ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ದಾಖಲೆಗಳಿಗೆ ಹೆಸರಾದ 1989ರ ಚುನಾವಣೆ

ಮತ್ತೆ ವಿಜೃಂಭಿಸಿದ ರಾಜಭಕ್ತಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ಗೆ ನಿರಾಯಸ ಗೆಲುವು
Last Updated 3 ಮೇ 2019, 18:03 IST
ಅಕ್ಷರ ಗಾತ್ರ

ಮೈಸೂರು: 1989ರಲ್ಲಿ ನಡೆದ 9ನೇ ಲೋಕಸಭಾ ಚುನಾವಣೆ ಹಲವು ವಿಷಯಗಳಲ್ಲಿ ದಾಖಲೆ ಬರೆಯಿತು. ಈ ದಾಖಲೆಗಳು ಇನ್ನೂ ಹಸಿರಾಗಿದ್ದು, ಇವುಗಳನ್ನು ಮುರಿಯಲು 30 ವರ್ಷವಾದರೂ ಸಾಧ್ಯವಾಗಿಲ್ಲ.

ಮತದಾನ ನಡೆದ ಪ್ರಮಾಣ, ಅಭ್ಯರ್ಥಿಯ ಗೆಲುವಿನ ಅಂತರ, ಸತತ 2ನೇ ಗೆಲುವು ಸಾಧಿಸಿದ್ದು ಈ ಚುನಾವಣೆಯ ದಾಖಲೆಗಳು ಎನಿಸಿವೆ.

ಈ ಚುನಾವಣೆಯಲ್ಲಿ ಶೇ 69.74ರಷ್ಟು ಮಂದಿ ಮತದಾನ ಮಾಡಿದರು. ಅದು ಈವರೆಗಿನ ದಾಖಲೆ ಎನಿಸಿದೆ. ಶ್ರೀಕಂಠದತ್ತ ನರಸಿಹಂರಾಜ ಒಡೆಯರ್ ಅವರು 2,49,364 ಮತಗಳ ಅಂತರದಿಂದ ಗೆಲುವು ಪಡೆದರು. ಈ ದಾಖಲೆಯನ್ನೂ ಮುರಿಯಲು ಆಗಿಲ್ಲ. ಜತೆಗೆ, ಈ ಚುನಾವಣೆಯ ನಂತರ ಸತತ 2ನೇ ಗೆಲುವನ್ನು ಸಾಧಿಸಲು ಯಾರೂ ಶಕ್ಯರಾಗಿಲ್ಲ. ಇದೂ ದಾಖಲೆ ಎನಿಸಿದೆ.

1998 ಮತ್ತು 1999ರ ಚುನಾವಣೆಯಲ್ಲಿ ಶೇ 69ಕ್ಕಿಂತ ಹೆಚ್ಚು ಮತದಾನ ನಡೆಯಿತಾದರೂ, 1988ರಲ್ಲಿ ನಡೆದ ಶೇ 69.74ರ ಗಡಿ ಮುಟ್ಟಲು ಸಾಧ್ಯವಾಗಿಲ್ಲ. ಈ ಹಿಂದೆ ಎಂ.ಶಂಕರಯ್ಯ ಸತತ ಎರಡು ಹಾಗೂ ತುಳಸಿದಾಸಪ್ಪ ಸತತ 3 ಗೆಲುವನ್ನು ಪಡೆದಿದ್ದರು. ಈ ಚುನಾವಣೆಯಲ್ಲಿ ಸತತ 2ನೇ ಗೆಲುವನ್ನು ಪಡೆದ ಮೂರನೇ ಸಂಸದ ಎಂಬ ಕೀರ್ತಿಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪಾತ್ರರಾದರು. ಇಲ್ಲಿಂದ ಮುಂದೆ ಸತತ 2ನೇ ಗೆಲುವು ಯಾರಿಗೂ ಒಲಿದಿಲ್ಲ.

ಈ ಚುನಾವಣೆಯ ಹೊತ್ತಿಗೆ ರಾಷ್ಟ್ರಮಟ್ಟದಲ್ಲಿ ಜನತಾ ಪಕ್ಷ ಛಿದ್ರಛಿದ್ರವಾಗಿತ್ತು. ಎಚ್.ಡಿ.ದೇವೇಗೌಡ ಅವರು ಸಮಾಜವಾದಿ ಜನತಾಪಕ್ಷ ಮತ್ತು ರಾಮಕೃಷ್ಣ ಹೆಗಡೆ ಅವರು ಜನತಾ ದಳದ ನಾಯಕತ್ವ ವಹಿಸಿದರು. ಬಿಜೆಪಿಯೂ ಅಸ್ತಿತ್ವಕ್ಕೆ ಬಂದಿತು.

ಕಳೆದ ಚುನಾವಣೆಯಲ್ಲಿ ಇದ್ದಷ್ಟು ಅಭ್ಯರ್ಥಿಗಳು ಈ ಚುನಾವಣೆಯಲ್ಲಿರಲಿಲ್ಲ. ಕೇವಲ 7 ಮಂದಿಯಷ್ಟೇ ಕಣದಲ್ಲಿದ್ದರು. ಆದರೆ, ಕಳೆದ ಚುನವಾಣೆಗಿಂತ ಹೆಚ್ಚಿನ ಪಕ್ಷಗಳು ಸ್ಪರ್ಧಿಸಿದ್ದವು.

ಕಾಂಗ್ರೆಸ್‌ನಿಂದ ನಿರಾಯಸವಾಗಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಟಿಕೆಟ್ ಒಲಿದಿತ್ತು. ಸಮಾಜವಾದಿ ಜನತಾ ಪಕ್ಷದಿಂದ ಡಿ.ಮಾದೇಗೌಡ ಕಣಕ್ಕಿಳಿದರೆ, ಜನತಾದಳದ ಅಭ್ಯರ್ಥಿಯಾಗಿ ಸಮಾಜವಾದಿ ಪ.ಮಲ್ಲೇಶ್‌ ಸ್ಪರ್ಧಿಸಿದ್ದರು. ಬಿಜೆಪಿ ಇದೇ ಮೊದಲ ಬಾರಿಗೆ ಸ್ಪರ್ಧೆಗೆ ಇಳಿಯಿತು. ಈ ಪಕ್ಷದಿಂದ ತೋಂಟದಾರ್ಯ ಅಭ್ಯರ್ಥಿಯಾಗಿದ್ದರು. ಇತರ ಮೂವರು ಪಕ್ಷೇತರರೂ ಕಣದಲ್ಲಿದ್ದರು.

ಪಕ್ಷೇತರರ ಪೈಕಿ ಮದ್ರಾಸ್‌ ಐಐಟಿಯಲ್ಲಿ ಬಿ.ಟೆಕ್‌ ಮತ್ತು ಅಮೆರಿಕದಲ್ಲಿ ಎಂಬಿಎ ಪದವಿ ಗಳಿಸಿದ್ದ ಭಾಮಿ ವಿ.ಶೆಣೈ ಹಾಗೂ ಪತ್ರಕರ್ತ ಶಫಿ ಅಹಮದ್‌ ಷರೀಫ್‌ ಪ್ರಮುಖರೆನಿಸಿದ್ದರು. ಇವರಲ್ಲಿ ಭಾಮಿ ವಿ.ಶೆಣೈ ಅಮೆರಿಕದ ತೈಲ ಕಂಪನಿಯೊಂದರಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಸ್ವದೇಶಕ್ಕೆ ಹಿಂದಿರುಗಿದ್ದರು.

ಮೇಲ್ನೋಟಕ್ಕೆ ಚತುಷ್ಕೋನ ಸ್ಪರ್ಧೆಯಂತೆ ಕಂಡು ಬಂದರೂ ನಿಜವಾಗಿ ನಡೆದದ್ದು ತ್ರಿಕೋನ ಸ್ಪರ್ಧೆ. ರಾಜಭಕ್ತಿ ಇನ್ನೂ ಜೀವಂತ ಇತ್ತು. ಒಂದು ತಲೆಮಾರಿನ ಜನರು ಅರಸೊತ್ತಿಗೆ ಕುರಿತು ಇಟ್ಟುಕೊಂಡ ನಂಬಿಕೆ ಹಾಗೂ ಜನತಾ ಪಕ್ಷ ವಿಭಜನೆಯಾಗಿದ್ದು ಒಡೆಯರ್ ಗೆಲುವಿಗೆ ಸಹಕಾರಿಯಾಯಿತು.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು 3,84,888 ಮತಗಳನ್ನು ಪಡೆಯುವ ಮೂಲಕ ಗೆಲುವನ್ನು ಅನಾಯಸವಾಗಿಯೇ ಪಡೆದರು. 1,35,524 ಮತಗಳನ್ನು ಪಡೆಯುವ ಮಾದೇಗೌಡ 2 ಹಾಗೂ 1,31,905 ಮತಗಳನ್ನು ಪಡೆಯುವ ಮೂಲಕ 3ನೇ ಸ್ಥಾನ ಗಳಿಸಿದರು. 25,398 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ನಾಲ್ಕನೇ ಸ್ಥಾನ ಗಳಿಸಿತು.

ಮೈಸೂರು ಲೋಕಸಭಾ ಕ್ಷೇತ್ರ (1989)
ಅಭ್ಯರ್ಥಿ/ ಪಕ್ಷ/ ಗಳಿಸಿದ ಮತಗಳು/ ಶೇಕಡಾವಾರು ಪ್ರಮಾಣ

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌/ ಐಎನ್‌ಸಿ/ 3,84,888/ ಶೇ 55.60
ಡಿ.ಮಾದೇಗೌಡ/ ಸಮಾಜವಾದಿ ಜನತಾಪಕ್ಷ/ 1,35,524/ ಶೇ 19.60
ಪ.ಮಲ್ಲೇಶ್‌/ ಜನತಾ ದಳ/ 1,31,905/ ಶೇ 19.10
ತೋಂಟದಾರ್ಯ/ ಬಿಜೆಪಿ/ 25,398/ ಶೇ 03.70
ಡಿ.ಕಾಳಸ್ವಾಮಿ/ ಪಕ್ಷೇತರ/ 7,013/ ಶೇ 01.00
ಶಫಿ ಅಹಮದ್‌ ಷರೀಫ್‌/ ಪಕ್ಷೇತರ/ 4,230/ ಶೇ 00.60
ಭಾಮಿ ವಿ.ಶಣೈ/ ಪಕ್ಷೇತರ/ 2,644/ ಶೇ 00.40
ಮೈಸೂರು ಕ್ಷೇತ್ರದಲ್ಲಿ ಚಲಾವಣೆಯಾದ ಮತದಾನ ಶೇ 69.05

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT