ಗುರುವಾರ , ನವೆಂಬರ್ 21, 2019
21 °C

ಓದಿನ ಮೂಲಕ ಸಂಘಟಿತರಾಗಲಿ: ಪ.ಮಲ್ಲೇಶ್‌ ಕಿವಿಮಾತು

Published:
Updated:
Prajavani

ಮೈಸೂರು: ‘ಓದಿನ ಮೂಲಕ ಯುವಕರು ಜಾಗೃತರಾಗಿ ಸಮಾಜದ ಅಭಿವೃದ್ಧಿಗೆ ತುಡಿಯಬೇಕು’ ಎಂದು ಸಮಾಜವಾದಿ ಹೋರಾಟಗಾರ ಪ.ಮಲ್ಲೇಶ್‌ ಕಿವಿಮಾತು ಹೇಳಿದರು.

ಫಿಂಚ್ ಪಬ್ಲಿಷರ್ಸ್‌ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕ ಬಸವರಾಜು ಕುಕ್ಕರಹಳ್ಳಿ ಅವರ ‘ಕಾಲನೊದ್ದವರು’ ನೀಳ್ಗತೆ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಬಹುತೇಕ ಎಲ್ಲ ಪ್ರಗತಿಪರ ಸಂಘಟನೆಗಳು ರೂಪುಗೊಂಡಿದ್ದು ಓದು ಹಾಗೂ ಚರ್ಚೆಯ ಮೂಲಕವೇ. ಗಾಂಧಿ, ಅಂಬೇಡ್ಕರ್‌, ಲೋಹಿಯಾ ಅವರ ಕೃತಿಗಳನ್ನು ಓದಿಕೊಂಡು ಚರ್ಚಾ ಕೂಟಗಳನ್ನು ಹಮ್ಮಿಕೊಳ್ಳುತ್ತಿದ್ದ ಕಾಲವಿತ್ತು. ಆ ಚರ್ಚೆಗಳಲ್ಲಿ ಸಮಾಜದ ಹುಳುಕುಗಳನ್ನು ಪತ್ತೆ ಮಾಡಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿತ್ತು. ಆ ಬಳಿಕವೇ, ಹಲವು ಸಂಘಟನೆಗಳು ರೂಪುಗೊಂಡು ಸಮಾಜವನ್ನು ಸಕಾರಾತ್ಮಕವಾಗಿ ಮುಂದುವರಿಸಲು ಸಾಧ್ಯವಾಯಿತು ಎಂದು ವಿವರಿಸಿದರು.

ಹೆಚ್ಚಿದ ಅಗತ್ಯ: ಈಗ ಓದಿನ ಮೂಲಕ ಚರ್ಚಿಸಿ ಸಂಘಟಿತರಾಗಬೇಕಾದ ಅಗತ್ಯ ಹೆಚ್ಚಾಗಿದೆ. ಇಂದು ಭಾರತೀಯ ಸಮಾಜ ಅಪಾಯದ ಅಂಚಿಗೆ ಬಂದುನಿಂತಿದೆ. ಯಾರ ಮನೆ ಬಾಗಿಲಿಗೆ ಯಾವಾಗ ಬೇಕಾದರೂ ಬಂಧನದ ವಾರೆಂಟ್ ಯಾವ ಕಾರಣಕ್ಕೆ ಬೇಕಾದರೂ ಬರಬಹುದು. ಸೈದ್ಧಾಂತಿಕ ವಿಚಾರಗಳನ್ನು ಧರ್ಮದ ಮೂಲಕ ಗುರುತಿಸುವ ಕೆಲಸವೂ ಆಗುತ್ತಿದೆ. ಇವೆಲ್ಲಕ್ಕೂ ಜಾಗೃತಿಯೊಂದೇ ಪರಿಹಾರ. ಅದು ಓದಿನ ಮೂಲಕವಷ್ಟೇ ಬರಬಲ್ಲದು ಎಂದು ಅವರು ಅಭಿಪ್ರಾಯಪಟ್ಟರು.

ವಿವೇಕಾನಂದರ ವಿಚಾರಗಳನ್ನು ಹಿಂದೂ ಧರ್ಮದ ವಿಚಾರಗಳೆಂದು ಬಿಂಬಿಸುವ ಪ್ರಯತ್ನ ನಡೆದಿದೆ. ವಿಚಾರಗಳು ಯಾರ ಕೈಗೆ ಸಿಲುಕುತ್ತಿವೆ ಎಂದು ಚಿಂತಿಸಿ, ಪ್ರಶ್ನಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆವಹಿಸಿದ್ದ ಸಾಹಿತಿ ಪದ್ಮಾ ಶ್ರೀರಾಮ ಮಾತನಾಡಿ, ‘ಬಸವರಾಜು ಕುಕ್ಕರಹಳ್ಳಿ ಅವರ ಬರವಣಿಗೆಯಲ್ಲಿ ಗ್ರಾಮೀಣ ಭಾಷೆಯ ಸೊಗಡಿದೆ. ಹಳ್ಳಿಯ ಚಿತ್ರಣವನ್ನು ಸಮಗ್ರವಾಗಿ ಕಟ್ಟಿಕೊಟ್ಟಿದ್ದಾರೆ. ಮಹಿಳೆಯರ ಸಮಸ್ಯೆಗಳೂ ಚಿತ್ರಿತಗೊಂಡಿವೆ. ಮೈಸೂರಿನ ಕುಕ್ಕರಹಳ್ಳಿಯ ವಿವರಣೆಯು ‘ಕಾಲನೊದ್ದವರು’ ಕೃತಿಯಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ’ ಎಂದು ಹೇಳಿದರು.

ಲೇಖಕ ಅಪ್ಪಗೆರೆ ಸೋಮಶೇಖರ್‌ ಅವರು ಕೃತಿ ಕುರಿತು ಮಾತನಾಡಿದರು. ಛಾಯಾಗ್ರಾಹಕ ಪರಮೇಶ್ವರ್‌ ಗುರುಸ್ವಾಮಿ ಅತಿಥಿಯಾಗಿ ಭಾಗವಹಿಸಿದ್ದರು. ಲೇಖಕ ವೈ.ಎಸ್.ಅಭಿಷೇಕ್‌ ಅವರು ಗಂಗಾಧರ ಚಿತ್ತಾಲ ಅವರ ‘ಹರಿವ ನೀರಿದು’ ಕವಿತೆ ವಾಚಿಸಿದರು. ಕೆ.ಆರ್.ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಿ.ಎಂ.ಶ್ವೇತಾ ನಿರೂಪಿಸಿದರು.

ಪ್ರತಿಕ್ರಿಯಿಸಿ (+)