ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿ ಹೆಚ್ಚಿಸಿದ ‘ಬುರೇವಿ’: ಕೊಯ್ಲಿಗೆ ಕಂಟಕ

ಜಿಲ್ಲೆಯಾದ್ಯಂತ ಚಂಡಮಾರುತದ ಪ್ರಭಾವ: ದಿನವಿಡೀ ಮೋಡ ಕವಿದ ವಾತಾವರಣ
Last Updated 6 ಡಿಸೆಂಬರ್ 2020, 8:50 IST
ಅಕ್ಷರ ಗಾತ್ರ

ಮೈಸೂರು: ‘ಬುರೇವಿ’ ಚಂಡಮಾರುತದಿಂದಾಗಿ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿದಿದೆ. ಆಗಾಗ್ಗೆ ಸೋನೆ ಮಳೆ ಹನಿದಿದೆ. ಮುಂಜಾನೆ ಮಂಜು ಕವಿಯುವುದು ಹೆಚ್ಚಿದೆ.

ಬೆಳಗಿನ ಗಾಳಿಯ ತೇವಾಂಶ ಶೇ 90ರಿಂದ ಶೇ 92ರವರೆಗೂ ಇದ್ದರೆ, ಮಧ್ಯಾಹ್ನದ ತೇವಾಂಶ ಶೇ 77ರಿಂದ 79ರಷ್ಟಿದೆ. ದಿನವಿಡೀ ಕುಳಿರ್ಗಾಳಿ ಬೀಸುತ್ತಿದೆ. ಗಾಳಿಯ ವೇಗವೂ ಗಂಟೆಗೆ ಸರಾಸರಿ 3ರಿಂದ 4 ಕಿ.ಮೀ.ನಷ್ಟಿದೆ. ಇದರ ಪರಿಣಾಮ ಜಿಲ್ಲೆಯಲ್ಲಿ ಚಳಿ ಹೆಚ್ಚಿದೆ. ಮಧ್ಯಾಹ್ನದ ವೇಳೆಯೂ ವಾತಾವರಣ ತಂಪಿದೆ.

‘ಡಿಸೆಂಬರ್‌ ತಿಂಗಳಲ್ಲಿ ಮೈಸೂರು ಜಿಲ್ಲೆಯ ಕನಿಷ್ಠ ತಾಪಮಾನ ಸಹಜವಾಗಿ 17 ಡಿಗ್ರಿ ಸೆಲ್ಸಿಯಸ್‌ ಆಸುಪಾಸು ದಾಖಲಾಗುತ್ತದೆ. ಆದರೆ, ಈ ಬಾರಿ ತಿಂಗಳ ಆರಂಭದಲ್ಲೇ ಎರಡು ಡಿಗ್ರಿಯಷ್ಟು ಕುಸಿದಿದೆ. ಇದರಿಂದ ಜಿಲ್ಲೆಯ ಜನರಿಗೆ ಮೈ ಕೊರೆಯುವ ಚಳಿಯ ಅನುಭವವಾಗುತ್ತಿದೆ’ ಎಂದು ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಸಹ ಸಂಶೋಧಕ ಎನ್.ನರೇಂದ್ರಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

‘ಡಿ.2 ಹಾಗೂ 3ರಂದು ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಡಿ.4ರಂದು ಕನಿಷ್ಠ ತಾಪಮಾನದಲ್ಲಿ ಎರಡು ಡಿಗ್ರಿಯಷ್ಟು ಹೆಚ್ಚಳಗೊಂಡು, 17 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಡಿ.9ರವರೆಗೂ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಇದರ ನಂತರವೂ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಳಗೊಳ್ಳಬಹುದು’ ಎಂದು ಮಾಹಿತಿ ನೀಡಿದರು.

‘ಭತ್ತ, ರಾಗಿಯ ಕೊಯ್ಲಿಗೆ ಇದು ಸಕಾಲವಲ್ಲ. ಒಂದು ವಾರ ಕಟಾವನ್ನು ಮುಂದೂಡುವುದು ಸೂಕ್ತ. ವಾತಾವರಣದಲ್ಲಿ ಕಡಿಮೆ ತಾಪಮಾನ ದಾಖಲಾಗುತ್ತಿರುವುದರಿಂದ ಟೊಮೆಟೊ, ಬದನೆ, ಮೆಣಸಿನಕಾಯಿ ಬೆಳೆಗಳಲ್ಲಿ ಬೆಳವಣಿಗೆ ಕುಂಠಿತಗೊಳ್ಳಲಿದೆ. ಇದನ್ನು ಸರಿಪಡಿಸಲು ಶಿಫಾರಸ್ಸಿಗಿಂತ ಶೇ 10–20ರಷ್ಟು ಹೆಚ್ಚು ಸಾರಜನಕ, ಪೊಟ್ಯಾಶ್‌ ಬಳಸಬೇಕು’ ಎಂದು ನರೇಂದ್ರಬಾಬು ಕೃಷಿಕರಿಗೆ ಸಲಹೆ ನೀಡಿದರು.

ಭತ್ತ–ರಾಗಿ ಕೊಯ್ಲಿಗೆ ತೊಂದರೆ

‘ಭತ್ತ, ರಾಗಿ ಫಸಲು ಕೊಯ್ಲಿಗೆ ಬಂದಿದೆ. ವಾರದಿಂದಲೂ ಮೋಡ ಕವಿದ ವಾತಾವರಣ ಇರುವುದರಿಂದ, ಕೃಷಿಕರು ಬೆಳೆಯ ಕಟಾವಿಗೆ ಮುಂದಾಗಿಲ್ಲ. ಮಳೆ ಸುರಿದರೆ ಈಗಾಗಲೇ ಕೊಯ್ಲಾಗಿರುವ ಫಸಲಿಗೂ ತೊಂದರೆಯಾಗಲಿದೆ. ಕಟಾವಿಗೆ ಬಂದಿರುವ ಬೆಳೆಗೆ ರೋಗ ಬಾಧೆ ಕಾಡಲಿದೆ. ತೆನೆಯಲ್ಲಿನ ಕಾಳುಗಳು ನೆಲಕ್ಕೆ ಉದುರಿ ಇಳುವರಿ ನಷ್ಟವಾಗಲಿದೆ’ ಎಂದು ಕೃಷಿ ಇಲಾಖೆಯ ಮೈಸೂರು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ತಿಳಿಸಿದರು.

‘ಎದೆಯುದ್ದ ಬೆಳೆದಿದ್ದ ರಾಗಿ ಮಳೆಗೆ ಸಿಲುಕಿ, ತೆನೆಯ ಭಾರಕ್ಕೆ ನೆಲಕ್ಕೆ ಬಿದ್ದಿತ್ತು. ಯಂತ್ರದಿಂದ ಕಟಾವು ಮಾಡಿಸಲಾಗದಿದ್ದಕ್ಕೆ ಕೂಲಿಯಾಳುಗಳ ಮೂಲಕ ಕೊಯ್ಲು ಮಾಡಿಸಿ ಮೆದೆ ಒಟ್ಟಿರುವೆ. ಮೋಡ ಕವಿದ ವಾತಾವರಣದಿಂದ ಹುಲ್ಲಿನಿಂದ ಕಾಳನ್ನು ಬೇರ್ಪಡಿಸಲು ಆಗುತ್ತಿಲ್ಲ. ವೆಚ್ಚವೂ ಹೆಚ್ಚಿದೆ. ಜೋರು ಮಳೆ ಸುರಿದರೆ ಮತ್ತಷ್ಟು ಸಮಸ್ಯೆ ಎದುರಾಗಲಿದೆ’ ಎಂದು ಹುಣಸೂರು ತಾಲ್ಲೂಕಿನ ಬೋಳರಾಮನಹಳ್ಳಿಯ ಕೃಷಿಕ ಪುನೀತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT