದಿದೆ. ಧಾರ್ಮಿಕ ಭಾವನೆ ಬತ್ತಿದೆ. ಕಬಳಿಸುವ ಗುಣ ಹೆಚ್ಚಿದೆ. ಹೀಗಾಗಿ ಸಮಾಜ ದಿಕ್ಕು ತಪ್ಪುತ್ತಿದೆ. ದಿಕ್ಕು ತೋರಿಸುವವರೇ ದಿಕ್ಕು ತಪ್ಪಿಸಿದರೆ ಗತಿ ಏನು’ ಎಂದು ಪ್ರಶ್ನಿಸಿದರು.

‘ವ್ಯಾವಹಾರಿಕ, ಔದ್ಯೋಗಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಇಂದಿನ ಅಗತ್ಯವಾಗಿದೆ. ಉದ್ಯೋಗ ಪ್ರತಿಯೊಬ್ಬನ ಕರ್ತವ್ಯವಾಗಬೇಕು. ನಾವು ಹಕ್ಕುಗಳಿಗೆ ಹೋರಾಡುತ್ತಿದ್ದೇವೆಯೇ ಹೊರತು ಕರ್ತವ್ಯಕ್ಕೆ ಅಲ್ಲ’ ಎಂದು ತಿಳಿಸಿದರು.

ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಾದ ಗುಣೇಶ್ವರಿ ಚೌಧರಿ, ವೀಣಾಶ್ರೀ ಹಿರೇಮಠ, ಯಲ್ಲಪ್ಪ ಕಟ್ಟಿಮನಿ, ವಿನಯ ಶಹಾಪುರ, ದೀಪಾಲಿ ತೆಳಗಿನತೋಟ, ನಿವೇದಿತಾ ಕಾಟ್ಕರ್, ವೈ.ಎಸ್.ಪೂಜಾರಿ, ಸರಸ್ವತಿ ಖಾನಾಪುರೆ, ಆಕಾಶ ಕಾಂತಿಲಾಲ, ಪ್ರಜ್ಞಾ ಮೇತ್ರಿ, ಸೌಮ್ಯಶ್ರೀ ಚಕ್ರಪಾಣಿ, ಜ್ಯೋತಿ ಗಾಡದ, ಯಲ್ಲಪ್ಪ ಪೂಜಾರಿ, ಸಿದ್ಧರಾಮ ಬಡಿಗೇರ, ಭಾಗ್ಯಶ್ರೀ ಬಿರಾದಾರ, ಐಶ್ವರ್ಯ ಟಪಕೋಳ, ಚಂದ್ರಶೇಖರ ಕೋರಡ್ಡಿ, ಮಾಯಪ್ಪ ನಾಟೀಕಾರ, ವಿಶಾಲ ನಾಯಕ, ಶಿವಶಂಕರ ಬೇನೂರ ಸೇರಿ ಅನೇಕರು ಪ್ರಶ್ನೆಗಳನ್ನು ಕೇಳಿದರು.

ಗದಗ ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಸ್ವಾಮೀಜಿ, ಬೆಳಗಾವಿಯ ಶರಣಬಸವ ದೇವರು, ಬಸವನಬಾಗೇವಾಡಿ ವಿರಕ್ತ ಮಠದ ಸಿದ್ಧಲಿಂಗ ಸ್ವಾಮೀಜಿ, ಚಿಂತಕರಾದ ಪ್ರೊ.ಆರ್.ಕೆ.ಹುಡಗಿ, ಸಂಗಮೇಶ ಬಬಲೇಶ್ವರ, ಡಾ.ಎಂ.ಎಸ್.ಮದಭಾವಿ, ಡಾ.ಮಹಾಂತೇಶ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT