ಭಾನುವಾರ, ಜನವರಿ 24, 2021
17 °C
ಪ್ರಥಮ ಪಿಯು ಪಾಸಾದವರು 34 ಸಾವಿರ, ದ್ವಿತೀಯ ಪಿಯುಗೆ ಸೇರಿದವರು 29 ಸಾವಿರ!

ಮೈಸೂರಿನ 5 ಸಾವಿರ ಪಿಯು ವಿದ್ಯಾರ್ಥಿಗಳು ಎಲ್ಲಿ ಹೋದರು?

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

ಮೈಸೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಗೆ ದಾಖಲಾಗಲು ಜಿಲ್ಲೆಯ ಪ್ರಥಮ ಪಿಯು ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಥಮ ಪಿಯುಸಿ ಪಾಸಾದ 34 ಸಾವಿರ ವಿದ್ಯಾರ್ಥಿ ಗಳ ಪೈಕಿ 29 ಸಾವಿರ ಮಾತ್ರವೇ ದ್ವಿತೀಯ ಪಿಯುಗೆ ದಾಖಲಾಗಿದ್ದಾರೆ. ಉಳಿದ 5 ಸಾವಿರ ವಿದ್ಯಾರ್ಥಿಗಳು ಇನ್ನೂ ದಾಖಲಾಗಿಲ್ಲ.

‌ಕೋವಿಡ್ ಕಾರಣದಿಂದಾಗಿ ಕಳೆದ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿಯಲ್ಲಿದ್ದ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಯಿತು. ಈ ಬಾರಿ ಅವರು ದ್ವಿತೀಯ ಪಿಯುಗೆ ದಾಖಲಾಗಬೇಕಿತ್ತು. ಜ. 8 ದಾಖಲಾಗಲು ಕೊನೆಯ ದಿನ. ಆದರೆ, ಇದುವರೆಗೆ 29 ಸಾವಿರ ವಿದ್ಯಾರ್ಥಿಗಳು ಮಾತ್ರವೇ ದಾಖಲಾಗಿದ್ದಾರೆ. ಉಳಿದವರು ಏಕೆ ದಾಖಲಾಗಿಲ್ಲ ಎಂಬುದು ಪದವಿಪೂರ್ವ ಶಿಕ್ಷಣ ಇಲಾಖೆಗೆ ಯಕ್ಷಪ್ರಶ್ನೆ ಎನಿಸಿದೆ.

ದಾಖಲಾಗದೇ ಇರುವವರ ಪೈಕಿ ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಮೂಲಗಳು ಹೇಳುತ್ತವೆ. ಗಮನಾರ್ಹ ಸಂಖ್ಯೆಯಲ್ಲಿ ಬಾಲಕರೂ ದಾಖಲಾಗಿಲ್ಲ ಎಂಬ ಅಂಶವೂ ಗೊತ್ತಾಗಿದೆ.

ಎಚ್.ಡಿ.ಕೋಟೆ ತಾಲ್ಲೂಕಿನ ಹೊಮ್ಮರಗಳ್ಳಿ ಪಿಯು ಕಾಲೇಜಿನಲ್ಲಿ ಕಳೆದ ಸಾಲಿನ ಪ್ರಥಮ ಪಿಯುಸಿಯಲ್ಲಿ 164 ವಿದ್ಯಾರ್ಥಿಗಳು ಇದ್ದರು. ಈ ಬಾರಿ 124 ಮಂದಿಯಷ್ಟೇ ದಾಖಲಾಗಿದ್ದಾರೆ. ಇದೇ ಪರಿಸ್ಥಿತಿ ಬಹುತೇಕ ಎಲ್ಲ ಕಾಲೇಜುಗಳಲ್ಲಿಯೂ ಇದೆ.

ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ ತಾಲ್ಲೂಕುಗಳ ಗ್ರಾಮಾಂತರ ಭಾಗಗಳಲ್ಲಿ ಬಾಲಕಿಯರಿಗೆ ವಿವಾಹ ಮಾಡಿರುವುದೂ ಇದಕ್ಕೆ ಒಂದು ಕಾರಣ ಎನಿಸಿದೆ. ಬಹಳಷ್ಟು ಪ್ರಕರಣಗಳು ಗುಟ್ಟಾಗಿ ನಡೆದಿರುವುದರಿಂದ ಬಾಲ್ಯವಿವಾಹಗಳು ಬೆಳಕಿಗೆ ಬಂದಿಲ್ಲ. ದಾಖಲಾತಿ ಕುಸಿಯಲು ಇದೂ ಒಂದು ಕಾರಣ ಎನ್ನಲಾಗಿದೆ.

ಕೋವಿಡ್ ಕಾರಣದಿಂದಾಗಿ ಆರ್ಥಿಕವಾಗಿ ಅತೀವ ನಷ್ಟ ಅನುಭವಿಸಿರುವ ಕುಟುಂಬಗಳು ಪ್ರಥಮ ಪಿಯುಸಿಯಲ್ಲೇ ಓದನ್ನು ಮೊಟಕುಗೊಳಿಸಿ, ತಮ್ಮ ಮಕ್ಕಳನ್ನು ಕೆಲಸಕ್ಕೆ ಸೇರಿಸಿರುವುದೂ ದಾಖಲಾತಿ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ. ಮತ್ತಷ್ಟು ಕುಟುಂಬಗಳು ಕೆಲಸ ಹರಸಿ ವಲಸೆ ಹೋಗಿವೆ. ಇವರನ್ನೆಲ್ಲ ಗುರುತಿಸಿ ಮರಳಿ ಕಾಲೇಜಿಗೆ ಸೇರಿಸಬೇಕಾದ ಗುರುತರವಾದ ಜವಾಬ್ದಾರಿ ಈಗ ಪದವಿಪೂರ್ವ ಶಿಕ್ಷಣ ಇಲಾಖೆಯ ಮೇಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು