ಬುಧವಾರ, ನವೆಂಬರ್ 25, 2020
25 °C
ಆರೋಗ್ಯ ಕವಚ ಬಾಂಡ್‌ ವಿತರಣೆ: ಆರೋಗ್ಯ ಹಸ್ತ ಅನುಷ್ಠಾನ ಸಮಿತಿ ಅಧ್ಯಕ್ಷ ಧ್ರುವನಾರಾಯಣ

ಮೈಸೂರು: ಕಾಂಗ್ರೆಸ್‌ ಪಕ್ಷದ ಬಲ ಹೆಚ್ಚಿಸಿದ ‘ಆರೋಗ್ಯಹಸ್ತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೊರೊನಾ ನಿಯಂತ್ರಣಕ್ಕೆ ಹಮ್ಮಿಕೊಂಡಿದ್ದ ‘ಆರೋಗ್ಯ ಹಸ್ತ’ ಕಾರ್ಯಕ್ರಮದಿಂದ ಪಕ್ಷಕ್ಕೆ ಹೆಚ್ಚಿನ ಬಲ ಲಭಿಸಿದೆ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಕೆಪಿಸಿಸಿ ಆರೋಗ್ಯ ಹಸ್ತ ಅನುಷ್ಠಾನ ಸಮಿತಿಯ ಅಧ್ಯಕ್ಷ ಆರ್‌.ಧ್ರುವನಾರಾಯಣ ಹೇಳಿದರು.

ಮೈಸೂರು ಗ್ರಾಮಾಂತರ ಕಾಂಗ್ರೆಸ್‌ ವತಿಯಿಂದ ಗುರುವಾರ ಆಯೋಜಿಸಿದ್ದ ವರುಣಾ ವಿಧಾನಸಭಾ ಕ್ಷೇತ್ರದ ‘ಕೆಪಿಸಿಸಿ ಆರೋಗ್ಯ ಹಸ್ತ ಕೊರೊನಾ ವಾರಿಯರ್‌ ಆರೋಗ್ಯ ಕವಚ ಬಾಂಡ್’ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಪಿಸಿಸಿ ವತಿಯಿಂದ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ನಡೆಸಲಾಗಿದೆ. ಪಕ್ಷದ ಕಾರ್ಯಕರ್ತರು ಕೊರೊನಾ ವಾರಿಯರ್‌ಗಳಾಗಿ ಮನೆಮನೆಗೆ ಭೇಟಿ ನೀಡಿದ್ದಾರೆ. ಕಾರ್ಯ ಕರ್ತರ ಈ ಕೆಲಸಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು.

‘ಕಾರ್ಯಕರ್ತರು ಜನರ ಜತೆಗೆ ಇದೇ ರೀತಿ ಸಂಪರ್ಕ ಇರಿಸಿಕೊಳ್ಳಬೇಕು. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗೆ ನಾವು ಸಜ್ಜಾಗಬೇಕಿದೆ. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಇನ್ನಷ್ಟು ಜವಾಬ್ದಾರಿಯಿಂದ ಕೆಲಸ ನಿರ್ವಹಿ ಸಬೇಕು. ತಳಮಟ್ಟದಿಂದಲೇ ಪಕ್ಷವನ್ನು ಸಜ್ಜುಗೊಳಿಸಬೇಕು’ ಎಂದರು.

‘ಕೆಪಿಸಿಸಿಯು ಆರೋಗ್ಯ ಹಸ್ತ ಅನುಷ್ಠಾನ ಸಮಿತಿಯ ಅಧ್ಯಕ್ಷನಾಗಿ ನನ್ನನ್ನು ನೇಮಿಸಿತ್ತು. ಕಳೆದ 2–3 ತಿಂಗಳಲ್ಲಿ ರಾಜ್ಯದ 26 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಆರೋಗ್ಯ ಹಸ್ತದಂತಹ ಕಾರ್ಯಕ್ರಮವನ್ನು ಬೇರೆ ಯಾವುದೇ ರಾಜಕೀಯ ಪಕ್ಷವೂ ಮಾಡಿಲ್ಲ’ ಎಂದು ತಿಳಿಸಿದರು.

ಕೋವಿಡ್‌ ಸಂದರ್ಭದಲ್ಲೂ ರಾಜ್ಯ ಸರ್ಕಾರ ಭ್ರಷ್ಟಾಚಾರ ಮಾಡಿದೆ. ಆರೋಗ್ಯ ಇಲಾಖೆ ನಿಷ್ಕ್ರಿಯವಾಗಿದೆ. ಆದ್ದರಿಂದ ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಪಕ್ಷ ಮಾಡಿದೆ. ಕೋವಿಡ್‌ ನಿಯಂತ್ರಣಕ್ಕೆ ಸಾಕಷ್ಟು ಶ್ರಮವಹಿಸಿದೆ ಎಂದರು.

ಶಾಸಕ ಯತೀಂದ್ರ ಸಿದ್ದರಾಮಯ್ಯ, ಮೈಸೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಮುಖಂಡರಾದ ಬಸವರಾಜು, ಮಹೇಶ್, ಮಂಜುನಾಥ್, ಗಿರೀಶ್, ಶಿವ ನಾಗಪ್ಪ, ಮಾರುತಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಂಗಸ್ವಾಮಿ, ಮುದ್ದೇಗೌಡ ಪಾಲ್ಗೊಂಡಿದ್ದರು.

‘ಸರ್ಕಾರಿ ಅಧಿಕಾರಿಗಳು ಪಕ್ಷದ ಏಜೆಂಟ್’

ಕಾಂಗ್ರೆಸ್‌ ಮುಖಂಡ ವಿನಯ್‌ ಕುಲಕರ್ಣಿ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಧ್ರುವನಾರಾಯಣ, ‘ಕಾನೂನಿನ ಚೌಕಟ್ಟಿನಲ್ಲಿ ತನಿಖೆ ನಡೆಯಲಿ. ವಿನಯ್ ಕುಲಕರ್ಣಿ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬ ವಿಶ್ವಾಸ ನಮಗಿದೆ’ ಎಂದರು.

‘ಸರ್ಕಾರವು ಇ.ಡಿ, ಸಿಬಿಐ ಮುಂತಾದ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸುತ್ತಿದೆ. ಸರ್ಕಾರಿ ಅಧಿಕಾರಿಗಳು ಪಕ್ಷದ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ’ ಎಂದು ಕಿಡಿಕಾರಿದರು.

‘ವರುಣಾ ತಾಲ್ಲೂಕು ರಚನೆ ಸರಿಯಲ್ಲ’

ವರುಣಾ ಪ್ರತ್ಯೇಕ ತಾಲ್ಲೂಕು ರಚನೆ ಕುರಿತ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಯತೀಂದ್ರ ಸಿದ್ದರಾಮಯ್ಯ, ‘ವರುಣಾವನ್ನು ತಾಲ್ಲೂಕು ಕೇಂದ್ರವಾಗಿಟ್ಟುಕೊಂಡು ಹೊಸ ತಾಲ್ಲೂಕು ರಚನೆಯ ವಿಚಾರ ನನ್ನ ಗಮನಕ್ಕೆ ಬಂದಿಲ್ಲ’ ಎಂದು ಹೇಳಿದರು.

‘ವರುಣಾ ಮೈಸೂರು ನಗರಕ್ಕೆ ತುಂಬಾ ಸಮೀಪದಲ್ಲಿದೆ. ಆದ್ದರಿಂದ ವರುಣಾವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುವುದು ಅಷ್ಟು ಸಮಂಜಸ ಎನಿಸದು ಎಂಬುದು ನನ್ನ ಅಭಿಪ್ರಾಯ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.