ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಮುಷ್ಕರ ವಾಪಸ್ ಇಲ್ಲ, ಬೇಡಿಕೆ ಈಡೇರುವವರೆಗೂ ಕರ್ತವ್ಯಕ್ಕೆ ಗೈರು

ಆಶಾ ಕಾರ್ಯಕರ್ತೆಯರ ಶ್ಲಾಘಿಸಿದ ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕಚೇರಿಗೆ ಬುಧವಾರ ಮುತ್ತಿಗೆ ಹಾಕಲು ಬಂದ ಆಶಾ ಕಾರ್ಯಕರ್ತೆಯರನ್ನು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಶ್ಲಾಘಿಸಿದರು.

‘ಕಳೆದ 4 ತಿಂಗಳುಗಳಿಂದ ಅತ್ಯುತ್ತಮವಾದ ಸೇವೆಯನ್ನು ಸಲ್ಲಿಸಿದ್ದೀರಿ. ನಾನು ನಿಮಗೆ ಧನ್ಯವಾದ ಹೇಳುತ್ತೇನೆ’ ಎನ್ನುತ್ತಲೇ ಮಾತಿಗಿಳಿದ ಅವರು, ಆಶಾ ಕಾರ್ಯಕರ್ತೆಯರ ಮನವೊಲಿಸಲು ಯತ್ನಿಸಿದರು.

ಜಿಲ್ಲಾಡಳಿತದಿಂದ ಏನು ಬೇಕೋ ಆ ನೆರವನ್ನು ನೀಡಲು ಸಿದ್ಧ. ಆದರೆ, ಗೌರವಧನ ಏರಿಕೆ ವಿಚಾರ ಸರ್ಕಾರಕ್ಕೆ ಸಂಬಂಧಿಸಿದ್ದು. ಮನವಿಪತ್ರವನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರ ಮಾತುಕತೆಗೆ ಆಹ್ವಾನ ನೀಡಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಯತ್ನವನ್ನು ಕೈಬಿಟ್ಟರು. ಪ್ರತಿಭಟನೆಗಷ್ಟೇ ತಮ್ಮ ಹೋರಾಟ ಸೀಮಿತಗೊಳಿಸಿ ಮನೆಯತ್ತ ಹೆಜ್ಜೆ ಹಾಕಿದರು.

ಈ ಕುರಿತು ‘ಪ‍್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯ ಸಲಹೆಗಾರರಾದ ಸಂಧ್ಯಾ, ‘ಸದ್ಯಕ್ಕೆ ಮಾತುಕತೆಗೆ ಮಾತ್ರವೇ ಸರ್ಕಾರ ಆಹ್ವಾನ ನೀಡಿದೆ. ಮಾತುಕತೆ ಫಲಪ್ರದವಾಗುವವರೆಗೂ ಮುಷ್ಕರವನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ’ ಎಂದು ತಿಳಿಸಿದರು.

ಎಐಯುಟಿಯುಸಿ ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ಶುಭಮಂಗಳಾ, ಕೋಮಲಾ ಹಾಗೂ ಇತರರು ಇದ್ದರು.

ಅಂಬೇಡ್ಕರ್ ನಿವಾಸದ ಮೇಲಿನ ದಾಳಿಗೆ ಖಂಡನೆ

ಮೈಸೂರು: ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ನಿವಾಸದ ಮೇಲೆ ಈಚೆಗೆ ನಡೆದ ದಾಳಿಯನ್ನು ಖಂಡಿಸಿ ರಾಜ್ಯ ದಲಿತ ಹೋರಾಟ ಸಮಿತಿಯ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಗೌರವಿಸುತ್ತದೆ. ಈಗ ಅವರ ನಿವಾಸದ ಮೇಲೆ ನಡೆದ ದಾಳಿಯಿಂದ ದೇಶವೇ ತಲೆತಗ್ಗಿಸುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.‌

ಸರ್ಕಾರ ಕೂಡಲೇ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು. ಅವರಿಗೆ ಕಠಿಣ ಶಿಕ್ಷೆ ನೀಡಬೇಕು. ಅವರ ಪೌರತ್ವವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಎಂ.ಪರಮೇಶ, ನಂಜಪ್ಪ, ರಾಜಣ್ಣ ಹಾಗೂ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು