ಕ್ರೀಡಾಕೂಟ ಆಯೋಜನೆಗೆ ವಿವೇಚನೆ ಬೇಕು

7

ಕ್ರೀಡಾಕೂಟ ಆಯೋಜನೆಗೆ ವಿವೇಚನೆ ಬೇಕು

Published:
Updated:
Deccan Herald

ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಸಂಭಾವನೆ ಹಾಗೂ ಪ್ರಶಸ್ತಿ ಮೊತ್ತ ಪಾವತಿಸುವಲ್ಲಿ ಆಗುತ್ತಿರುವ ವಿಳಂಬ ವಿಚಾರ ಈ‌ಗ ಸುದ್ದಿಯಾಗಿದೆ. ಕ್ರೀಡಾಪಟುಗಳನ್ನು ಗೌರವದಿಂದ ಕಾಣುತ್ತಿಲ್ಲ, ಅವರಿಗೆ ಆಗುತ್ತಿರುವ ಅನ್ಯಾಯಕ್ಕೆ ಬೆಲೆ ಇಲ್ಲ, ಸಮಸ್ಯೆ ಆಲಿಸಲು ಕಿವಿಗಳೇ ಇಲ್ಲ ಎನ್ನುವುದು ಕ್ರೀಡಾಪಟುಗಳ ಆರೋಪ. ಆಯೋಜನೆ, ಸಂಘಟನೆಯಲ್ಲಿ ಆಗುತ್ತಿರುವ ಲೋಪವೇ ಇದಕ್ಕೆ ಕಾರಣ ಎನ್ನುವುದು ಕ್ರೀಡಾಪಟುಗಳ ಅಳಲು. ಈ ಕುರಿತು ಕ್ರೀಡಾತಜ್ಞ ಪ್ರೊ.ಶೇಷಣ್ಣ ಅವರು ‘ಪ್ರಜಾವಾಣಿ’ ಜತೆಗೆ ಮಾತುಕತೆ ನಡೆಸಿದ್ದಾರೆ.

1. ದಸರಾ ಕ್ರೀಡಾಕೂಟ ಪ್ರತಿಬಾರಿ ಅವ್ಯವಸ್ಥೆಯ ಆಗರವಾಗುತ್ತಿದ್ದರೂ ಹಿರಿಯ ಕ್ರೀಡಾಪಟುಗಳು, ಕ್ರೀಡಾಪ್ರಿಯರು ಸುಮ್ಮನಿರುವುದೇಕೆ?

* ಕ್ರೀಡಾಪಟುಗಳು ಸುಮ್ಮನಿದ್ದಾರೆ ಎಂದು ಹೇಳಲಾಗದು. ಇದೊಂದು ವಿಷವರ್ತುಲವಿದ್ದಂತೆ. ದಸರಾ ಕ್ರೀಡಾಕೂಟದ ಸಮಸ್ಯೆ ಈಗಿನದ್ದು ಅಲ್ಲವೇ ಅಲ್ಲ. ಇದು ಕಳೆದ 3 ದಶಕಗಳಿಗೂ ಹೆಚ್ಚಿನ ಸಮಸ್ಯೆ. ಸಂಭಾವನೆ ಪಾವತಿಸದೇ ಇರುವುದು, ಪ್ರಶಸ್ತಿ ಮೊತ್ತಗಳನ್ನು ನೀಡದೇ ಇರುವುದು ಇದೇ ಮೊದಲೇನೂ ಅಲ್ಲ. ಇಲ್ಲಿ ಸಂಘಟನೆ ಹಾಗೂ ಆಯೋಜನೆಯ ಸಮಸ್ಯೆ ದೊಡ್ಡದಿದೆ. ಅಲ್ಲದೇ, ಎಲ್ಲ ಆಯೋಜಕರಲ್ಲೂ ಸಮಸ್ಯೆ ಇದೆ. ತಮಗೆ ಅನ್ಯಾಯವಾಗುತ್ತಿದೆ ಎಂದು ಕ್ರೀಡಾಪಟುವೊಬ್ಬ ಮೇಲಧಿಕಾರಿಗಳಿಗೆ ದೂರು ನೀಡಿದರೆ ಆ ದೂರು ಕಸದ ಬುಟ್ಟಿಗೆ ಹೋಗುತ್ತದೆ. ಹಾಗಾಗಿ ಇದು ಸುಲಭವಾಗಿ ಬಗೆಹರಿಯದ ಸಮಸ್ಯೆ. ವ್ಯವಸ್ಥೆಯಲ್ಲೇ ದೋಷವಿರುವಾಗ ಸಮಸ್ಯೆಯನ್ನು ಸರಿಪಡಿಸಲು ಹೆಚ್ಚು ಶ್ರಮ ಹಾಕಬೇಕಾಗುತ್ತದೆ.

2. ಪ್ರಮುಖ ಕ್ರೀಡಾಪಟುಗಳು ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಿಕೆ ಕಡಿಮೆ ಆಗುತ್ತಿದೆಯಲ್ಲಾ?

* ಕ್ರೀಡಾಪಟುಗಳನ್ನು ಸರಿಯಾಗಿ ನಡೆಸಿಕೊಳ್ಳದೇ ಇರುವುದು ಇದಕ್ಕೆ ಪ್ರಮುಖ ಕಾರಣ. ಮೈಸೂರಿನ ಕ್ರೀಡಾ ಸಂಘಟನೆಗಳ ಸದಸ್ಯರನ್ನು ಅಥವಾ ಉಪ ಸಮಿತಿಯ ಬಳಿ ಇರುವ ಕ್ರೀಡಾಪಟುಗಳ ಪಟ್ಟಿಯನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಆಹ್ವಾನಿಸುತ್ತಿಲ್ಲ. ಬದಲಿಗೆ, ಯಾರು ಬೇಕಾದರೂ ಅರ್ಜಿ ಹಾಕಿಕೊಳ್ಳುವ ವ್ಯವಸ್ಥೆ ಇದೆ. ಇದರಿಂದಾಗಿ ಅವ್ಯವಸ್ಥೆ ಉಂಟಾಗುತ್ತಿದೆ. ಕ್ರೀಡಾಪಟುಗಳಿಗೆ ಸೂಕ್ತ ಗೌರವ ಕೊಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಕ್ರೀಡಾಪಟುಗಳಿಗೆ ಉಳಿದುಕೊಳ್ಳಲು ಜಾಗ ನೀಡದೇ, ಅನೇಕ ಬಾರಿ ರಸ್ತೆಯಲ್ಲಿ ದಿನಪತ್ರಿಕೆ ಹಾಸಿಕೊಂಡು ಮಲಗಿದ ಉದಾಹರಣೆಗಳನ್ನು ನಾನು ನೋಡಿದ್ದೇನೆ. ಅವಮಾನಿತಗೊಳ್ಳುವ ಕ್ರೀಡಾಪಟುಗಳು ಏಕೆ ಭಾಗವಹಿಸುತ್ತಾರೆ?

3. ಮೂರು ವರ್ಷಗಳಿಂದ ರಾಷ್ಟ್ರೀಯಮಟ್ಟದ ಕ್ರೀಡಾಕೂಟವನ್ನೇ ನಡೆಸಿಲ್ಲವಲ್ಲ?

* ರಾಷ್ಟ್ರಮಟ್ಟದ ಕೆಲ ಕ್ರೀಡಾಕೂಟಗಳು ನಡೆದಿವೆ. ನಡೆದೇ ಇಲ್ಲ ಎಂದು ಹೇಳಲಾಗದು. ಸಂಖ್ಯೆ ಕಡಿಮೆ ಎನ್ನಬಹುದಷ್ಟೇ. ಆದರೆ, ಇಲ್ಲಿ ನಮ್ಮ ಮನಸ್ಥಿತಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ನಾವು ಸದಾಕಾಲ ಅತಿಥಿಗಳಾಗಲು ಇಷ್ಟ ಪಡುತ್ತೇವೆಯೇ ಹೊರತು, ಅತಿಥಿಗಳನ್ನು ಆಹ್ವಾನಿಸಲು ಇಷ್ಟ ಪಡುವುದಿಲ್ಲ. ಯಾವಾಗಲೂ ಇತರ ಭಾಗಗಳಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎನ್ನುವುದೇ ನಮ್ಮ ಆದ್ಯತೆಯಾಗಿದೆ. ಇದನ್ನು ಬಿಟ್ಟು ಹೊರ ಭಾಗಗಳ ಕ್ರೀಡಾಪಟುಗಳನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸುವ ಪ್ರಯತ್ನ ನಡೆಯಬೇಕು.

4. ದಸರಾ ಕ್ರೀಡಾ ಉಪಸಮಿತಿಯಲ್ಲಿ ಹಿರಿಯ ಕ್ರೀಡಾಪಟುಗಳಿಗೇಕೆ ಆದ್ಯತೆ ಸಿಗುತ್ತಿಲ್ಲ? ಹಿಂದಿನ ಕ್ರೀಡಾ ವೈಭವ ಕಾಣಲು ಆಯೋಜಕರು ಏನು ಮಾಡಬೇಕು?

* ಹಿರಿಯ ಕ್ರೀಡಾಪಟುಗಳು ಯಾರಿಗೂ ಬೇಕಾಗಿಲ್ಲ. ಅಲ್ಲದೇ ಹಿರಿಯ ಕ್ರೀಡಾಪಟುಗಳು ತಾತ್ಸಾರ ಮನೋಭಾವ ತಾಳಿರುವುದೂ ಇದೆ. ದಸರಾ ಕ್ರೀಡಾಕೂಟಗಳ ಬಗ್ಗೆ ಹೇಳುವುದೇ ಆದರೆ, ನಗರದ ಸ್ಥಳೀಯ ಸಂಘ – ಸಂಸ್ಥೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಉಪ ಸಮಿತಿಯಲ್ಲಿ ಸ್ಥಳೀಯ ಕ್ರೀಡಾಪಟುಗಳೇ ಇರುವುದಿಲ್ಲ. ಅದೊಂದು ರಾಜಕೀಯ ಸಮಿತಿಯಾಗಿ ಮಾರ್ಪಟ್ಟಿದೆ. ಹಾಗಾಗಿ, ಹಿರಿಯರನ್ನೂ ಕೈಬಿಡಲಾಗುತ್ತಿದೆ.

ಇದಕ್ಕಿರುವ ಪರಿಹಾರವೆಂದರೆ, ಸ್ಥಳೀಯ ಸಂಘಟನೆಗಳನ್ನು ಉಪ ಸಮಿತಿಗೆ ಸೇರಿಸಿಕೊಳ್ಳುವುದು. ಅವರ ಅಭಿಪ್ರಾಯಗಳನ್ನೂ ಪಡೆದು ಮುಂದುವರಿಯುವುದು. ಇದರಿಂದ ಸ್ಥಳೀಯರ ಆಶಯಗಳಿಗೆ ಮನ್ನಣೆ ಸಿಕ್ಕಂತೆ ಆಗುತ್ತದೆ. ಕ್ರೀಡಾಕೂಟವೂ ಪರಿಣಾಮಕಾರಿಯಾಗಿ ನಡೆಯುತ್ತದೆ. ದಸರಾ ಕ್ರೀಡಾಕೂಟ ನಡೆಸಲು ಸಾಕಷ್ಟು ಹಣವಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಾದ ಬುದ್ಧಿವಂತಿಕೆ ಬೇಕಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !