ಭಾನುವಾರ, ಜೂನ್ 20, 2021
23 °C
ಹಳೆಯ ಚಿನ್ನದ ನಾಣ್ಯ ಕೊಡುವುದಾಗಿ ನಂಬಿಸಿ ₹ 30 ಲಕ್ಷ ವಂಚನೆ

16 ದಿನಗಳಲ್ಲೇ ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಗಾರೆ ಕೆಲಸ ಮಾಡುವಾಗ ನಿಧಿ ಸಿಕ್ಕಿದ್ದು, ಕಡಿಮೆ ಬೆಲೆಗೆ ಚಿನ್ನದ ನಾಣ್ಯಗಳನ್ನು ಕೊಡುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ವಂಚಕರ ತಂಡವೊಂದನ್ನು ನಗರ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ತಂಡದ 7 ಮಂದಿಯ ಪೈಕಿ ಇಬ್ಬರನ್ನು ಬಂಧಿಸಿದ್ದಾರೆ.

‘ಆಗ್ರಾದಿಂದ ಬಂದು ಇಲ್ಲಿನ ಕೆಆರ್‌ಎಸ್‌ನಲ್ಲಿ ವಾಸವಿರುವ ಭೀಮ್ ಅಲಿಯಾಸ್ ಡೈನಾ (30) ಹಾಗೂ ಅರ್ಜುನ್ ಅಲಿಯಾಸ್ ಮಾರ್ವಾಡ (28) ಎಂಬುವವರನ್ನು ಬಂಧಿಸಲಾಗಿದೆ. ಇವರು ಜುಲೈ 11ರಂದು ಕುಂಬಾರಕೊಪ್ಪಲಿನ ಹಳೆಯ ನಾಣ್ಯಗಳ ಸಂಗ್ರಾಹಕ ರಾಘವೇಂದ್ರ ಎಂಬುವವರಿಂದ ₹ 30 ಲಕ್ಷ ಪಡೆದು ವಂಚಿಸಿದ್ದರು’ ಎಂದು ಡಿಸಿಪಿ ಡಾ.ಪ್ರಕಾಶ್‌ಗೌಡ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇವರಿಂದ ಈಗಾಗಲೇ ₹ 20 ಲಕ್ಷ ನಗದು ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಜನರು ದುರಾಸೆಗೆ ಬಲಿಯಾಗಬಾರದು. ಅಪರಿಚಿತರನ್ನು ಯಾವುದೇ ಕಾರಣಕ್ಕೂ ನಂಬಬಾರದು, ಅನುಮಾನಾಸ್ಪದ ವ್ಯಕ್ತಿಗಳನ್ನು ಕುರಿತು ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಘಟನೆ ವಿವರ: ಗಾರೆ ಕೆಲಸದವರ ಸೋಗಿನಲ್ಲಿ ಐಷಾರಾಮಿ ಕಾರಿನಲ್ಲಿ ಬರುವವರನ್ನು ತಡೆದು, ತಾವು ಗಾರೆ ಕೆಲಸ ಮಾಡುವಾಗ ಕುಡಿಕೆಯಲ್ಲಿ ಹಳೆಯ ಕಾಲದ ಚಿನ್ನದ ನಾಣ್ಯಗಳು ಸಿಕ್ಕಿವೆ. ಪೊಲೀಸರ ಭಯದಿಂದ ಇವುಗಳನ್ನು ಮಾರಾಟ ಮಾಡಲು ಆಗುತ್ತಿಲ್ಲ. ಹಾಗಾಗಿ, ಕಡಿಮೆ ಹಣಕ್ಕೆ ಇವುಗಳನ್ನು ಕೊಡುವುದಾಗಿ ನಂಬಿಸುತ್ತಿದ್ದರು. ಮೊದಲಿಗೆ ಅಸಲಿ ಚಿನ್ನದ ನಾಣ್ಯ ಅಥವಾ ಗುಂಡುಗಳನ್ನು ಕೊಡುತ್ತಿದ್ದರು.

ಇವುಗಳನ್ನು ಪರೀಕ್ಷಿಸಿದ ಬಳಿಕ ನಂಬುತ್ತಿದ್ದ ಶ್ರೀಮಂತರು ಇವರಿಗೆ ಲಕ್ಷಗಟ್ಟಲೆ ಹಣ ಕೊಡುತ್ತಿದ್ದರು. ಹಣ ಪಡೆದ ನಂತರ ಇವರು ನೀಡುತ್ತಿದ್ದ ಹಳೆಯ ಚಿನ್ನದ ನಾಣ್ಯಗಳು ನಕಲಿಯಾಗಿರುತ್ತಿದ್ದವು. ಇದೇ ರೀತಿ ರಾಘವೇಂದ್ರ ಅವರಿಗೆ ಹಳೆಯ ಚಿನ್ನದ ನಾಣ್ಯಗಳನ್ನು ಕೊಡುವುದಾಗಿ ಹೇಳಿ ನಂಬಿಸಿ ಮೋಸ ಮಾಡಿದ್ದರು.

ಕಾರ್ಯಾಚರಣೆಯು ಡಿಸಿಪಿ ಪ್ರಕಾಶ್‌ಗೌಡ ಹಾಗೂ ಗೀತಾಪ್ರಸನ್ನ ಅವರ ಮಾರ್ಗದರ್ಶನದಲ್ಲಿ ನಡೆದಿತ್ತು. ಕುವೆಂಪುನಗರದ ಇನ್‌ಸ್ಪೆಕ್ಟರ್ ಬಿ.ಸಿ.ರಾಜು, ಅಪರಾಧ ಪತ್ತೆ ವಿಭಾಗದ ಇನ್‌ಸ್ಪೆಕ್ಟರ್ ಜಗದೀಶ್, ಸರಸ್ವತಿಪುರಂ ಇನ್‌ಸ್ಪೆಕ್ಟರ್ ಆರ್.ವಿಜಯಕುಮಾರ್, ಪಿಎಸ್‌ಐ ಸುನಿಲ್, ಸಿಬ್ಬಂದಿಯಾದ ಲಿಂಗರಾಜಪ್ಪ, ರಾಮಸ್ವಾಮಿ, ಸುರೇಶ್, ಬಸವರಾಜೇಅರಸ್, ರಾಘವೇಂದ್ರ, ಅರ್ಜುನ್, ಎಚ್.ವಿ.ಮಂಜುನಾಥ್, ನಟರಾಜ, ಮಂಜುನಾಥ, ಪುಟ್ಟಪ್ಪ, ಕುಮಾರ್ ಹಾಗೂ ಮಂಜು ಕಾರ್ಯಾಚರಣೆ ತಂಡದಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.