ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಪ್ರಜಾಪ್ರಭುತ್ವದ ಆಧಾರ ಸ್ತಂಭ: ರಂಗಕರ್ಮಿ ಜನ್ನಿ ಅಭಿಪ್ರಾಯ

'ದೇಶವನ್ನು ಒಟ್ಟುಗೂಡಿಸಿದ ಅಂಬೇಡ್ಕರ್‌'
Last Updated 3 ಮೇ 2019, 11:54 IST
ಅಕ್ಷರ ಗಾತ್ರ

ಮೈಸೂರು: ಅಂಬೇಡ್ಕರ್‌ ಅವರು ಮೀಸಲಾತಿಯನ್ನು ಅತ್ಯಂತ ವೈಜ್ಞಾನಿಕ ಹಾಗೂ ಐತಿಹಾಸಿಕ ಪರಂಪರೆಯ ಆಧಾರದಲ್ಲಿ ಜಾರಿಗೊಳಿಸಿದ್ದರು. ಪ್ರಜಾಪ್ರಭುತ್ವದ ಆಧಾರಸ್ತಂಭಗಳಲ್ಲಿ ಮೀಸಲಾತಿ ವ್ಯವಸ್ಥೆಯೂ ಒಂದು ಎಂದು ರಂಗಕರ್ಮಿ ಜನಾರ್ಧನ್‌ (ಜನ್ನಿ) ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯ ಕಾನೂನು ಶಾಲೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 128ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂಬ ಮಾತು ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿದೆ. ಇಂತಹ ಸಂದರ್ಭದಲ್ಲಿ ಅಂಬೇಡ್ಕರ್‌ ಅವರ ಮೀಸಲಾತಿ ವಿಧಾನವನ್ನು ಆಳವಾಗಿ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ಅಂಬೇಡ್ಕರ್‌ ಅವರು ಪಾಕಿಸ್ತಾನದ ಮಹಮ್ಮದ್ ಅಲಿ ಜಿನ್ನಾ ಅವರ ರೀತಿಯಲ್ಲಿ ಚಿಂತಿಸಿದ್ದರೆ ಈ ದೇಶ ಮತ್ತೆ ಇಬ್ಭಾಗವಾಗುತಿತ್ತು. ಜನರ ಮನಸ್ಸು ಒಡೆದು ರಕ್ತಪಾತ ಆಗುವ ಸಾಧ್ಯತೆಯಿತ್ತು. ಆದರೆ ಅಂಬೇಡ್ಕರ್‌ ಅವರಲ್ಲಿದ್ದ ದೇಶಪ್ರೇಮ, ಬದ್ಧತೆ ಮತ್ತು ಇಚ್ಛಾಶಕ್ತಿ ಅದಕ್ಕೆ ಅವಕಾಶ ನೀಡಲಿಲ್ಲ. ಅವರು ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ ಮಾಡಿದರು ಎಂದು ಬಣ್ಣಿಸಿದರು.

ಮನುಷ್ಯರನ್ನು ಮನುಷ್ಯರಂತೆ ನೋಡದೆ ಇರುವ ಕೆಟ್ಟ ಸಂಸ್ಕೃತಿಯುಳ್ಳ ಜನರು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಅಂಬೇಡ್ಕರ್‌ ಅವರು ದಲಿತರು ಮತ್ತು ಶೋಷಿತರಿಗೆ ಆಶಾಕಿರಣ ಎನಿಸಿದ್ದಾರೆ. ಈ ಕಾರಣಗಳಿಂದ ಅಂಬೇಡ್ಕರ್ ಮಹಾತ್ಮರಲ್ಲೇ ಮಹಾತ್ಮರಾಗುತ್ತಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ವಿ.ವಿ. ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಸಾಮಾಜಿಕ, ಶೈಕ್ಷಣಿಕ ಅಸಮತೋಲನವನ್ನು ಹೋಗಲಾಡಿಸಲು ಅಂಬೇಡ್ಕರ್‌ ವಹಿಸಿರುವ ಪಾತ್ರ ಅಪಾರ ಎಂದು ಹೇಳಿದರು.

ಕಾರ್ಮಿಕರ ದಿನಾಚರಣೆಯ ದಿನ ಅಂಬೇಡ್ಕರ್‌ ಅವರನ್ನು ಸ್ಮರಿಸಬೇಕು. ಕಾರ್ಮಿಕರಿಗೆ ಕೆಲಸದ ಅವಧಿ ಮತ್ತು ಕನಿಷ್ಠ ವೇತನ ನಿಗಧಿ, ಪಿಎಫ್‌ ಮತ್ತು ಇಎಸ್‌ಐ ಮುಂತಾದ ಸೌಲಭ್ಯಗಳು ಲಭಿಸುವಂತೆ ಮಾಡಿದ ಶ್ರೇಯ ಅವರಿಗೆ ಸಲ್ಲಬೇಕು ಎಂದು ತಿಳಿಸಿದರು.

‘ಅಂಬೇಡ್ಕರ್‌ ಅವರು ನೀಡಿರುವ ಸಂವಿಧಾನದಿಂದಾಗಿ ಈ ದೇಶದಲ್ಲಿ ನಮಗೆ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ. ಆರ್‌ಬಿಐ ಸ್ಥಾಪನೆಗೆ ಕಾರಣರಾಗಿ ದೇಶದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿಕೊಟ್ಟರು. ಎಲ್ಲ ಧರ್ಮ, ಜಾತಿಯ ಜನರಿಗೆ ಶಿಕ್ಷಣ, ರಾಜಕೀಯ, ಉದ್ಯೋಗದ ಹಕ್ಕು ದೊರಕುವಂತೆ ಮಾಡಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು.

ಮೈಸೂರು ವಿ.ವಿ. ಕಾನೂನು ಅಧ್ಯಯನ ವಿಭಾಗದ ಡೀನ್‌ ಪ್ರೊ.ಸಿ.ಬಸವರಾಜು, ಪತ್ರಕರ್ತ ಅಂಶಿಪ್ರಸನ್ನ ಕುಮಾರ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT