ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯದ ಕೂಳಿಗೂ ಕನ್ನ ಹಾಕಿದ ಕೊರೊನಾ ವೈರಸ್ ಸೋಂಕು

ಪ್ರವಾಸೋದ್ಯಮ ಸ್ಥಳಗಳನ್ನೇ ನಂಬಿದವರ ಹೊಟ್ಟೆಪಾಡಿಗೆ ಸಂಚಕಾರ
Last Updated 18 ಮಾರ್ಚ್ 2020, 10:56 IST
ಅಕ್ಷರ ಗಾತ್ರ

ಮೈಸೂರು: ಕೊರೊನಾ ವೈರಸ್‌ ಒಂದೆಡೆ ನಿರ್ದಯವಾಗಿ ಜೀವಗಳನ್ನು ತೆಗೆಯುತ್ತಿದ್ದರೆ ಮತ್ತೊಂದೆಡೆ ನೂರಾರು ಸಣ್ಣ ಸಣ್ಣ ವ್ಯಾಪಾರಸ್ಥರ ಬದುಕನ್ನು ಹೊಸಕಿ ಹಾಕುತ್ತಿದೆ. ಕೊರೊನಾ ಭೀತಿಯಿಂದ ಪ್ರವಾಸಿ ಸ್ಥಳಗಳು ಬಂದ್ ಆಗಿವೆ. ಇದನ್ನೇ ಹೊಟ್ಟೆಪಾಡಿಗಾಗಿ ನಂಬಿ ಕೂತವರ ನಿತ್ಯದ ಕೂಳಿಗೂ ಕನ್ನ ಹಾಕಿದೆ.

ಚಾಮರಾಜೇಂದ್ರ ಮೃಗಾಲಯದ ಬಳಿ, ಅರಮನೆಯ ಸುತ್ತಮುತ್ತ ಸೇರಿದಂತೆ ಅನೇಕ ಕಡೆ ಸಣ್ಣಪುಟ್ಟ ವ್ಯಾಪಾರ ಮಾಡುವ ಮೂಲಕ ನಿತ್ಯದ ಬದುಕನ್ನು ಸಾಗಿಸುತ್ತಿದ್ದರು. ಪ್ರವಾಸಿಗರು ಇಲ್ಲದೇ ಇವರ ಸಂಪಾದನೆ ಶೂನ್ಯವಾಗಿದೆ.

ಮುಖ್ಯವಾಗಿ ಹಣ್ಣಿನ ವ್ಯಾಪಾರ, ಕರಕುಶಲ ವಸ್ತುಗಳ ವ್ಯಾಪಾರ, ಆಟಿಕೆಗಳನ್ನು ಮಾರಾಟ ಮಾಡುವವರು ಹೈರಣಾಗಿದ್ದಾರೆ. ನಿತ್ಯ ಒಂದು ರೂಪಾಯಿಯೂ ವ್ಯಾಪಾರವಾಗದ ಸ್ಥಿತಿಗೆ ತಲುಪಿದ್ದಾರೆ. ಪರ್ಯಾಯ ಏನು ಮಾಡುವುದು ಎಂಬುದು ತಿಳಿಯದೇ ದಿಕ್ಕು ತೋಚದಂತಾಗಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹಣ್ಣಿನ ವ್ಯಾಪಾರಿ ಶಿವಮಲ್ಲಪ್ಪ, ‘ಅರಮನೆಯ ಸಮೀಪ ಪರಂಗಿ, ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ‘ಫ್ರೂಟ್‌ ಸಾಲಡ್’ ವ್ಯಾಪಾರ ಮಾಡಿಕೊಂಡಿದ್ದೆ. ನಿತ್ಯ ವ್ಯಾಪಾರವಾದ ಹಣದಲ್ಲಿ ನಮ್ಮ ಬದುಕನ್ನು ನಡೆಸುತ್ತಿದ್ದೆವು. ಈಗ ವ್ಯಾಪಾರವೇ ಇಲ್ಲವಾಗಿ 15 ದಿನಗಳು ಕಳೆದಿವೆ. ಯಾವ ಕೆಲಸ ಮಾಡುವುದು ಎಂದು ತಿಳಿಯುತ್ತಿಲ್ಲ’ ಎಂದು ತಿಳಿಸಿದರು.

ಚಾಮರಾಜೇಂದ್ರ ಮೃಗಾಲಯದ ಸಮೀಪ ಇರುವ ‘ಕೆಫೆ ಮೈಸೂರು’ ಮಾಲೀಕ ಕೆ.ಸಿ.ದಿನೇಶ್ ಪ್ರತಿಕ್ರಿಯಿಸಿ, ‘ಶೇ 50ರಷ್ಟು ವ್ಯಾಪಾರ ಬಂದ್ ಆಗಿದೆ. ಬಾಡಿಗೆ, ತೆರಿಗೆ ಪಾವತಿಸುವುದು ಕಷ್ಟವಾಗುತ್ತಿದೆ. ಕೆಲಸಗಾರರಿಗೆ ರಜೆ ಕೊಟ್ಟು ಕಳುಹಿಸುತ್ತಿದ್ದೇವೆ. ಪ‍ರಿಸ್ಥಿತಿ ಇದೇ ರೀತಿ ಮುಂದುವರಿದರೆ ನಿಜಕ್ಕೂ ಹೋಟೆಲ್ ನಡೆಸುವುದು ಕಷ್ಟವಾಗಲಿದೆ. ಈಗಾಗಲೇ ಮೃಗಾಲಯದ ಪ್ರವಾಸಿಗರನ್ನೇ ನಂಬಿಕೊಂಡಿದ್ದ ಹಲವು ಹೋಟೆಲ್‌ಗಳು ಬಾಗಿಲು ಹಾಕಿವೆ’ ಎಂದು ಹೇಳಿದರು.

ಮೃಗಾಲಯದ ಸುತ್ತಮುತ್ತ ಸರಿಸುಮಾರು 20 ಹೋಟೆಲ್‌ಗಳು ಇದ್ದವು. ಇವುಗಳಲ್ಲಿ 12ಕ್ಕೂ ಹೆಚ್ಚಿನ ಹೋಟೆಲ್‌ಗಳು ಬಂದ್‌ ಆಗಿವೆ. ಇನ್ನುಳಿದ ಹೋಟೆಲ್‌ಗಳಲ್ಲೂ ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT