ಬುಧವಾರ, ಜುಲೈ 28, 2021
29 °C
ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿಕೆ

ಬಿಜೆಪಿಗೆ ಶೋಷಿತರ ಕಾಳಜಿಯಿಲ್ಲ: ಡಾ.ಎಚ್.ಸಿ.ಮಹದೇವಪ್ಪ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಬಿಜೆಪಿಯವರು ಹೇಳುವುದು ಒಂದು, ಮಾಡುವುದು ಇನ್ನೊಂದು. ದಲಿತರು, ಹಿಂದುಳಿದವರು, ಶೋಷಿತರ ಬಗ್ಗೆ ಇವರಿಗೆ ಕಿಂಚಿತ್‌ ಕಾಳಜಿಯಿಲ್ಲ’ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಶುಕ್ರವಾರ ಇಲ್ಲಿ ಟೀಕಿಸಿದರು.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿಯಾಗಿ, ಒಂದು ತಾಸಿಗೂ ಹೆಚ್ಚಿನ ಸಮಯ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿಂದುಳಿದವರಿಗೆ ಅವಕಾಶ ನೀಡಿರಬಹುದು. ಆದರೆ, ಮಂಡಲ್ ಆಯೋಗದ ವರದಿ ಜಾರಿಗೊಳಿಸಲು ವಿ.ಪಿ.ಸಿಂಗ್ ಮುಂದಾದಾಗ ರಥಯಾತ್ರೆ ಹೊರಟವರು ಯಾರು? ಇದೇ ಬಿಜೆಪಿಯ ಲಾಲ್‌ಕೃಷ್ಣ ಅಡ್ವಾಣಿ ಅವರಲ್ಲವೇ?’ ಎಂದು ಮಹದೇವಪ್ಪ ಕಿಡಿಕಾರಿದರು.

‘ಜಾತಿ ಗುರುತಿಸಿ ಸಚಿವ ಸ್ಥಾನ ನೀಡುವುದು ಮತ್ತು ಅದನ್ನೇ ಹೇಳಿಕೊಳ್ಳುವುದು ಜಾತ್ಯತೀತ ವ್ಯವಸ್ಥೆಗೆ ಮಾಡಿದ ಅಪಮಾನ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಸುತ್ತೂರು ಮತ್ತು ನಮ್ಮೂರು ಹದಿನಾರು ಅಕ್ಕಪಕ್ಕದ ಗ್ರಾಮಗಳು. ನಾನು ಶ್ರೀಗಳನ್ನು ಆಗಾಗ್ಗೆ ಭೇಟಿ ಆಗುತ್ತೇನೆ. ಇಂದಿನ ಭೇಟಿ ವಿಶೇಷವಲ್ಲ. ಅವರ ಪೂರ್ವಾಶ್ರಮದ ಮಾತೃಶ್ರೀ ನಿಧನರಾದ ಬಳಿಕ ಭೇಟಿ ಆಗಿರಲಿಲ್ಲ. ಈಗ ಭೇಟಿಯಾಗಿ ಮಾತನಾಡಿದೆಯಷ್ಟೇ’ ಎಂದು ಮಹದೇವಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.