ಬುಧವಾರ, ಆಗಸ್ಟ್ 21, 2019
22 °C
ಮೈಸೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಂ.ಶಿವಣ್ಣ ಹೇಳಿಕೆ

ಸುಪ್ರೀಂ ತೀರ್ಪಿನ ಬಳಿಕ ಅಭ್ಯರ್ಥಿ ಆಯ್ಕೆ

Published:
Updated:

ಮೈಸೂರು: ‘ಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟ್‌ ಮೊರೆ ಹೊಕ್ಕಿದ್ದು, ಅಂತಿಮ ತೀರ್ಪು ಪ್ರಕಟಗೊಂಡ ಬಳಿಕವಷ್ಟೇ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ, ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಗೆ ವರಿಷ್ಠರು ಚಾಲನೆ ನೀಡಲಿದ್ದಾರೆ’ ಎಂದು ಮೈಸೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಂ.ಶಿವಣ್ಣ (ಕೋಟೆ) ತಿಳಿಸಿದರು.

‘ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಕುರಿತ ಚರ್ಚೆ ನಡೆದಿದೆ. ನಾವು ಸಂಘಟನೆಗೆ ಆದ್ಯತೆ ನೀಡುತ್ತಿದ್ದೇವೆ’ ಎಂದು ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಗ್ರಾಮಾಂತರ ಜಿಲ್ಲಾ ಘಟಕದ ವ್ಯಾಪ್ತಿಗೆ ಬರುವ ಎಂಟು ಮಂಡಳಗಳಿಂದ 2 ಲಕ್ಷ ಸದಸ್ಯರ ನೋಂದಣಿ ಗುರಿಯಿದೆ. ಇದೂವರೆಗೂ 40 ಸಾವಿರ ಸದಸ್ಯರ ನೋಂದಣಿಯಾಗಿದೆ. ಪಕ್ಷದ ವರಿಷ್ಠರು ಖಡಕ್ ಸೂಚನೆ ನೀಡಿದ್ದು, ಆ.20ರೊಳಗೆ ಉಳಿದ 1.60 ಲಕ್ಷ ಸದಸ್ಯರ ನೋಂದಣಿಯನ್ನು ಪೂರ್ಣಗೊಳಿಸಲಾಗುವುದು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪ್ರಸ್ತುತ ನಂಜನಗೂಡಿನಲ್ಲಷ್ಟೇ ನಮ್ಮ ಶಾಸಕರಿದ್ದಾರೆ. ಉಳಿದ ಏಳು ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಗೆ ಆದ್ಯತೆ ನೀಡಿದ್ದೇವೆ. ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಾಗಿ ಈಗಲೇ ಸಂಘಟನೆ ಆರಂಭಿಸಿದ್ದೇವೆ. ರಾಜ್ಯದ ಈ ಹಿಂದಿನ ಸಮ್ಮಿಶ್ರ ಸರ್ಕಾರದ ನಡೆಯಿಂದ ಬೇಸತ್ತಿರುವ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಸಂಘಟನೆ ಬಲವರ್ಧನೆಗೊಳಿಸಲಿದ್ದೇವೆ’ ಎಂದು ಹೇಳಿದರು.

‘ಜಿಲ್ಲಾ ಘಟಕ ತನ್ನ ವ್ಯಾಪ್ತಿಯ 2124 ಬೂತ್‌ಗಳಿಗೆ ಈಗಾಗಲೇ ಸೂಚನೆ ನೀಡಿದೆ. ಎ,ಬಿ,ಸಿ ಎಂದು ವರ್ಗೀಕರಿಸಿಕೊಂಡು ಸದಸ್ಯತ್ವ ನೋಂದಣಿ ನಡೆಸಿದ್ದೇವೆ. ಪ್ರತಿ ಬೂತ್‌ನಲ್ಲಿ ಐದು ಸಸಿ ನೆಡುವ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಇದೂವರೆವಿಗೂ 500 ಸಸಿ ನೆಡಲಾಗಿದೆ. ದೇಶದಲ್ಲಿ 12 ಕೋಟಿ ಸದಸ್ಯರನ್ನು ಹೊಂದಿರುವ ಏಕೈಕ ಪಕ್ಷ ಬಿಜೆಪಿಯಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಸದಸ್ಯತಾ ಪ್ರಮುಖ ಹೇಮಂತ್‌ಕುಮಾರ್ ಗೌಡ, ಜಿಲ್ಲಾ ಸಹ ಸದಸ್ಯತಾ ಪ್ರಮುಖ ಬಾಲಕೃಷ್ಣ, ಕಾರ್ಯದರ್ಶಿ ಬಿ.ಪಿ.ಬೋರೇಗೌಡ ಪತ್ರಿಕಾಗೋಷ್ಠಿಯಲ್ಲಿದ್ದರು.

Post Comments (+)