ಮಂಗಳವಾರ, ಸೆಪ್ಟೆಂಬರ್ 17, 2019
27 °C

ಚಿರತೆ ಮತ್ತು 2 ಮರಿಗಳ ಮೃತದೇಹ ಪತ್ತೆ

Published:
Updated:

ನಂಜನಗೂಡು: ತಾಲ್ಲೂಕಿನ ಹಲ್ಲೆರೆ ಗ್ರಾಮದ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದಲ್ಲಿನ ಜಮೀನೊಂದರಲ್ಲಿ 5 ವರ್ಷ ವಯಸ್ಸಿನ ಹೆಣ್ಣು ಚಿರತೆ ಹಾಗೂ 5 ತಿಂಗಳಿನ ಎರಡು ಮರಿಗಳ ಮೃತದೇಹಗಳು ಸೋಮವಾರ ಪತ್ತೆಯಾಗಿವೆ. ಮರಿಗಳಲ್ಲಿ ಒಂದು ಗಂಡಾದರೆ ಮತ್ತೊಂದು ಹೆಣ್ಣು.

ಮೇಲ್ನೋಟಕ್ಕೆ ದೇಹಗಳ ಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ. 100 ಮೀಟರ್‌ ಅಂತರದಲ್ಲಿ ಪತ್ತೆಯಾಗಿರುವ ಮೃತದೇಹಗಳನ್ನು ಗಮನಿಸಿದರೆ ವಿಷ ಹಾಕಿ ಕೊಲ್ಲಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಚಿರತೆಗಳು ಶನಿವಾರ ಮೃತಪಟ್ಟಿರಬಹುದು ಎಂದು ಅಂದಾಜು ಮಾಡಿದ್ದಾರೆ. ಮೃತದೇಹಗಳ ಅಂಗಾಂಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಚಿರತೆಗಳ ಹೆಜ್ಜೆ ಗುರುತುಗಳು ಜಮೀನಿನಲ್ಲಿ ಪತ್ತೆಯಾಗಿರುವುದರಿಂದ ಬೇರೆ ಕಡೆ ಮೃತಪಟ್ಟ ಚಿರತೆಗಳನ್ನು ಇಲ್ಲಿ ತಂದು ಹಾಕಿರುವ ಸಾಧ್ಯತೆ ಇಲ್ಲ ಎಂದು ಡಿಸಿಎಫ್ ಪ್ರಶಾಂತಕುಮಾರ್ ತಿಳಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ದೇಹಗಳ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ. ವಿಷ ಸೇವನೆಯಿಂದ ಮೃತಪಟ್ಟಿರುವುದಕ್ಕೂ ಸಾಕ್ಷ್ಯ ಲಭ್ಯವಾಗಿಲ್ಲ. ದೇಹದ ಅಂಗಾಂಗಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು. ಅಲ್ಲಿಂದ ವರದಿ ಬಂದ ಮೇಲಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ’ ಎಂದು ಹೇಳಿದ್ದಾರೆ.

Post Comments (+)