ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಅಕ್ರಮ–ಸಕ್ರಮ ಜಾರಿಗೆ ಚಿಂತನೆ

ಪಾಲಿಕೆ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಬಸವರಾಜ, ಸೋಮಶೇಖರ್
Last Updated 8 ಮೇ 2020, 10:14 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರಿನಲ್ಲಿ ಈಗಾಗಲೇ ಜಾರಿಗೆ ತಂದಿರುವ ಅಕ್ರಮ-ಸಕ್ರಮ ಯೋಜನೆಗೆ ಮೈಸೂರು ನಗರದಲ್ಲೂ ಅವಕಾಶ ಮಾಡಿಕೊಡುವ ಬಗ್ಗೆ ಪರಿಶೀಲಿಸಿ, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ತಿಳಿಸಿದರು.

ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರ ನೇತೃತ್ವದಲ್ಲಿ ಗುರುವಾರ ನಡೆದ ಪಾಲಿಕೆ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪಾಲಿಕೆ ವತಿಯಿಂದ ಕೊರೊನಾ ಸೋಂಕು ತಡೆಗೆ ಕೈಗೊಂಡ ಕ್ರಮಗಳು ಮತ್ತು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಸಚಿವ ಬಸವರಾಜ ಮಾತನಾಡಿ, ‘ಕೊರೊನಾ ಸೋಂಕು ತಡೆಗೆ ಕೈಗೊಂಡ ಕಾರ್ಯಗಳು ಶ್ಲಾಘನೀಯ. ಇದೇ ರೀತಿಯ ಕೆಲಸವನ್ನು ಮುಂದುವರಿಸಿಕೊಂಡು ಹೋಗಿ. ನಿಮಗೆ ಬೇಕಾದ ಸಹಕಾರವನ್ನು ನಾನು ನೀಡುತ್ತೇನೆ. ನಮ್ಮದು ಕೊರೊನಾ ಮುಕ್ತ ರಾಜ್ಯ ಆಗಬೇಕೆಂಬ ಗುರಿ ಇದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಿ’ ಎಂದು ಸಲಹೆ ನೀಡಿದರು.

‘ಮೈಸೂರು ಮಹಾನಗರ ಪಾಲಿಕೆ ಎದುರಿಸುತ್ತಿರುವ ಸಮಸ್ಯೆಗಳನ್ನು ನೀಗಿಸಬೇಕೆಂಬುದು ನನ್ನ ಆಸೆ. ಕಳೆದ ಮೂರು ತಿಂಗಳುಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಹಲವು ಕೋಟಿಗಳಷ್ಟು ಆದಾಯ ಖೋತಾ ಆಗಿದೆ. ಎಲ್ಲ ನಗರ ಪಾಲಿಕೆಗಳಿಗೂ ಅನುದಾನ ಕೊಡಬೇಕು ಎಂಬುದನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಅವರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.

‘ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಮೇಯರ್‌ ಮತ್ತು ಇತರರು ಹಲವಾರು ಸಮಸ್ಯೆಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಮುಖ್ಯಮಂತ್ರಿ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿದ್ದೇನೆ’ ಎಂದರು.

‘ಮೈಸೂರು ನಗರಕ್ಕೆ ಹಲವಾರು ಹೊಸ ಯೋಜನೆಗಳನ್ನು ತರುವ ಬಗ್ಗೆ ಚರ್ಚಿಸಲಾಗಿದೆ. ರಿಂಗ್‌ ರಸ್ತೆಯ ಒಳಗಿನ ಮತ್ತು ಹೊರಭಾಗದ ಕೆಲವು ಬಡಾವಣೆಗಳನ್ನು ಪಾಲಿಕೆಗೆ ಸೇರಿಸುವ ಪ್ರಸ್ತಾವನೆಯನ್ನು ಇಡಲಾಗಿದೆ. ಸರ್ಕಾರದ ಹಂತದಲ್ಲಿ ಚರ್ಚಿಸಿ ಅದರ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಕ್ರಮಕೈಗೊಳ್ಳಲಾಗುವುದು. ಎಲ್ಲರೂ ನಿಗದಿತ ತೆರಿಗೆ ಪಾವತಿಸಿದರೆ ಆದಾಯ ಸಂಗ್ರಹವಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ. ಆದರೆ ಈಗ ಕೊರೊನಾದಿಂದ ಆರ್ಥಿಕ ಚಟುವಟಿಕೆ ಸ್ತಬ್ಧವಾಗಿದ್ದು, ತೆರಿಗೆ ಪಾವತಿಸುವಂತೆ ಒತ್ತಡ ಹೇರುವುದು ಸರಿಯಲ್ಲ. ನೀರಿನ ಬಿಲ್‌ ಪಾವತಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಕೊರೊನಾ ಸಮಸ್ಯೆ ದೂರವಾದ ಬಳಿಕ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಎಲ್‌.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಉಪ ಆಯುಕ್ತ ಶಶಿಕುಮಾರ್, ಮೇಯರ್ ತಸ್ನೀಂ, ಉಪಮೇಯರ್‌ ಶ್ರೀಧರ್‌, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಪಾಲಿಕೆ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT