ಬುಧವಾರ, ಅಕ್ಟೋಬರ್ 21, 2020
22 °C
ಆನೆ ಶಿಬಿರಗಳಿಗೆ ತೆರಳಿ ಪರಿಶೀಲಿಸಿದ ಅರಣ್ಯಾಧಿಕಾರಿಗಳು, ಸದ್ಯದಲ್ಲೇ ಪಿಸಿಸಿಎಫ್‌ಗೆ ವರದಿ

ಜಂಬೂಸವಾರಿ: ಆನೆಗಳ ಪಟ್ಟಿ ಸಿದ್ಧ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಈ ಬಾರಿ ಅರಮನೆ ಆವರಣಕ್ಕೆ ಸೀಮಿತವಾಗಿ ನಡೆಯಲಿರುವ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ ಪಟ್ಟಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ.

ವಿಕ್ರಮ, ವಿಜಯಾ, ಗೋಪಿ, ಕಾವೇರಿ ಆಯ್ಕೆ ಬಹುತೇಕ ಖಚಿತವಾಗಿದೆ. ಆದರೆ, ಅರ್ಜುನ ಆನೆಗೆ 60 ವರ್ಷ ತುಂಬಿರುವುದರಿಂದ ಅಂಬಾರಿ ಹೊರುವ ಆನೆಯ ವಿಚಾರದಲ್ಲಿ ತುಸು ಗೊಂದಲ ಏರ್ಪಟ್ಟಿದೆ. ಅರಣ್ಯ ಇಲಾಖೆ ಮೂಲಗಳ ಪ್ರಕಾರ ಈ ಬಾರಿ ಅಭಿಮನ್ಯು ಆನೆಗೆ ಈ ಅವಕಾಶ ಸಿಗಲಿದೆ. ಸುಪ್ರೀಂಕೋರ್ಟ್‌ ನಿರ್ದೇಶನ‌ದ ಪ್ರಕಾರ 60 ವರ್ಷ ತುಂಬಿದ ಆನೆಗಳ ಮೇಲೆ ಹೆಚ್ಚು ಒತ್ತಡ ಹೇರುವಂತಿಲ್ಲ. ಹೀಗಾಗಿ, ಬಳ್ಳೆ ಶಿಬಿರದಿಂದ ಅರ್ಜುನನನ್ನು ಕರೆತರುವುದು ಅನುಮಾನ.

ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಎಂ.ಜಿ.ಅಲೆಕ್ಸಾಂಡರ್‌ ನೇತೃತ್ವದಲ್ಲಿ ಅಧಿಕಾರಿಗಳು ಆನೆ ಶಿಬಿರಗಳಿಗೆ ಭೇಟಿ ನೀಡಿ ಆನೆಗಳ ಆರೋಗ್ಯ, ದೈಹಿಕ ಸಾಮರ್ಥ್ಯ, ಕಣ್ಣುಗಳನ್ನು ಪರಿಶೀಲಿಸಿದ್ದಾರೆ. ಈ ಬಾರಿ ಐದು ಆನೆಗಳು ಮಾತ್ರ ಮೈಸೂರು ನಗರಕ್ಕೆ ಬರಲಿವೆ.

‘ಸಾಕಾನೆ ಶಿಬಿರಗಳಿಗೆ ಭೇಟಿ ನೀಡಿ ಆನೆಗಳನ್ನು ಗುರುತಿಸಿದ್ದೇವೆ. ಎರಡು ದಿನಗಳಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ (ಪಿಸಿಸಿಎಫ್‌) ಐದು ಆನೆಗಳ ಬಗ್ಗೆ ವರದಿ ನೀಡಲಿದ್ದೇವೆ. ಮಾವುತರು ತರಬೇತಿ ನೀಡುತ್ತಿದ್ದು, ಎಲ್ಲಾ ಆನೆಗಳು ಆರೋಗ್ಯವಾಗಿವೆ’ ಎಂದು ಅಲೆಕ್ಸಾಂಡರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮತ್ತಿಗೋಡು ಶಿಬಿರಕ್ಕೆ ತೆರಳಿ ಅಭಿಮನ್ಯು (54) ಆನೆ ವೀಕ್ಷಿಸಿದ್ದಾರೆ.  ಆನೆಕಾಡು ಶಿಬಿರಕ್ಕೆ ಭೇಟಿ ನೀಡಿ ವಿಕ್ರಮ (47), ವಿಜಯಾ (63) ಹಾಗೂ ದುಬಾರೆ ಶಿಬಿರದಲ್ಲಿ ಗೋಪಿ (38), ಕಾವೇರಿ (42) ಆನೆ ತಪಾಸಣೆ ನಡೆಸಿದ್ದಾರೆ.

ಅಂಬಾರಿ ಹೊರುವ ಅವಕಾಶ ಸಿಗುವ ಸಾಧ್ಯತೆ ಇರುವುದರಿಂದ ಅಭಿಮನ್ಯು ಆನೆಯತ್ತ ಈಗ ಎಲ್ಲರ ಕಣ್ಣು ನೆಟ್ಟಿದೆ. 20 ವರ್ಷಗಳಿಂದ ಈ ಆನೆ ದಸರೆಯಲ್ಲಿ ಪಾಲ್ಗೊಳ್ಳುತ್ತಿದೆ.

ಅರಮನೆ ಕಾರ್ಯಕ್ಕೆ ಆನೆ: ಆಯುಧಪೂಜೆ ಸೇರಿದಂತೆ ಅರಮನೆಯ ಧಾರ್ಮಿಕ ಕಾರ್ಯಕ್ರಮಗಳಿಗೆ ಗಜಪಡೆಯ ಮೂರು ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಪಟ್ಟದಾನೆ ವಿಕ್ರಮ, ನಿಶಾನೆ ಗೋಪಿ ಹಾಗೂ ಕುಮ್ಕಿ ಆನೆ ವಿಜಯಾ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು