ಸೋಮವಾರ, ಏಪ್ರಿಲ್ 19, 2021
31 °C
ಕುಕ್ಕೆ ಹೊತ್ತು ಬಿಸಿಲಿನಲ್ಲಿ ಮಾರಾಟ ಮಾಡಿದ ಹಣ ಕಳ್ಳರ ಪಾಲು

ಸೊಪ್ಪು ವ್ಯಾಪಾರಿಯನ್ನೂ ಬಿಡದ ಸರಗಳ್ಳರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದಲ್ಲಿ ಸರಗಳ್ಳರ ಅಟ್ಟಹಾಸ ಮುಂದುವರಿದಿದೆ. ಕುಕ್ಕೆ ಹೊತ್ತು ಬಿಸಿಲಿನಲ್ಲಿ ಸುತ್ತಿ ಸೊಪ್ಪು ವ್ಯಾಪಾರ ಮಾಡಿ ಗಳಿಸಿದ ₹ 1 ಸಾವಿರ ಹಣ ಹಾಗೂ ಕುತ್ತಿಗೆಯಲ್ಲಿದ್ದ 8ರಿಂದ 10 ಗ್ರಾಂನಷ್ಟು ಚಿನ್ನದ ಗುಂಡುಗಳುಳ್ಳ ಕರಿಮಣಿ ಸರವನ್ನು 55 ವರ್ಷದ ಮಹಿಳೆಯೊಬ್ಬರಿಂದ ಕಿತ್ತುಕೊಂಡು ಹೋಗಿದ್ದಾರೆ.

ಬೆಳಿಗ್ಗೆ 10.30ರ ಸಮಯದಲ್ಲಿ ಇಲ್ಲಿನ ಶಿವಾಜಿ ರಸ್ತೆಯ 10ನೇ ಕ್ರಾಸ್‌ನಲ್ಲಿ ಕುಕ್ಕೆಯನ್ನು ತಲೆ ಮೇಲೆ ಹೊತ್ತುಕೊಂಡು ಮಹಿಳೆಯೊಬ್ಬರು ಸೊಪ್ಪು ಮಾರಾಟ ಮಾಡುತ್ತಾ ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ನೀಲಿ ಬಣ್ಣದ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಮಹಿಳೆಯ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಚೀಲ ಹಾಗೂ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಿತ್ತುಕೊಂಡು ಹೋಗಿದ್ದಾನೆ.

‘ಮದುವೆಯಲ್ಲಿ ಕರಿಮಣಿ ಸರಕ್ಕೆ ಚಿನ್ನದ ಗುಂಡುಗಳನ್ನು ಹಾಕಿ ನೀಡಲಾಗಿತ್ತು. ಅಂದಿನಿಂದಲೂ ಜೋಪಾನವಾಗಿ ಎಷ್ಟೇ ಕಷ್ಟ ಬಂದರೂ ಗಿರವಿ ಇಡದೇ ಜತನದಿಂದ ಕಾಪಾಡಿಕೊಂಡಿದ್ದೆ. ಬಿಸಿಲಿನಲ್ಲಿ ಸುತ್ತಿ ಸೊಪ್ಪನ್ನು ಮಾರಾಟ ಮಾಡಿದ ಹಣವನ್ನು ಚೀಲದಲ್ಲಿ ಹಾಕಿದ್ದೆ. ಆದರೆ, ಕಳ್ಳನೊಬ್ಬ ಕ್ಷಣಾರ್ಧದಲ್ಲಿ ಕಿತ್ತುಕೊಂಡು ಹೋಗಿದ್ದಾನೆ’ ಎಂದು ಅವರು ರೋಧಿಸುತ್ತಿದ್ದರು.

ಬಂಗಾರದ ಸರವನ್ನು ಕಿತ್ತುಕೊಂಡು ಹೋಗುತ್ತಿದ್ದ ಸರಗಳ್ಳರು ಇದೀಗ ಬಡ ವ್ಯಾಪಾರಸ್ಥರನ್ನೂ ಬಿಡದೇ ಅವರು ಕಷ್ಟಪಟ್ಟು ಗಳಿಸಿದ ಹಣ ಹಾಗೂ ಒಂದಿಷ್ಟು ಒಡವೆಗಳನ್ನು ಕಿತ್ತುಕೊಂಡು ಹೋಗುತ್ತಿರುವುದು ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಘಟನೆ ನಡೆಯುತ್ತಿದ್ದಂತೆ ನಿಯಂತ್ರಣ ಕಚೇರಿ 100ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಸರಗಳ್ಳರನ್ನು ಹಿಡಿಯುವುದಕ್ಕೆ ಸಹಕಾರಿಯಾಗುತ್ತದೆ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಪ್ರಕರಣದ ಎನ್.ಆರ್.ಠಾಣೆಯಲ್ಲಿ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.