ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಿಗೂ ಇರಲಿ ಲಕ್ಷ್ಯ: ಈಗಾಗಲೇ ದಾಟಿದೆ ಲಕ್ಷ

ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲೇ ಮೈಸೂರು ಜಿಲ್ಲೆಯಲ್ಲಿ ಹೆಚ್ಚು ಕೋವಿಡ್‌ ಪ್ರಕರಣ
Last Updated 12 ಮೇ 2021, 5:17 IST
ಅಕ್ಷರ ಗಾತ್ರ

ಮೈಸೂರು: ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ, ರಾಜ್ಯದಲ್ಲಿ ಮೈಸೂರಿನಲ್ಲೇ ಕೋವಿಡ್‌ ಪ್ರಕರಣ ಹೆಚ್ಚಿವೆ. ತುಮಕೂರು, ಬಳ್ಳಾರಿ ಜಿಲ್ಲೆಗಳು ನಂತರದ ಸ್ಥಾನದಲ್ಲಿವೆ. ಮೊದಲ ಅಲೆಯಲ್ಲೂ ಮೈಸೂರು ಮುಂಚೂಣಿಯಲ್ಲಿತ್ತು.

ಜಿಲ್ಲೆಯಲ್ಲಿ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. ಅದೂ ಸರ್ಕಾರಿ ದಾಖಲೆಯ ಪ್ರಕಾರ. ಕೋವಿಡ್‌ ಬಾಧಿತರಾದರೂ ಪರೀಕ್ಷೆಗೊಳಪಡದೆ, ಲೆಕ್ಕಕ್ಕೆ ಸೇರದವರ ಸಂಖ್ಯೆ ಇದಕ್ಕಿಂತಲೂ ದುಪ್ಪಟ್ಟಿದೆ ಎಂಬ ಮಾತು ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳ ವಲಯದಲ್ಲೇ ಕೇಳಿ ಬರುತ್ತಿದೆ.

ಗುಣಮುಖರಾದವರು, ಸಾವಿನ ಸಂಖ್ಯೆಯಲ್ಲೂ ಮೈಸೂರು ಮುಂಚೂಣಿ ಯಲ್ಲಿದೆ. ಬಳ್ಳಾರಿ, ತುಮಕೂರು ಜಿಲ್ಲೆಗಳು ನಂತರದ ಸ್ಥಾನದಲ್ಲಿದ್ದರೂ; ಮೈಸೂರು ಜಿಲ್ಲೆಗೂ, ಈ ಎರಡೂ ಜಿಲ್ಲೆಗಳಲ್ಲಿನ ಅಂಕಿ–ಸಂಖ್ಯೆಗೂ ಸಾಕಷ್ಟು ಅಂತರವಿದೆ. ನಿತ್ಯವೂ ಉಳಿದ ಜಿಲ್ಲೆಗಳಿಗಿಂತ ಇಲ್ಲಿಯೇ ಹೆಚ್ಚಿನ ಪ್ರಕರಣ ದಾಖಲಾಗುತ್ತಿವೆ.

ಚೇತರಿಕೆಯಲ್ಲಿ ಹೆಚ್ಚಳ: ಏಪ್ರಿಲ್‌ ತಿಂಗಳೊಂದರಲ್ಲೇ ಜಿಲ್ಲೆಯಲ್ಲಿ 20,965 ಜನರಿಗೆ ಕೋವಿಡ್‌ ಬಾಧಿಸಿದೆ. ಇದರಲ್ಲಿ 151 ಮಂದಿ ಮೃತಪಟ್ಟಿದ್ದರೆ; 10,798 ಜನರು ಗುಣಮುಖರಾಗಿದ್ದರು. ತಿಂಗಳಾಂತ್ಯದಲ್ಲಿ 10,775 ಸಕ್ರಿಯ ಪ್ರಕರಣಗಳಿದ್ದವು. ಕೊನೆಯ ವಾರದಲ್ಲಿ ಸೋಂಕು ತಗುಲಿದ್ದವರೇ ಹೆಚ್ಚಿದ್ದರು.

ಮೇ 1ರಿಂದ 11ರ ಮಂಗಳ ವಾರದವರೆಗೆ ಜಿಲ್ಲೆಯಲ್ಲಿ 25,679 ಜನರಿಗೆ ಸೋಂಕು ತಗುಲಿದೆ. ಹನ್ನೊಂದು ದಿನದಲ್ಲೇ 141 ಮಂದಿ ಮೃತಪಟ್ಟಿದ್ದು, ನಿತ್ಯದ ಸರಾಸರಿ 14ರ ಆಸುಪಾಸಿದೆ. ಪ್ರಸ್ತುತ 15,148 ಜನರು ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆ ಯಲ್ಲೂ ಹೆಚ್ಚಳವಾಗಿರುವುದು ತುಸು ಸಮಾಧಾನ ತಂದಿದೆ. ಈ ಅವಧಿಯಲ್ಲಿ 21,165 ಜನರು ಚೇತರಿಸಿಕೊಂಡಿದ್ದು, ನಿತ್ಯದ ಗುಣಮುಖರ ಸರಾಸರಿ 1,950 ರಷ್ಟಿದೆ. ವೆಂಟಿಲೇಟರ್‌, ಐಸಿಯು, ಆಮ್ಲಜನಕದ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ತುಸು ಹೆಚ್ಚಿದೆ ಎಂದು ಜಿಲ್ಲಾಡಳಿತದ ಅಂಕಿ–ಅಂಶ ತಿಳಿಸಿದೆ.

ಹರಸಾಹಸ: ಜಿಲ್ಲೆಯಾದ್ಯಂತ ಕೋವಿಡ್‌ ಪೀಡಿತರಾದವರಿಗೆ ಚಿಕಿತ್ಸೆ ಕೊಡುವುದು ಒಂದೆಡೆ ಸವಾಲಾದರೆ; ಸೋಂಕು ಹರಡುವಿಕೆಯನ್ನು ತಡೆಗಟ್ಟುವುದು ಸಹ ಹರಸಾಹಸದ ಕೆಲಸವಾಗಿದೆ.

ಮೊದಲ ಅಲೆಯಲ್ಲಿ ನೆರವಿಗೆ ಧಾವಿಸಿದವರ ಸಂಖ್ಯೆಗೆ ಹೋಲಿಸಿದರೆ, ಈ ಬಾರಿ ದಾನಿಗಳ ಸಂಖ್ಯೆ ಕಡಿಮೆ. ಚುನಾಯಿತಿ ಜನಪ್ರತಿನಿಧಿಗಳು ಸಹ ಮುಂದಾಗಿಲ್ಲ.

ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಾರಥ್ಯದಲ್ಲಿ ಜಿಲ್ಲಾಡಳಿತ ಅವಿರತವಾಗಿ ಶ್ರಮಿಸುತ್ತಿದೆ. ಸದ್ಯದ ಮಟ್ಟಿಗೆ ರೆಮ್‌ಡಿಸಿವಿರ್‌ ಚುಚ್ಚು ಮದ್ದು, ಆಮ್ಲಜನಕದ ಕೊರತೆ ಅಷ್ಟಾಗಿ ಬಾಧಿಸುತ್ತಿಲ್ಲ. ತಕ್ಕಮಟ್ಟಿಗೆ ಸಂಗ್ರಹವಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜೀವವಿದ್ದರೆ ಜೀವನ: ಸ್ವಾಮೀಜಿ

‘ಕೋವಿಡ್‌ನ ಮೂರನೇ ಅಲೆಗೂ ಈಗಿನಿಂದಲೇ ಸಿದ್ಧತೆ ನಡೆಸಿಕೊಳ್ಳಬೇಕಿದೆ. ಜನರು ಉದಾಸೀನದಿಂದ ವರ್ತಿಸುವುದು ಬೇಡ. ಎಚ್ಚೆತ್ತುಕೊಳ್ಳದಿದ್ದರೇ; ನಾವಷ್ಟೇ ಅಲ್ಲ, ನಮ್ಮವರು, ನಮ್ಮ ಸುತ್ತಮುತ್ತಲಿನವರು ಸಹ ಅಪಾಯಕ್ಕೆ ಸಿಲುಕಲಿದ್ದಾರೆ ಎಂಬುದು ಎಲ್ಲರಿಗೂ ಅರಿವಿಗಿರಬೇಕಿದೆ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಎಚ್ಚರಿಸಿದರು.

‘ಮೊದಲು ಜೀವ ಮುಖ್ಯ ಎಂಬುದು ಎಲ್ಲರಿಗೂ ಮನವರಿಕೆಯಾಗಲಿ. ಜೀವವಿದ್ದರಲ್ಲವೇ ಜೀವನ. ಜೀವನಕ್ಕಾಗಿ ಜೀವಕ್ಕೆ ಅಪಾಯ ತಂದು ಕೊಳ್ಳೋದು ಬೇಡ’ ಎಂಬ ಎಚ್ಚರಿಕೆಯ ಸಂದೇಶವನ್ನು ಸ್ವಾಮೀಜಿ ನೀಡಿದರು.

ಎಚ್ಚರವಿರಲಿ: ನಿರ್ಲಕ್ಷ್ಯ ಬೇಡ

‘ನಮ್ಮ ಬಂಧು– ಬಳಗದಲ್ಲೇ ಕೋವಿಡ್‌ಗೆ ಹಲವರು ಮೃತಪಟ್ಟಿದ್ದಾರೆ. ಇದುವರೆಗೂ ಸೋಂಕು ಪೀಡಿತರಾಗಿಲ್ಲದಿರಬಹುದು. ಕೊರೊನಾ ವೈರಸ್‌ ಯಾವಾಗ, ಹೇಗೆ, ಯಾರನ್ನು, ಯಾವ ಪ್ರಮಾಣದಲ್ಲಿ ಬಾಧಿಸಲಿದೆ ಎಂಬುದನ್ನು ಹೇಳಲಾಗಲ್ಲ. ಆದ್ದರಿಂದ ವೈರಸ್‌ ಬಗ್ಗೆ ಭಯವಿರಬೇಕು. ಸದಾ ಎಚ್ಚರವಿರಬೇಕು’ ಎನ್ನುತ್ತಾರೆ ಮೈಸೂರಿನ ನಿವಾಸಿ ರಾಜು.

‘ನಮಗಾಗಿ, ನಮ್ಮ ಬಂಧು-ಬಳಗಕ್ಕಾಗಿ, ಹಿತೈಷಿಗಳಿಗಾಗಿ, ಪ್ರೀತಿ–ಪಾತ್ರರಿಗಾಗಿ, ಸಮಾಜಕ್ಕಾಗಿ ಕೊರೊನಾ ವೈರಸ್‌ ಅನ್ನು ನಿರ್ಲಕ್ಷ್ಯದಿಂದ ನೋಡುವುದು ಬೇಡ. ಸದಾ ಜಾಗೃತರಾಗಿಯೇ ಇರೋಣ. ನಾವೂ ಸೋಂಕು ಅಂಟಿಕೊಳ್ಳುವುದು ಬೇಡ, ನಮ್ಮಿಂದ ಇತರರಿಗೂ ಸೋಂಕು ಅಂಟಿಸುವುದು ಬೇಡ‌. ಮೈಸೂರಿನಲ್ಲಿ ಒಂದು ಲಕ್ಷ ಜನರಿಗೆ ಸೋಂಕು ತಗುಲಿದೆ ಎಂದರೇ ತಮಾಷೆಯ ವಿಷಯವಲ್ಲ. ಇನ್ನಾದರೂ ಗಂಭೀರವಾಗಿ ಕೋವಿಡ್‌ ಮಾರ್ಗಸೂಚಿ ಪಾಲಿಸೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT