ಸೋಮವಾರ, ಸೆಪ್ಟೆಂಬರ್ 20, 2021
22 °C
ಗಿರಿಜನ ಪುನರ್ವಸತಿ ಅನುಷ್ಠಾನ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿಕೆ

ಹುಣಸೂರು: ಮಾಸ್ತಿಗುಡಿ ಗಿರಿಜನ ಕೇಂದ್ರ ಅಭಿವೃದ್ಧಿಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ಮಾಸ್ತಿಗುಡಿ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ಮೂಲಸೌಕರ್ಯ ಕಲ್ಪಿಸಲು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಾಗರಹೊಳೆ ವೀರನಹೊಸ ಹಳ್ಳಿಯಲ್ಲಿ ಬುಧವಾರ ನಡೆದ ಗಿರಿಜನ ಪುನರ್ವಸತಿ ಅನುಷ್ಠಾನ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು.

ಇತ್ತೀಚೆಗೆ ಮಾಸ್ತಿಗುಡಿ ಪುನರ್ವಸತಿ ಕೇಂದ್ರದ ಗಿರಿಜನರು ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದರು. ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಶಾಸಕರಾದ ಎಚ್‌.ಪಿ.ಮಂಜುನಾಥ್, ಅನಿಲ್‌ ಕುಮಾರ್‌ ಜಿಲ್ಲಾಧಿಕಾರಿ ಗಮನ ಸೆಳೆದರು.

ಈ ಸಂಬಂಧ ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು. ಬಳಿಕ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಯೋಗೇಶ್ ಮತ್ತು ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿ ಅವರಿಗೆ ಕಂದಾಯ ಮತ್ತು ಕಾಲೊನಿ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಲು ಸೂಚಿಸಿದರು.

ಮಾಸ್ತಿಗುಡಿ ಪುನರ್ವಸತಿ ಕೇಂದ್ರಕ್ಕೆ ಸಂಬಂಧಿಸಿದಂತೆ ವಿವಿಧ ಕಾಮಗಾರಿ ಗಳನ್ನು ಕೈಗೊಂಡ ಗುತ್ತಿಗೆದಾರರಿಗೆ ವಿತರಿಸಬೇಕಿರುವ ಬಾಕಿ ಹಣ ₹14.20 ಲಕ್ಷ ಪಾವತಿಸುವಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಹುಲಿ ಯೋಜನಾ ನಿರ್ದೇಶಕ ಮಹೇಶ್ ಕುಮಾರ್ ಅವರಿಗೆ ಸೂಚಿಸಿದರು.

ಮಾಸ್ತಿಗುಡಿ ಪುನರ್ವಸತಿ ಕೇಂದ್ರಕ್ಕೆ ಸಂಬಂಧಿಸಿದ ವಿವಿಧ ಸಿವಿಲ್ ಅಭಿವೃದ್ಧಿ ಕಾಮಗಾರಿಗಳಿಗೆ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.

ಹಣ ಪಾವತಿ: ಶೆಟ್ಟಹಳ್ಳಿ ಪುನರ್ವಸತಿ ಕೇಂದ್ರದ ಗಿರಿಜನ ಮುಖಂಡ ರಾಜಪ್ಪ ಮಾತನಾಡಿ, ‘ಶೆಟ್ಟಹಳ್ಳಿ ಪುನರ್ವಸತಿ ಕೇಂದ್ರದ ಗಿರಿಜನರಿಗೆ ₹10 ಲಕ್ಷ ಪ್ಯಾಕೇಜ್ ಯೋಜನೆಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಈವರಗೆ ಸಮುದಾಯದ ಅಭಿವೃದ್ಧಿಗೆ ಅರಣ್ಯ ಇಲಾಖೆ ₹9.60 ಲಕ್ಷ ಅನುದಾನ ಬಳಸಿದ್ದು, ಉಳಿದ ಹಣ 10 ವರ್ಷದಿಂದ ಇಲಾಖೆ ಖಾತೆಯಲ್ಲಿ ಉಳಿದಿದೆ. ಈ ಹಣವನ್ನು ಗಿರಿಜನ ಫಲಾನುಭವಿಗಳಿಗೆ ವಿತರಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಮಾತನಾಡಿ, ‘ಸರ್ಕಾರಿ ಯೋಜನೆಯಲ್ಲಿ ಬಂದ ಹಣವನ್ನು ವೈಯಕ್ತಿಕ ಫಲಾನುಭವಿಗಳಿಗೆ ನೀಡಲು ಬರುವುದಿಲ್ಲ. ಉಳಿಕೆ ಅನುದಾನ ಇಲಾಖೆ ಖಾತೆಯಲ್ಲಿದ್ದು, ಆ ಹಣ ಇತರೆ ಸಮುದಾಯ ಅಭಿವೃದ್ಧಿ ಕಾಮಗಾರಿಗೆ ಬಳಸಲು ಸಾಧ್ಯ’ ಎಂದು ಸ್ಪಷ್ಟಪಡಿಸಿದರು.

ಪುನರ್ವಸತಿ ಕೇಂದ್ರದ ಫಲಾನುಭವಿಗೆ ನೀಡಿರುವ ಕೃಷಿ ಭೂಮಿಯ ಪಹಣಿಯಲ್ಲಿ ಫಲಾನುಭವಿ ಹೆಸರು ನಮೂದಿಸಿಲ್ಲ ಎಂದು ಮುಖಂಡ ಐಯಪ್ಪ ಗಮನ ಸೆಳೆದರು.

ಈ ಸಂಬಂಧ ಕಾಲಂ 11ರಲ್ಲಿ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಫಲಾನುಭವಿ ಹೆಸರು ನಮೂದಿಸಲು ಅವಕಾಶವಿದ್ದು, ನಮೂದಿಸುವಂತೆ ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ಆದೇಶಿಸಿದರು.

ಸಭೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಇದ್ದರು.‌

ಸ್ಮಶಾನ ನಿರ್ಮಾಣ: ಸರ್ವೆಗೆ ಸೂಚನೆ
ನಾಗಾಪುರ ಪುನರ್ವಸತಿ ಕೇಂದ್ರದ ಪ್ರಕಾಶ್ ಮಾತನಾಡಿ, ‘ನಾಗಾಪುರ ಪುನರ್ವಸತಿ ಕೇಂದ್ರ ಸ್ಥಾಪನೆಯಾಗಿ 20 ವರ್ಷಗಳಾಗಿದ್ದರೂ 6 ಬ್ಲಾಕ್‌ಗಳಲ್ಲಿ ಸ್ಮಶಾನ ಇಲ್ಲ’ ಎಂದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ‘ಕೇಂದ್ರದ ಪ್ರತಿ ಬ್ಲಾಕ್‌ಗೆ ಅರ್ಧ ಎಕರೆ ಸ್ಮಶಾನ ನಿರ್ಮಾಣಕ್ಕೆ ಅವಕಾಶವಿದ್ದು, ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಜಮೀನು ಗುರುತಿಸಬೇಕು’ ಎಂದು ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.