ಶನಿವಾರ, ಆಗಸ್ಟ್ 24, 2019
23 °C

ಕಾವೇರಿ ನದಿಯಲ್ಲಿ ಮುಂದುವರಿದ ಪ್ರವಾಹ

Published:
Updated:

ಮೈಸೂರು: ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಶ್ರೀರಂಗಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದೆ.

ಕೆಆರ್‌ಎಸ್ ಜಲಾಶಯದಿಂದ ಭಾನುವಾರ ತಡರಾತ್ರಿ 1.60 ಲಕ್ಷ ಕ್ಯುಸೆಕ್ ನೀರು ಬಿಟ್ಟ ಪರಿಣಾಮ ಈ ಸ್ಥಿತಿ ಉಂಟಾಯಿತು. ಬಳಿಕ ಹೊರಹರಿವು ತಗ್ಗಿಸಲಾಯಿತು. ಶ್ರೀರಂಗಪಟ್ಟಣ ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ ಬಳಿ ಕಾವೇರಿ ನದಿಯ ಅಪಾರ ಪ್ರಮಾಣದ ನೀರು ಲೋಕಪಾವನಿ ನದಿಗೆ ನುಗ್ಗಿದೆ. ಇದರಿಂದಾಗಿ ಸಂಗಮ ಸ್ಥಳದಿಂದ ಒಂದೂವರೆ ಕಿ.ಮೀ ದೂರದಲ್ಲಿರುವ ಬೆಂಗಳೂರು- ಮೈಸೂರು ಹೆದ್ದಾರಿವರೆಗೆ ನೀರು ಚಾಚಿಕೊಂಡಿದೆ.

ದೊಡ್ಡ ಗೋಸಾಯಿಘಾಟ್ ಬಳಿ ನಡುಗಡ್ಡೆಯಲ್ಲಿರುವ ಈಶ್ವರನ ಗುಡಿ ಸಂಪೂರ್ಣ ಮುಳುಗಿದೆ. ಗಂಜಾಂ ನಿಮಿಷಾಂಬಾ ದೇವಾಲಯದ ಮೆಟ್ಟಿಲುಗಳವರೆಗೆ ನೀರು ಬಂದಿದೆ. ನದಿ ತೀರದಲ್ಲಿ ಶ್ರಾದ್ಧಾ ಕಾರ್ಯಗಳಿಗೆ ತೊಡಕು ಉಂಟಾಗಿದ್ದು, ಬೀದಿ ಬದಿಯಲ್ಲಿ ಅಪರ ಕರ್ಮಗಳು ನಡೆಯುತ್ತಿವೆ.


ನಿಮಿಷಾಂಬಾ ದೇವಾಲಯ ಆವರಣದ ಅಂಗಡಿ ಮುಂಗಟ್ಟುಗಳು ಜಲಾವೃತವಾಗಿವೆ

ಹುಣಸೂರು ತಾಲ್ಲೂಕಿನ ನಿಲುವಾಗಿಲು ಬಳಿ ಹರವೆ ಗ್ರಾಮದ ನಿವಾಸಿ ರತ್ಮಮ್ಮ (65) ಕಾಲು ಹಾದಿಯಲ್ಲಿ ನಡೆಯುವಾಗ ಜಾರಿ ಲಕ್ಷ್ಮಣತೀರ್ಥ ನದಿಗೆ ಬಿದ್ದು ಮೃತಪಟ್ಟಿದ್ದಾರೆ. ಕರ್ಣಕುಪ್ಪೆ ಗ್ರಾಮದಲ್ಲಿ ಮಳೆ ನೀರಿನಿಂದ ತೋಯ್ದಿದ್ದ ಮನೆ ಗೋಡೆ ಕುಸಿದು ಮಹಿಳೆ ಮತ್ತು 5 ವರ್ಷದ ಮಗು ಗಾಯಗೊಂಡಿದ್ದಾರೆ.

ಪ್ರವಾಹದಲ್ಲಿ ವನ್ಯಜೀವಿಗಳೂ ಕೊಚ್ಚಿಕೊಂಡು ಹೋಗಿವೆ. ಕಾಡೆಮ್ಮೆಯ ಶವವೊಂದು ಲಕ್ಷ್ಮಣತೀರ್ಥ ನದಿಯಲ್ಲಿ ತೇಲಿಕೊಂಡು ಬಂದಿದೆ. ವರುಣಾ ಸಮೀಪ ಸುತ್ತೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದಿದೆ. ಭಾನುವಾರ ಕಬಿನಿ ನದಿಗೆ ಈಜಲು ಧುಮುಕಿದ್ದ ಪೂಜಾರಿ ವೆಂಕ
ಟೇಶ್‌, ಹೆಜ್ಜಿಗೆ ಸೇತುವೆ ಕೆಳಭಾಗ ಅಶ್ರಯ ಪಡೆದು ಸೋಮವಾರ ಹೊರಬಂದಿದ್ದಾರೆ. ಮೈಸೂರು ನಗರದ ದೇವರಾಜ ಮಾರುಕಟ್ಟೆ
ಯಲ್ಲಿ ಸೋಮವಾರ ಶಾರ್ಟ್‌ ಸರ್ಕಿಟ್ ಸಂಭವಿಸಿ 5 ಅಂಗಡಿಗಳು ಭಸ್ಮವಾಗಿವೆ.

ಕೊಳ್ಳೇಗಾಲ ತಾಲ್ಲೂಕಿನ ನದಿಪಾತ್ರದ ಐದು ಗ್ರಾಮಗಳು ಜಲಾವೃತವಾಗಿವೆ. ಶಿವನಸಮುದ್ರದ ಬಳಿ ಇರುವ ಬ್ರಿಟಿಷರ ಕಾಲದ ಐತಿಹಾಸಿಕ ವೆಸ್ಲಿ ಸೇತುವೆ ಮುಳುಗಿದೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು ಅಗಸರಹಳ್ಳಿಯಲ್ಲಿ ‌ನಾಲ್ಕು ವರ್ಷಗಳ ಹಿಂದೆ ₹ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಸೇತುವೆ ಕೊಚ್ಚಿ ಹೋಗಿದೆ. ರಾಮನಾಥಪುರ ಹೋಬಳಿಯ ಬಸವನಹಳ್ಳಿಯಿಂದ ಕೇರಳಾಪುರಕ್ಕೆ ಸಂಪರ್ಕ ಕಲ್ಪಿಸುವ ಹಿರಿಕೆರೆ ಕೊಡಿಯ ಸೇತುವೆ ಸೋಮವಾರ ಬೆಳಗಿನ ಜಾವ ಕುಸಿದಿದೆ.

ಸಕಲೇಶಪುರ ತಾಲ್ಲೂಕಿನ ಕೊರಡಿ ಗ್ರಾಮದ ಕೆ.ಇ.ಪ್ರಕಾಶ್‌ (61) ಅವರ ಮೃತದೇಹ ಜಪಾವತಿ ಹಳ್ಳದಲ್ಲಿ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ. ಕೇರಳದ ವಯನಾಡು ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಹೋಬಳಿ ಮುದ್ದನಹಳ್ಳಿಯ ಅಣ್ಣಯ್ಯ ಕಳೆದ ಗುರುವಾರದಿಂದ ನಾಪತ್ತೆಯಾಗಿದ್ದಾರೆ.

Post Comments (+)