ಗುರುವಾರ , ಸೆಪ್ಟೆಂಬರ್ 24, 2020
20 °C

ದಸರಾ ಸ್ತಬ್ಧಚಿತ್ರಗಳಿಗೆ ಬಹುಮಾನ: ಚಾಮರಾಜನಗರ ಪ್ರಥಮ, ಉತ್ತರ ಕನ್ನಡ ದ್ವಿತೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದ ಅತ್ಯುತ್ತಮ ಸ್ತಬ್ಧಚಿತ್ರಗಳಿಗೆ ಸೋಮವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬಹುಮಾನ ಹಾಗೂ ನೆನಪಿನ ಕಾಣಿಕೆ ವಿತರಿಸಲಾಯಿತು.

ಚಾಮರಾಜನಗರ ಜಿಲ್ಲೆಯ ಸಮೃದ್ಧಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ ಸ್ತಬ್ಧಚಿತ್ರಕ್ಕೆ ಪ್ರಥಮ ಸ್ಥಾನ, ಉತ್ತರ ಕನ್ನಡ ಜಿಲ್ಲೆಯ ಕದಂಬ ಬನವಾಸಿ ಸ್ತಬ್ಧಚಿತ್ರಕ್ಕೆ ದ್ವಿತೀಯ, ತುಮಕೂರು ಜಿಲ್ಲೆಯ ನಡೆದಾಡುವ ದೇವರು ಸ್ತಬ್ಭಚಿತ್ರಕ್ಕೆ ತೃತೀಯ ಸ್ಥಾನ ದೊರಕಿದ್ದು, ಮೂರು ಜಿಲ್ಲೆಗಳಿಗೆ ತಲಾ ₹ 30,000 ನಗದು ಬಹುಮಾನ, ಒಂದು ಆನೆ ಪ್ರತಿಮೆಯ ನೆನಪಿನ ಕಾಣಿಕೆ ಹಾಗೂ ಒಂದು ಪ್ರಮಾಣ ಪತ್ರವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ ವಿತರಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಶಿಶಿಲ ಬೆಟ್ಟ ಸ್ತಬ್ಧಚಿತ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಸೌಲಭ್ಯಗಳ ಮಾಹಿತಿ ಸ್ತಬ್ಧಚಿತ್ರ, ಶಿವಮೊಗ್ಗ ಜಿಲ್ಲೆಯ ಫಿಟ್ ಇಂಡಿಯಾ ಸ್ತಬ್ಧಚಿತ್ರಗಳು ಸಮಾಧಾನಕರ ಬಹುಮಾನ ಪಡೆದಿದ್ದು, ಆನೆ ಪ್ರತಿಮೆಯ ನೆನಪಿನ ಕಾಣಿಕೆ ಹಾಗೂ ಒಂದು ಪ್ರಮಾಣಪತ್ರ ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ ‘ಸ್ತಬ್ಧಚಿತ್ರಗಳು ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯ ವೈಖರಿಯಿಂದ ಈ ಬಾರಿ ತುಂಬಾ ಗುಣಮಟ್ಟದಿಂದ ಕೂಡಿದ್ದು, ಸರ್ಕಾರದ ಯೋಜನೆಗಳು, ಗಣ್ಯ ವ್ಯಕ್ತಿಗಳ ಕೊಡುಗೆಗಳು ಹಾಗೂ ಸಾಮಾಜಿಕ ಕಳಕಳಿಯ ಬಗ್ಗೆ ಅರಿವು ಮೂಡಿಸುವ ರೀತಿ ಮೂಡಿ ಬಂದಿದ್ದು, ಅಪಾರ ಜನ ಮೆಚ್ಚುಗೆ ಪಡೆದುಕೊಂಡವು’ ಎಂದು ಹೇಳಿದರು.

ಸ್ತಬ್ಧಚಿತ್ರ ಉಪಸಮಿತಿ ಅಧ್ಯಕ್ಷ ಸು.ಮುರಳಿ, ಉಪಾಧ್ಯಕ್ಷರಾದ ಅರುಣಕುಮಾರ್‌ಗೌಡ, ಲಕ್ಷ್ಮೀದೇವಿ, ನಂದಕುಮಾರ್, ಸಮಿತಿಯ ಉಪವಿಶೇಷಾಧಿಕಾರಿ ಪದ್ಮಶೇಖರ್ ಪಾಂಡೆ, ಕಾರ್ಯಾಧ್ಯಕ್ಷ ಲಿಂಗರಾಜು, ಕಾರ್ಯದರ್ಶಿ ಸರಸ್ವತಿ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.