ಕಾಗೆ ಸಾಕಿದರೆ ಹೇಗೆ....?

7

ಕಾಗೆ ಸಾಕಿದರೆ ಹೇಗೆ....?

Published:
Updated:
'Beat the heat' Crows playing sprinkling water form damaged pipe during heavy sunny at Sree Kanteerava stadium in Bengaluru on Monday. Photo by BK JanardhankAge

ಕೆಲವು ದಿನಗಳ ಹಿಂದಿನ ಮಾತು. ನಮ್ಮ ವಾಕಿಂಗ್ ಮಿತ್ರರೊಬ್ಬರು ಮೂರ್ನಾಲ್ಕು ದಿನಗಳಿಂದ ಕಾಣದಿದ್ದವರು ಅಂದು ಸಂಜೆ ನಮ್ಮ ಮಾಮೂಲಿ ಜಾಗಕ್ಕೆ ಬಂದರು. ’ಇಷ್ಟು ದಿನ ಎಲ್ಲಿ ನಾಪತ್ತೆಯಾಗಿದ್ದಿರಿ?’ ಎಂದು ಮಾತಿಗೆಳೆದಾಗ ಅವರು ಹೇಳಿದರು..

‘‘ನಮ್ಮ ಹತ್ತಿರದ ಸಂಬಂಧಿಯೊಬ್ಬರು ತೀರಿಕೊಂಡಿದ್ದರು. ಆಗ ಮನೆಯವರು ಊರಿಗೆ ಹೋಗಿ ಬಂದಿದ್ದರು. ನಾನು ಹೋಗಿರಲಿಲ್ಲ. ಈಗ ಹನ್ನೊಂದನೇ ದಿನದ ತಿಥಿ ಕಾರ್ಯಕ್ಕೇ ನಾನು ಹೋಗಿದ್ದೆ. ಒಂದೆರಡು ದಿನ ಊರಿನಲ್ಲಿ ನಿಲ್ಲಬೇಕಾಯಿತು’’ ಎಂದರು.

‘ತಿಥಿ ಎಂದರೆ ತೀರಿಕೊಂಡವರಿಗೆ ನೈವೇದ್ಯ. ಇದ್ದವರಿಗೆ ಅವರ ಹೆಸರಿನಲ್ಲಿ ಭೂರಿ ಭೋಜನ ಅಲ್ಲವೇ?’’ ಎಮದು ತಮಾಷೆ ಮಾಡಿದೆ. ’’ಹೌದು. ತೀರಿಕೊಂಡವರಿಗೆ ನೈವೇದ್ಯವೇ, ಆದರೆ ಸಮಾಧಿಯ ಬಳಿ ಬಡಿಸಿದ ಆಹಾರದ ನೈವೇದ್ಯವನ್ನು ಸ್ವೀಕರಿಸಲು ಕಾಗೆಯೇ ಬರಲಿಲ್ಲ. ಕಾಗೆಗಾಗಿ ಸುತ್ತೆಲ್ಲ ನೋಡಿ ಕುತ್ತಿಗೆಗೆ ನೋವು ಬಂತೇ ಹೊರತು ಕಾಗೆ ಮಾತ್ರ ಎಲ್ಲಿಯೂ ಕಾಣಿಸಲಿಲ್ಲ‘ ಎಂದು ನಿರಾಸೆ ವ್ಯಕ್ತಪಡಿಸಿದರು.

‘ಮತ್ತೇನು ಮಾಡಿದಿರಿ? ಮೃತರ ಆತ್ಮ ಕಾಗೆಯ ರೂಪದಲ್ಲಿ ಬಾರದೇ ಹೋದರೆ ತಿಥಿ ಕಾರ್ಯ ಅಪೂರ್ಣವಾದಂತೆ ಆಗಲಿಲ್ಲವೇ?’ ಎಂದು ಮಿತ್ರರೊಬ್ಬರು ಪ್ರತಿಕ್ರಿಯಿಸಿದರು. "ಹಾಗೆನಾಗಲಿಲ್ಲ. ಈಗ ಅದಕ್ಕೊಂದು ಪರಿಹಾರ ಕಂಡುಕೊಂಡಿದ್ದಾರೆ. ಹಸುವಿಗೆ ಆ ನೈವೇದ್ಯ ತಿನ್ನಿಸಿದರೂ ಮೃತರ ಆತ್ಮಕ್ಕೇ ಶಾಂತಿ ಸಿಗುತ್ತದೆ. ಕಾಗೆಗಿಂತಲೂ ಗೋವು ಶ್ರೇಷ್ಠವೆಂದು ಅಲ್ಲಿದ್ದವರೊಬ್ಬರು ಸೂಚಿಸಿದಾಗ ಕೂಡಲೇ ಎಲ್ಲಿಂದಲೋ ಒಂದು ಗೋವನ್ನು ಹಿಡಿದು ತಂದು ನೈವೇದ್ಯವನ್ನು ತಿನ್ನಿಸಿದರು. ಆಗ ಎಲ್ಲರೂ ನೆಮ್ಮದಿಯಿಂದ ಸಮಾಧಿ ಬಳಿಯಿಂದ ಮನೆಗೆ ತೆರಳಿದೆವು’’ ಎಂದರು. ‘ಸರಿ..ಸರಿ.. ಕಾಲಕ್ಕೇ ತಕ್ಕಂತೆ ಕೋಲ’ ಎನ್ನುವ ಹಾಗೆ ಕಾಗೆ ಬಾರದಿದ್ದರೆ ಹಸು ಬಂದೇ ಬರುತ್ತದೆ. ಆದರೆ ನಂಬಿಕೆ ಇರೋದು ಕಾಗೆಯ ಮೇಲೆಯಲ್ಲವೇ? ಹಾಗಾಗಿ ಕಾಗೆಯ ಮೇಲೆ ನಂಬಿಕೆ ಇನ್ನೂ ಇಟ್ಟಿರುವವರು ಖಂಡಿತ ಬರುತ್ತಾರೆ. ಆದ್ದರಿಂದ ಒಂದೆರಡು ಕಾಗೆ ಸಾಕಿದರೆ ಹೇಗೆ? ಬಾಡಿಗೆ ದುಡಿಯಬಹುದು’’ ಎಂದು ಮಿತ್ರರು ಚಟಾಕಿ ಹಾರಿಸಿದರು. ಸರಿ, ಹಾಗಿದ್ದರೆ ಪ್ರಯತ್ನಿಸಿ ನೋಡಿ ಎಂದು ಹೇಳುತ್ತಾ ಎಲ್ಲರೂ ಅಲ್ಲಿಂದ ನಿರ್ಗಮಿಸಿದೆವು.

ನಾನು ದಾರಿಗುಂಟ ನಡೆಯುತ್ತ ಯೋಚಿಸಿದೆ. ಸ್ನೇಹಿತರು ಮೇಲೆ ಹೇಳಿದ ಹಾಗೆ ‘ಕಾಲಕ್ಕೇ ತಕ್ಕಂತೇ ಕೋಲ’ ಅನ್ನೋ ಹಾಗೆ ನಮ್ಮ ಮನೋಧರ್ಮ, ನಂಬಿಕೆಗಳು ಹೇಗೆ ಬದಲಾಗುತ್ತವೆ ನೋಡಿ. ತಿಥಿಯ ಸಂದರ್ಭದಲ್ಲಿ ‘ಕಾಗೆ’ಗೇ ಪ್ರಾಶಸ್ತ್ಯ. ತಿಥಿಯ ಕೂಳನ್ನು ಕಾಗೆಗಳು ಹಾರಿ ಬಂದು ತಿಂದರೆನೇ ಮೃತರ ಆತ್ಮಕ್ಕೇ ತೃಪ್ತಿಯಾಯಿತು ಎಂಬ ನಂಬಿಕೆ ಪುರಾತನವಾದದ್ದು. ಆದರೆ ಈಗೀಗ ಕಾಗೆಗಳು ಕಡಿಮೆಯಾಗುತ್ತಿವೆ. ನಮ್ಮ ಬಡಾವಣೆಯಲ್ಲಿ ಯಾವಾಗಲಾದರೂ ಅಪರೂಪಕ್ಕೊಮ್ಮೆ ಕಾಣಿಸುತ್ತವೆ. ಏಕೆಂದರೆ ಅವುಗಳಿಗೆ ಕೂರಲು, ಗೂಡುಕಟ್ಟಲು ಮರಗಳೇ ಇಲ್ಲ. (ಹಿಂದೆ ಗುಬ್ಬಚ್ಚಿಯ ಬಗ್ಗೆ ಬರೆದಿದ್ದೆ) ಮೇಲಾಗಿ ಮುಸುರೆ, ಉಳಿದ ಆಹಾರವನ್ನು ಹೊರಗೆ ಚೆಲ್ಲುವ ಕ್ರಮವೇ ಕಡಿಮೆಯಾಗುತ್ತಿದೆ. ನಗರಗಳಲ್ಲಿ ತಿಥಿಯ ಕಾರ್ಯ ಯಾವುದಾದರೂ ಭವನ, ಹಾಲ್‌ನಲ್ಲಿ ನಡೆಯುದರಿಂದ ಕಾಗೆಯನ್ನು ಕರೆಯುವ ಪ್ರಸಂಗವೇ ಬರುವುದಿಲ್ಲ. ಇತ್ತಿಚೇಗೆ ಗ್ರಾಮೀಣ ಪ್ರದೇಶಗಳಲ್ಲಿಯೂ ಈ ಪ್ರವೃತ್ತಿ ಕ್ರಮೇಣ ಇಣುಕುತ್ತಿದೆ.

ನಾನು ಚಿಕ್ಕವನಿದ್ದಾಗ ಗದ್ದೆಯಲ್ಲಿ ಉಳುಮೆ ಕೆಲಸ ಮಾಡುವವರಿಗೆ ಬೆಳಿಗ್ಗೆ, ಮಧ್ಯಾಹ್ನ ರೊಟ್ಟಿ, ಊಟ ತೆಗೆದುಕೊಂಡು ಹೋಗುತ್ತಿದ್ದೆ. ಮನೆಯಿಂದ ಬುಟ್ಟಿಯನ್ನು ಹೊತ್ತುಕೊಂಡು ಹೊರಟರೆ ಸಾಕು, ಒಂದೆರಡು ಕಾಗೆಗಳು ಹಿಂಬಾಲಿಸುತ್ತಿದ್ದವು. ಕೆಲಸದ ಜಾಗದಲ್ಲಿ ಊಟ ಮಾಡುವ ಮೊದಲು ಅವರು ಒಂದಿಷ್ಟು ಅನ್ನವನ್ನು ಸುತ್ತಲೂ ಹಾಕುತ್ತಿದ್ದರು (ಅದೊಂದು ನಂಬಿಕೆ). ಊಟ ಮಾಡಿದ ಮೇಲೆ ಕಾಗೆಗಳು ಅದನ್ನು ಹೆಕ್ಕಿ ತಿನ್ನುತ್ತಿದ್ದವು. ಹೀಗೆ ಏನಾದರೂ ತಿನ್ನಲು ಸಿಗುತ್ತದೆಯೆಂಬ ನಂಬಿಕೆಯಿಂದ ಕಾಗೆಗಳು ಬರುತ್ತಿದ್ದವು. ತಿಥಿ ಕಾರ್ಯದಲ್ಲೂ ಹಾಗೆ. ಆದರೆ ಅದು ಯಾರಾದರೂ ತೀರಿಕೊಂಡಾಗ ಮಾತ್ರ ನಡೆಯುವ ಕಾರ್ಯ. ಹಾಗಾಗಿ ಕಾಗೆಗಳಿಗೆ ಇದಕ್ಕಾಗಿಯೇ ಕಾಯಲು ಸಾಧ್ಯವೆ?

ಇಲ್ಲಿ ನಂಬಿಕೆಗಳು ಹೇಗೆ ಬದಲಾಗುತ್ತವೆ ನೋಡಿ. ತಿಥಿ ಸಂದರ್ಭಕ್ಕೆ ಕಾಗೆ ಬಾರದಿದ್ದರೆ ಗೋವು ಬಂದರೂ ಸಾಕು (ಈ ಅಭಿಪ್ರಾಯ ಎಲ್ಲಾ ಕಡೆ ಇದೆಯೇ ಇಂಬುದು ಸಂಶಯ) ಎಂದರೆ ನಮ್ಮ ಮೂಲ (ಮೂಢ) ನಂಬಿಕೆಗೆ ಅರ್ಥ ಬಂದೀತೇ? ಗೋಸಂರಕ್ಷಣೆಯ ಇಂದಿನ ಭರಾಟೆಯಲ್ಲಿ ಇಲ್ಲ ಎನ್ನಲು ಸಾಧ್ಯವಿಲ್ಲವೇನೋ ಅನ್ನಿಸುತ್ತೆ. ಇನ್ನು ಕಾಗೆ ಹೇಳಿ ಕೇಳಿ ಶನಿದೇವನ ದ್ವಿಚಕ್ರವಾಹನ. ಶನಿಗೆ ಸಲ್ಲುವ ಪೂಜೆ ಪ್ರತ್ಯೇಕವಾಗಿ ಕಾಗೆಗೆ ಸಲ್ಲದೇ ಇದ್ದರೂ ಮಾಲೀಕನಿಗೆ ಅರ್ಪಿಸಿದ್ದು ಚಾಲಕನಿಗೂ ಸಲ್ಲುತ್ತದೆ ಎಂದುಕೊಳ್ಳಬಹುದು.

ಬೇರೆ ಪಕ್ಷಿಗಳನ್ನು ಪ್ರೀತಿಸುವವರು, ಇಷ್ಟಪಡುವವರು ಕಾಗೆಯನ್ನು ಕಡೆಗಣಿಸುತ್ತಾರೆ. ಬೇರೆಯವುಗಳನ್ನು ಹುಡುಕಿ ಹುಡುಕಿ ಕಾಳು ಹಾಕುವವರು ಕಾಗೆಯನ್ನು ಕಂಡರೆ ಅಸಹ್ಯ ಪಡುತ್ತಾರೆ. ಕಾಗೆ ಮಾತ್ರ ಕರೆಯದಿದ್ದರೂ ಬರುತ್ತದೆ. ಏಕೆಂದರೆ ಅದು ಸರ್ವಭಕ್ಷಕ. ಕಾಗೆ ಮನೆಮುಂದೆ ಕುಳಿತು ಕಾ..ಕಾ.. ಎಂದು ಕೂಗಿದರೆ ಅದು ಅಪಶಕುನವೆಂದು ತಿಳಿದು ಹಾ..ಹೂ.. ಎಂದು ಹಾರಿಸಿಬಿಡುತ್ತಾರೆ. ಅದೇ ಕಾಗೆ ಬೇರೆ ರೀತಿಯಲ್ಲಿ ಶಬ್ದ ಮಾಡಿದರೆ ‘ಓಹೋ ನಮ್ಮ ಮನೆಗೆ ನೆಂಟರು ಬರುತ್ತಾರೆ’ ಎಂದು ಅಂದುಕೊಳ್ಳುತ್ತಾರೆ. ಒಂದೇ ಪಕ್ಷಿಯ ಬಗೆಗೆ ಎರಡು ಭಿನ್ನವಾದ ನಂಬಿಕೆಗಳಿರುವುದು ವಿಪರ್ಯಾಸವಲ್ಲವೇ?

ಇದೆಲ್ಲವೇನೇ ಇದ್ದರೂ ಕಾಗೆಗೆ ಮಾತ್ರ ಒಂದು ಸಾರಿಯಂತೂ ಎಲ್ಲಿಲ್ಲದ ಆದರ, ಬೇಡಿಕೆ ದೊರೆಯುತ್ತದೆ. ಅದು ಮೇಲೆ ಹೇಳಿದ ಹಾಗೆ ತಿಥಿಯ ಕಾರ್ಯದ ಸಂದರ್ಭದಲ್ಲಿ. ಕಾಗೆ ಬಾರದಿದ್ದರೆ ಎಲ್ಲವೂ ವ್ಯರ್ಥವಾಯಿತೆನ್ನುವ ನಂಬಿಕೆ ನಮ್ಮಲ್ಲಿ ಪುರಾತನವಾದದ್ದು. ಅದಕ್ಕೇಂದೇ ‘ಮನೆಯ ಮುಂದೆ ಕಾಗೆ ಇದ್ದರೆ ಹೆದರಿಸಿ ಓಡಿಸುವವರು ಶ್ರಾದ್ಧದ ಸಮಯದಲ್ಲಿ ಮಾತ್ರ ಕರೆದು ಕರೆದು ಸನ್ಮಾನ ಮಾಡುತ್ತಾರೆ’ ಎಂದು ಕವಿ, ವಿಚಾರವಾದಿ ಕಬೀರದಾಸರು ಹೇಳಿದ್ದಾರೆ.

ನಮ್ಮಲ್ಲಿ ನಂಬಿಕೆಗಳು ಇನ್ನೂ ಜೀವಂತವಾಗಿರುವಾಗ ಮತ್ತು ಎಲ್ಲಾ ನಂಬಿಕೆಗಳೂ ವ್ಯಾಪಾರೀಕರಣದ ಸರಕುಗಳಾಗಿ ಕ್ರಮೇಣ ಮಾರ್ಪಾಡಾಗುತ್ತಿರುವ ವರ್ತಮಾನದಲ್ಲಿ ಕಾಗೆಯನ್ನು ಸಹ ಏಕೆ ಬಂಡವಳವನ್ನಾಗಿ ಮಾಡಿಕೊಳ್ಳಬಾರದು? ಬೇರೆ ಪಕ್ಷಿಗಳನ್ನು ಸಾಕಿ ಮಾರಾಟ ಮಾಡುವ ಹಾಗೆ ಕಾಗೆಯನ್ನು ಬಾಡಿಗೆಗೆ ಕೊಡಬಹುದಲ್ಲ.. ಅದಕ್ಕೇ ನಮ್ಮ ಸ್ನೇಹಿತರು ತಮಾಷೆಗಾಗಿ ಹೇಳಿದ ಮಾತು– ‘ಕಾಗೆ ಸಾಕಿದರೆ ಹೇಗೆ?’ ಎಂಬುದು ಇಂದಿನ ದಿನಮಾನದಲ್ಲಿ ಸಾಧ್ಯವಾಗಬಾರದೇಕೆ..? ನೀವೇನಂತೀರಿ..?

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !