ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಚರ್ಚಾ ಶಿಬಿರಕ್ಕೆ ಮೈಸೂರಿನ ವಿದ್ಯಾರ್ಥಿನಿಯರು

ಅಮೆರಿಕದ ಕಾರ್ನೆಲ್ ವಿ.ವಿ.ಯಲ್ಲಿ ‘ಅಂತರರಾಷ್ಟ್ರೀಯ ಬೇಸಿಗೆ ಚರ್ಚಾ ಶಿಬಿರ’ ಆಯೋಜನೆ
Last Updated 22 ಜುಲೈ 2019, 6:57 IST
ಅಕ್ಷರ ಗಾತ್ರ

ಮೈಸೂರು: ವಿದ್ಯಾರ್ಥಿಗಳ ವಾಕ್ಚಾತುರ್ಯ, ವಿಚಾರ ಮಂಡನೆಯ ಸಾಮರ್ಥ್ಯ ವೃದ್ಧಿಸಲು ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯವು ಆಯೋಜಿಸಿರುವ ‘ಅಂತರರಾಷ್ಟ್ರೀಯ ಬೇಸಿಗೆ ಚರ್ಚಾ ಶಿಬಿರ’ಕ್ಕೆ ಮೈಸೂರಿನ ಆರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.

ಜುಲೈ 29ರಿಂದ ಆಗಸ್ಟ್ 3ರವರೆಗೆ ಶಿಬಿರ ನಡೆಯಲಿದ್ದು, ಆಯ್ಕೆಯಾಗಿರುವ ಆಚಾರ್ಯ ವಿದ್ಯಾಕುಲದ ಭವಾನಿ ಎಸ್. ಹಂಪೆ, ಡಿ.ಕೆ.ಋತು, ಎಕ್ಸೆಲ್ ಪಬ್ಲಿಕ್ ಶಾಲೆಯ ಮೃದುಲಾ ಹಂಸಿನಿ, ಸೇಂಟ್ ಜೋಸೆಫ್ ಕೇಂದ್ರೀಯ ಶಾಲೆಯ ಆರ್. ಲಹರಿ, ಡೆ ಪೌಲ್ ಅಂತರರಾಷ್ಟ್ರೀಯ ವಸತಿ ಶಾಲೆಯ ಎಸ್. ದಿಶಾ, ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್‌ನ ಎಂ.ಡಿ.ದೀಕ್ಷಾ ಜುಲೈ 26ರಂದು ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ (ಎಸ್‌ವಿವೈಎಂ) ಅಂಗಸಂಸ್ಥೆ ವಿವೇಕಾನಂದ ಭಾರತೀಯ ಅಧ್ಯಯನ ಸಂಸ್ಥೆಯು (ವಿಐಐಎಸ್) ಕಾರ್ನೆಲ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ, ‘ಜಾಗತಿಕ ಸೇವಾ ಕಲಿಕೆ’ ಎಂಬ ಶೈಕ್ಷಣಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ. ಕಾರ್ನೆಲ್‌ ವಿ.ವಿ.ಯ ‘ಸ್ಪೀಚ್ ಮತ್ತು ಡಿಬೇಟ್’ ಸಹ-ಪಠ್ಯ ಕಾರ್ಯಕ್ರಮದ ಇದಾಗಿದ್ದು, ವಿಶ್ವ ದರ್ಜೆಯ ಬೋಧನಾ ಸಿಬ್ಬಂದಿ ಮೂಲಕ ತರಬೇತಿ ನೀಡಲಾಗುತ್ತಿದೆ.

ಜೂನ್‌ 10ರಿಂದ 14ರವರೆಗೆ, 9 ಹಾಗೂ 10 ನೇ ತರಗತಿಯ ವಿದ್ಯಾರ್ಥಿನಿಯರಿಗಾಗಿ ಈ ಚರ್ಚಾ ಶಿಬಿರ ಆಯೋಜಿಸಲಾಗಿತ್ತು. ಸರ್ಕಾರಿ ಶಾಲೆಗಳ ಐವರು ಸೇರಿದಂತೆ ವಿವಿಧ ಶಾಲೆಗಳ 43 ಮಕ್ಕಳು ಪಾಲ್ಗೊಂಡಿದ್ದರು. ಕಾರ್ನೆಲ್ ವಿ.ವಿ.ಯ 'ಸ್ಪೀಚ್ ಮತ್ತು ಡಿಬೇಟ್' ಸೊಸೈಟಿಯ ಔಟ್‌ರೀಚ್ ನಿರ್ದೇಶಕಿ ಎಸ್ತಪಾನಿಯ ಪಲಾಸಿಯಸ್ ತರಬೇತಿ ನೀಡಿದ್ದರು ಎಂದು ಶಿಬಿರದ ನೇತೃತ್ವ ವಹಿಸಿದ್ದ ವಿಐಐಎಸ್ ನಿರ್ದೇಶಕಿ ಡಾ.ರೇಖಾ ಷಣ್ಮುಖ ಮಾಹಿತಿ ನೀಡಿದರು.

‘ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ ಯುವ ಪೀಳಿಗೆಯನ್ನು ಸಮರ್ಥವಾಗಿ ಸಜ್ಜುಗೊಳಿಸಬೇಕು. ಹೀಗಾಗಿ, 14ರಿಂದ 16 ವರ್ಷದವರಿಗೆ ಚರ್ಚಾ ಶಿಬಿರ ಆಯೋಜಿಸಲಾಗಿತ್ತು’ ಎಂದು ಎಸ್‌ವಿವೈಎಂ ಸಂಸ್ಥಾಪಕ ಡಾ.ಆರ್. ಬಾಲಸುಬ್ರಹ್ಮಣ್ಯಂ ತಿಳಿಸಿದರು.

‘ಹೆಣ್ಣು ಮಕ್ಕಳ ಸಬಲೀಕರಣ, ವಾಕ್ಚಾತುರ್ಯ ಹೆಚ್ಚಿಸುವ ಉದ್ದೇಶದಿಂದ ವಿದ್ಯಾರ್ಥಿನಿಯರಿಗೆ ಮಾತ್ರ ಈ ಶಿಬಿರ ಆಯೋಜಿಸಲಾಗಿತ್ತು. ಬೀರಿಹುಂಡಿ ಸರ್ಕಾರಿ ಪ್ರೌಢಶಾಲೆಯ ಕಾವ್ಯಾ ಕನ್ನಡದಲ್ಲೇ ಅದ್ಭುತವಾಗಿ ಚರ್ಚೆ ಮಾಡಿದಳು. ಆದರೆ, ಚರ್ಚಾ ಶಿಬಿರವು ಇಂಗ್ಲಿಷ್‌ನಲ್ಲೇ ನಡೆಯುವುರಿಂದ ಆಕೆಯನ್ನು ಆಯ್ಕೆ ಮಾಡಲು ಆಗಲಿಲ್ಲ’ ಎಂದರು.

ಇಂಗ್ಲಿಷ್‌ ಗೊತ್ತಿಲ್ಲ ಎಂಬ ಕೀಳರಿಮೆಯನ್ನು ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಬೆಳೆಸಬಾರದು ಎನ್ನುವ ಅವರು, ಮುಂದಿನ ವರ್ಷದಿಂದ ಸರ್ಕಾರಿ ಶಾಲೆಯ ಮಕ್ಕಳನ್ನು ಇಂಗ್ಲಿಷ್‌ನಲ್ಲಿ ಸಜ್ಜುಗೊಳಿಸಲು ಉದ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT