ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆ ದಂಧೆಗೆ ಕಡಿವಾಣ ಹಾಕಿ: ಜಿಲ್ಲಾ ಪಂಚಾಯಿತಿ ಸದಸ್ಯರ ಆಗ್ರಹ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
Last Updated 7 ಅಕ್ಟೋಬರ್ 2020, 1:27 IST
ಅಕ್ಷರ ಗಾತ್ರ

ಮೈಸೂರು: ಕೊರೊನಾ ಪರೀಕ್ಷೆ ಹಾಗೂ ಚಿಕಿತ್ಸೆಯ ಹೆಸರಿನಲ್ಲಿ ಜನರಿಂದ ಸುಲಿಗೆ ಮಾಡುತ್ತಿರುವ ಕೆಲವು ಖಾಸಗಿ ಆಸ್ಪತ್ರೆಗಳ ಮೇಲೆ ಕಡಿವಾಣ ಹೇರುವಂತೆ ಜಿಲ್ಲಾ ಪಂಚಾಯಿತಿ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಸಿ.ಪರಿಮಳಾ ಶ್ಯಾಂ ಅಧ್ಯಕ್ಷತೆಯಲ್ಲಿ ಮಂಗಳ ವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೊರೊನಾ ಹೆಸರಿನಲ್ಲಿ ನಡೆಯುತ್ತಿರುವ ದಂಧೆಯ ಬಗ್ಗೆ ಚರ್ಚೆ ನಡೆಯಿತು.

ಜೆಡಿಎಸ್‍ ಸದಸ್ಯ ಬೀರಿಹುಂಡಿ ಬಸವಣ್ಣ ಅವರು ವಿಷಯ ಪ್ರಸ್ತಾಪಿಸಿ, ಕೊರೊನಾದಿಂದಾಗಿ ಇತರ ಸಾಮಾನ್ಯ ರೋಗಿಗಳಿಗೂ ಚಿಕಿತ್ಸೆ ಪಡೆಯಲು ಕಷ್ಟವಾಗುತ್ತಿದೆ. ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಖಾಸಗಿ ಆಸ್ಪತ್ರೆಗಳು ಬಲವಂತ ಮಾಡುತ್ತಿವೆ. ಪರೀಕ್ಷೆಗಾಗಿ ₹ 4,500 ಕೊಡಬೇಕು. ಇದು ಸಾಮಾನ್ಯ ಜನರಿಗೆ ಹೊರೆಯಾಗಿ ಪರಿಣಮಿಸಿದೆ ಎಂದರು.

ಕೊರೊನಾ ಸೋಂಕಿತರಿಗೆ ಸುಲಭವಾಗಿ ಹಾಸಿಗೆ ಸಿಗುತ್ತಿಲ್ಲ. ಚಿಕಿತ್ಸೆ ಪಡೆಯಲು ಸರ್ಕಸ್‌ ನಡೆಸಬೇಕಾಗಿದೆ. ಸ್ವಾಮೀಜಿಗಳು, ಸಚಿವರಿಂದ ಶಿಫಾರಸು ಮಾಡಿಸಿದರೆ ಮಾತ್ರ ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಮಾತನಾಡಿ, ಕೊರೊನಾದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ನಗರದ ಖಾಸಗಿ ಆಸ್ಪತ್ರೆಯೊಂದು ಬಿಟ್ಟುಕೊಡಲಿಲ್ಲ. ₹ 8 ಲಕ್ಷ ಬಿಲ್ ಪಾವತಿಸಿದ ತಕ್ಷಣವೇ ಪಾಸಿಟಿವ್ ವರದಿಯನ್ನು ನೆಗಟಿವ್ ಎಂದು ಬದಲಿಸಿ ಶವವನ್ನು ಕೊಟ್ಟರು ಎಂದು ಘಟನೆಯೊಂದನ್ನು ವಿವರಿಸಿದರು.

ಇದಕ್ಕೆ ದನಿಗೂಡಿಸಿದ ಬಿಜೆಪಿಯ ಮಂಗಳಾ ಸೋಮಶೇಖರ್, ಖಾಸಗಿ ಆಸ್ಪತ್ರೆಗಳು ಜನರನ್ನು ಸುಲಿಗೆ ಮಾಡುತ್ತಿವೆ. ಕೊರೊನಾ ಹೆಸರಿನಲ್ಲಿ ನಡೆದಿರುವ ಅವ್ಯವಹಾರದ ಕುರಿತು ಸಮಗ್ರ ತನಿಖೆ ಆಗಲಿ ಎಂದು ಆಗ್ರಹಿಸಿದರು.

ಸದಸ್ಯರ ಆರೋಪಗಳಿಗೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ವೆಂಕಟೇಶ್, ಖಾಸಗಿ ಆಸ್ಪತ್ರೆಗಳಲ್ಲಿರುವ ಶೇ.50ರಷ್ಟು ಹಾಸಿಗೆಯನ್ನು ಜಿಲ್ಲಾಡಳಿತದ ವಶಕ್ಕೆ ಪಡೆದುಕೊಳ್ಳಲಾಗಿದೆ. ಆದ್ದರಿಂದ ಇನ್ನು ಮುಂದೆ ಹಾಸಿಗೆಯ ಸಮಸ್ಯೆ ಎದುರಾಗದು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಿ.ಭಾರತಿ ಮಾತನಾಡಿ, ಖಾಸಗಿ ಆಸ್ಪತ್ರೆಯಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆದರೆ ಅಂತಹ ಆಸ್ಪತ್ರೆಯ ವಿರುದ್ಧ ಕೆ.ಎಮ್.ಸಿ. ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ನೀರಿನ ಘಟಕ ಸರಿಪಡಿಸಿ: ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿದ್ದಲ್ಲಿ ವಾರದೊಳಗೆ ಸರಿಯಾದ ಉಪಕರಣಗಳನ್ನು ಬಳಸಿ ಸರಿಪಡಿಸಲಾಗುವುದು. ತಂಡಗಳನ್ನು ರಚಿಸಿ ಜಿಲ್ಲೆಯ ಎಲ್ಲಾ ಕುಡಿಯುವ ನೀರಿನ ಘಟಕಗಳನ್ನು ಪರಿಶೀಲನೆ ಮಾಡಲಾಗುವುದು. ಪ.ಜಾತಿ ಮತ್ತು ಪ.ಪಂಗಡದ ಅಭಿವೃದ್ಧಿಗೆ ಬಿಡುಗಡೆಯಾಗುವ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಸಿಇಒ ಹೇಳಿದರು.

ಉಚಿತವಾಗಿ ಮಾಸ್ಕ್ ನೀಡಿ

ಸರ್ಕಾರವು ಬಿಪಿಎಲ್ ಕಾರ್ಡ್‌ದಾರರಿಗೆಗೆ ಮೂರು ಮಾಸ್ಕ್ ಅನ್ನು ಉಚಿತವಾಗಿ ನೀಡಬೇಕು ಎಂದು ಕಾಂಗ್ರೆಸ್‌ನ ಡಾ.ಪುಷ್ಪಾ ಅಮರನಾಥ್ ಆಗ್ರಹಿಸಿದರು.

ಮಾಸ್ಕ್ ಕೊಡಲು ಯೋಗ್ಯತೆ ಸರ್ಕಾರಕ್ಕೆ ಇಲ್ಲವೇ? ಮೊದಲು ಮಾಸ್ಕ್ ಕೊಡಿ ಆಮೇಲೆ ಬೇಕಿದ್ದರೆ ದಂಡ ವಸೂಲಿ ಮಾಡಲಿ ಎಂದರು. ಉಳಿದ ಸದಸ್ಯರು ಇದಕ್ಕೆ ಸಹಮತ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಪರಿಮಳಾ ಶ್ಯಾಂ, ಬಡವರಿಗೆ ಉಚಿತವಾಗಿ ಮಾಸ್ಕ್ ವಿತರಿಸಬೇಕು. ಈ ಕುರಿತು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಮೌನಾಚರಣೆ ಸಂಬಂಧ ವಾಗ್ವಾದ

ಉತ್ತರಪ್ರದೇಶದಲ್ಲಿ ಅತ್ಯಾಚಾರಿಗಳ ಕ್ರೌರ್ಯದಿಂದ ಸಾವಿಗೀಡಾದ ಯುವತಿಗೆ ಮೌನಾಚರಣೆ ಮೂಲಕ ಸಂತಾಪ ಸಲ್ಲಿಸುವ ವಿಷಯದಲ್ಲಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಸಂತಾಪ ಸೂಚಿಸಲು ಮುಂದಾದಾಗ, ಬಿಜೆಪಿ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದರು. ಕೆಲಸಮಯದ ಮಾತಿನ ಚಕಮಕಿ ಬಳಿಕ ಎಲ್ಲರೂ ಒಂದು ನಿಮಿಷದ ಮೌನಾಚರಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT