ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಪ್ರಾಧಿಕಾರಕ್ಕೆ ಸಿಗದ ಮನ್ನಣೆ!

ಹಲವು ವರ್ಷಗಳಿಂದಲೂ ಬೇಡಿಕೆ, ಈ ಬಾರಿಯೂ ಆಗ್ರಹ
Last Updated 15 ಜುಲೈ 2022, 8:20 IST
ಅಕ್ಷರ ಗಾತ್ರ

ಮೈಸೂರು: ಪ್ರತಿ ವರ್ಷವೂ ಆಚರಿಸಲಾಗುವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆಂದೇ ಪ್ರತ್ಯೇಕವಾಗಿ ಪ್ರಾಧಿಕಾರ ರಚಿಸಬೇಕು ಎಂಬ ಇಲ್ಲಿನ ಜನರ ಕೂಗಿಗೆ ಇನ್ನೂ ಮನ್ನಣೆ ದೊರೆತಿಲ್ಲ.

ದಸರಾ ಪ್ರಾಧಿಕಾರ ರಚಿಸುವಂತೆ ಬಹಳ ವರ್ಷಗಳಿಂದಲೂ ಬೇಡಿಕೆ ಇದೆ. ದಸರಾ ಹೊಸ್ತಿಲಲ್ಲಿ ಈ ಬಾರಿಯೂ ಒತ್ತಾಯ ಕೇಳಿಬಂದಿದೆ. ನಾಡಹಬ್ಬಕ್ಕೆ ಸಂಬಂಧಿಸಿದ ಪ್ರತಿ ಸಭೆಗಳಲ್ಲೂ ಪ್ರಾಧಿಕಾರದ ಕುರಿತು ಒತ್ತಾಯ ಕೇಳಿಬರುತ್ತಲೇ ಇದೆ. ಆಗಿನ ಜಿಲ್ಲಾ ಉಸ್ತುವಾರಿ ಸಚಿವರು, ಪ್ರವಾಸೋದ್ಯಮ ಸಚಿವರು ಹಾಗೂ ಮುಖ್ಯಮಂತ್ರಿ ಗಮನಸೆಳೆಯುವ ಕೆಲಸವನ್ನು ಇಲ್ಲಿನ ಜನಪ್ರತಿನಿಧಿಗಳು, ಮಾಜಿ ಮೇಯರ್‌ಗಳು, ಪ್ರಜ್ಞಾವಂತರು, ಸಂಘ–ಸಂಸ್ಥೆಗಳ ಮುಖಂಡರು ಮಾಡುತ್ತಲೇ ಬಂದಿದ್ದಾರೆ. ಆದರೆ, ಸರ್ಕಾರವು ಆಸಕ್ತಿ ತೋರಿಲ್ಲ.

ಪ್ರಾಧಿಕಾರ ರೂಪಿಸಿ, ಮಹೋತ್ಸವಕ್ಕೆ ಕೆಲವು ತಿಂಗಳು ಮುಂಚೆಯಿಂದಲೇ ತಯಾರಿ ಆರಂಭಿಸಬೇಕು ಎನ್ನುವುದು ಪ್ರಮುಖ ಒತ್ತಾಯವಾಗಿದೆ. ಆದರೆ, ‘ಸಂತೆಯ ಹೊತ್ತಿಗೆ ಮೂರು ಮೊಳ ನೇಯ್ದಂತೆ’ ಎಂಬಂತೆ ಕೊನೆ ಕ್ಷಣದಲ್ಲಿ ತರಾತುರಿಯಲ್ಲಿ ಸಿದ್ಧತೆಗಳನ್ನು ನಡೆಸುವುದು ‘ಸಂಪ್ರದಾಯ’ ಎನ್ನುವಂತಾಗಿ ಹೋಗಿದೆ!

‘ಬೂಸ್ಟರ್‌ ಡೋಸ್‌’ ನೀಡಲು:

ಕೋವಿಡ್ ಸಾಂಕ್ರಾಮಿಕದ ಕಾರ್ಮೋಡ ಕರಗಿರುವುದರಿಂದಾಗಿ, ಈ ಬಾರಿ ವಿಜೃಂಭಣೆಯಿಂದ ದಸರಾ ನಡೆಸಬೇಕು ಎನ್ನುವ ಒತ್ತಾಯಗಳು ಕೇಳಿಬಂದಿವೆ. ನಗರ, ಜಿಲ್ಲೆ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಕೊರೊನಾದಿಂದಾಗಿ ಸೊರಗಿರುವ ಪ್ರವಾಸೋದ್ಯಮಕ್ಕೆ ‘ಬೂಸ್ಟರ್‌ ಡೋಸ್’ ಕೊಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಈ ನಡುವೆ, ದಸರಾ ಪ್ರಾಧಿಕಾರದ ಅಗತ್ಯದ ಚರ್ಚೆಯೂ ನಡೆಯುತ್ತಿದೆ.

ಪ್ರಾಧಿಕಾರ ರಚನೆಗೆ ಸಂಬಂಧಿಸಿದಂತೆ ಕೆಲವು ವರ್ಷಗಳ ಹಿಂದೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಅದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುತ್ತಿಲ್ಲ. ನಾಡಹಬ್ಬದ ಸಂದರ್ಭದಲ್ಲಿ ದೇಶ–ವಿದೇಶಗಳ ಪ್ರವಾಸಿಗರನ್ನು ಸಾಂಸ್ಕೃತಿಕ ನಗರಿಯತ್ತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುವಂತೆ ಮಾಡಬೇಕು ಎನ್ನುವ ಆಗ್ರಹಗಳಿವೆ. ಪ್ರವಾಸೋದ್ಯಮ ಭಾಗಿದಾರರು, ಹೋಟೆಲ್ ಮಾಲೀಕರ ಸಂಘ, ಯೋಗ ತರೇಬೇತಿ ಸಂಸ್ಥೆಗಳು, ಪ್ರವಾಸಿ ಗೈಡ್‌ಗಳು, ಟೂರ್ಸ್‌ ಮತ್ತು ಟ್ರಾವೆಲ್ಸ್ ಸಂಘ, ಮಾಜಿ ಮೇಯರ್‌ಗಳ ಸಂಘದವರಿಂದ ಪ್ರಾಧಿಕಾರಕ್ಕೆ ಹಿಂದಿನಿಂದಲೂ ಒತ್ತಾಯವಿದೆ. ಈ ಮೂಲಕ ವ್ಯವಸ್ಥಿತವಾಗಿ ತಯಾರಿ ನಡೆಯಬೇಕು; ಅದಕ್ಕೆ ತಕ್ಕಂತೆ ಅನುದಾನವನ್ನೂ ಒದಗಿಸಬೇಕು ಎನ್ನುವುದು ಅವರ ಕಾಳಜಿಯಾಗಿದೆ.

‘4 ಜಿಲ್ಲೆಗಳ ವ್ಯಾಪ್ತಿ ಇರಲಿ’

‘ಒಂದು ದಿನದ ಮೆರವಣಿಗೆ ಹಾಗೂ ಹಿಂದಿನ 9 ದಿನಗಳ ಕಾರ್ಯಕ್ರಮದ ದಸರಾ ಉತ್ಸವಕ್ಕಾಗಿ ಮಾತ್ರವೇ ಪ್ರಾಧಿಕಾರದ ಅಗತ್ಯವಿಲ್ಲ’ ಎನ್ನುತ್ತಾರೆ ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು.

‘ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರವನ್ನೇ ದಸರಾ ಪ್ರಾಧಿಕಾರ ಎಂದು ಬದಲಾಯಿಸಬೇಕು. ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳನ್ನು ಒಂದು ಘಟಕವೆಂದು ಪರಿಗಣಿಸಿ ಪ್ರಾಧಿಕಾರದ ವ್ಯಾಪ್ತಿಗೆ ತರಬೇಕು’ ಎಂಬ ಸಲಹೆ ಅವರದು.

‘ಪ್ರಾಧಿಕಾರವು ದಸರಾ ಮುಗಿದ ಬಳಿಕ ಹಾಸನದಲ್ಲಿ ಹೊಯ್ಸಳೋತ್ಸವ, ಶ್ರವಣೋತ್ಸವ, ಮಂಡ್ಯದಲ್ಲಿ ವೈಷ್ಣವೋತ್ಸವ, ಚಾಮರಾಜನಗರದಲ್ಲಿ ಜನಪದೋತ್ಸವ ಹೀಗೆ... ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಮತ್ತು ಸಂಸ್ಕೃತಿ ಬಿಂಬಿಸುವುದಕ್ಕೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ನಡೆಸಬೇಕು. ತಿಂಗಳಲ್ಲಿ ಸರಾಸರಿ ಎರಡು ಕಾರ್ಯಕ್ರಮಗಳನ್ನಾದರೂ ಮಾಡಬಹುದು. ಪ್ರಾಧಿಕಾರವು ವರ್ಷ ಪೂರ್ತಿ ಚಟುವಟಿಕೆಗಳನ್ನು ನಡೆಸಬೇಕು. ಈ ಬಗ್ಗೆ ಪ್ರವಾಸೋದ್ಯಮ ಸಚಿವರಿಗೂ ಮನವಿ ಸಲ್ಲಿಸಿದ್ದೇನೆ’ ಎಂದು ತಿಳಿಸಿದರು.

‘ಪ್ರಾಧಿಕಾರ ಬಹಳ ಅಗತ್ಯವಿದೆ’

‘ದಸರಾಗೆ ಪ್ರಾಧಿಕಾರ ಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ವರದಿ ಸಲ್ಲಿಸುವಂತೆ ಸರ್ಕಾರವು ಆಗಿನ ಡಾ.ಪಿ.ಎಸ್. ರಾಮಾನುಜನ್ ಅವರಿಗೆ ಸೂಚಿಸಿತ್ತು. ಅವರು ಪ್ರಾಧಿಕಾರ ಮುಖ್ಯವಾಗಿದೆ ಎನ್ನುವ ಶಿಫಾರಸು ಒಳಗೊಂಡ ವರದಿ ಸಲ್ಲಿಸಿದ್ದರು. ಜಿ.ಟಿ. ದೇವೇಗೌಡರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಲೂ ಪ್ರಸ್ತಾವ ಸಲ್ಲಿಕೆಯಾಗಿತ್ತು. ಆದರೆ, ಅನುಷ್ಠಾನಕ್ಕೆ ಸರ್ಕಾರಗಳು ಕ್ರಮ ಕೈಗೊಂಡಿಲ್ಲ’ ಎನ್ನುತ್ತಾರೆ ಇತಿಹಾಸ ತಜ್ಞ ಈಚನೂರು ಕುಮಾರ್.

‘ರಾಜರ ಕಾಲದಲ್ಲೂ ಕೆಲವು ಇಲಾಖೆಗಳು ದಸರಾಗೆಂದೇ ಪ್ರತ್ಯೇಕವಾಗಿ ಕೆಲಸ ಮಾಡುತ್ತಿದ್ದವು. ರಾಜರು ಉಸ್ತುವಾರಿ ಮಾಡುತ್ತಿದ್ದರು. ಹೀಗಾಗಿಯೇ, ಆಗಿನ ದಸರಾ ಚೆನ್ನಾಗಿತ್ತು ಎನ್ನುವುದು ಜನರ ಅಭಿಪ್ರಾಯವಾಗಿದೆ. ಪ್ರಾಧಿಕಾರ ರಚನೆಗೆ ಸರ್ಕಾರಕ್ಕೆ ಈಗಲೂ ಅವಕಾಶವಿದೆ’ ಎನ್ನುತ್ತಾರೆ ಅವರು.

ಪ್ರವಾಸೋದ್ಯಮಕ್ಕೂ ಅನುಕೂಲ

‘ದಸರಾ ಪ್ರಾಧಿಕಾರ ರಚನೆಯಿಂದ ಪ್ರವಾಸೋದ್ಯಮ ಚಟುವಟಿಕೆ ಪ್ರೋತ್ಸಾಹಿಸುವುದಕ್ಕೂ ಅವಕಾಶವಿದೆ. ಹೀಗಾಗಿಯೇ ಹಲವು ವರ್ಷಗಳಿಂದಲೂ ಬೇಡಿಕೆ ಇಡುತ್ತಿದ್ದೇವೆ’ ಎನ್ನುತ್ತಾರೆ ಮೈಸೂರು ಸಂಘ–ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್‌.ಪ್ರಶಾಂತ್‌.

‘ಪ್ರತ್ಯೇಕ ಪ್ರಾಧಿಕಾರ ರಚನೆಯಾದರೆ ದಸರಾ ಗಾತ್ರವನ್ನು ವಿಸ್ತರಿಸುವುದಕ್ಕೆ ಅವಕಾಶವಿದೆ. ಕೊನೆ ಕ್ಷಣದಲ್ಲಿ ತಯಾರಿ, ತರಾತುರಿ ತ‍ಪ್ಪಿಸಬಹುದು. ಕಾರ್ಯಕ್ರಮ ಪಟ್ಟಿಯನ್ನು ಯೋಜಿತವಾಗಿ, ಹಲವು ತಿಂಗಳುಗಳಿಗೆ ಮುನ್ನವೇ ಸಿದ್ಧಪಡಿಸಬಹುದು. ಅದನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿರುವ ನಾವು ದೇಶದಾದ್ಯಂತ ಹಾಗೂ ವಿದೇಶಗಳಿಗೆ ಹಂಚಿಕೊಳ್ಳಬಹುದು. ಅಲ್ಲಿನ ಪ್ರವಾಸಿಗರನ್ನು ಸೆಳೆಯಬಹುದು. ಆಗ, ಆದಾಯದ ಸೃಷ್ಟಿಯೂ ಸಾಧ್ಯವಾಗುತ್ತದೆ’ ಎಂಬ ಅಭಿಪ್ರಾಯ ಅವರದು.

ಸರ್ಕಾರದ ಹಂತದಲ್ಲಿದೆ

ದಸರಾ ಪ್ರಾಧಿಕಾರ ರಚನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜನಪ್ರತಿನಿಧಿಗಳು ಚರ್ಚಿಸಿದ್ದಾರೆ. ಪ್ರಸ್ತಾವವು ಸರ್ಕಾರದ ಮಟ್ಟದಲ್ಲಿದೆ.

–ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT