ಸಾಧಕ ವೈದ್ಯರಿಗೆ ಪ್ರಶಸ್ತಿ ಪ್ರದಾನ

7
ಆಯುರ್ವೇದ ಪ್ರಚಾರ ಪರಿಷತ್ ಟ್ರಸ್ಟ್ ವತಿಯಿಂದ ನಡೆದ ವಿಶ್ವ ವೈದ್ಯರ ದಿನಾಚರಣೆ

ಸಾಧಕ ವೈದ್ಯರಿಗೆ ಪ್ರಶಸ್ತಿ ಪ್ರದಾನ

Published:
Updated:

ಮೈಸೂರು: ಐವರು ಸಾಧಕ ವೈದ್ಯರಿಗೆ ‘ವೈದ್ಯ ಭಾಸ್ಕರ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಭಾನುವಾರ ಆಯುರ್ವೇದ ಪ್ರಚಾರ ಪರಿಷತ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ವಿಶ್ವ ವೈದ್ಯರ ದಿನಾಚರಣೆ ಹಾಗೂ ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅವರ 74ನೇ ಜನ್ಮದಿನದ ಶುಭ ಹಾರೈಕೆ ಸಮಾರಂಭದಲ್ಲಿ ವೈದ್ಯರ ದಿನಾಚರಣೆಯ ಮಹತ್ವ ಕುರಿತು ಗಣ್ಯರು ಮಾತನಾಡಿದರು.

ಸುಯೋಗ್ ಆಸ್ಪತ್ರೆ ಮುಖ್ಯಸ್ಥ ಡಾ.ಎಸ್.ಪಿ.ಯೋಗಣ್ಣ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ದ್ರವ್ಯಗುಣ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎಸ್.ರಾಧಾಕೃಷ್ಣ ರಾಮರಾವ್, ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಎಚ್.ಪಿ.ಚಂದ್ರಶೇಖರ್, ರಾಮನಗರ ಜಿಲ್ಲೆಯ ಕನಕಪುರದ ಹಾರೋಹಳ್ಳಿಯ ಥೈರಾಯ್ಡ್ ರೋಗ ತಜ್ಞ ಡಾ.ಎಚ್.ಎಸ್.ವೆಂಕಟೇಶ್ ಅವರು ‘ವೈದ್ಯ ಭಾಸ್ಕರ’ ಪ್ರಶಸ್ತಿ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ, ಆರೋಗ್ಯ ಮತ್ತು ಕುಟುಂಬ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಡಿ.ತಿಮ್ಮಯ್ಯ, ‘ಇಂದು ನಡೆಯುತ್ತಿರುವುದು ವಿಶ್ವ ವೈದ್ಯರ ದಿನಾಚರಣೆ ಅಲ್ಲ. ಇದು ರಾಷ್ಟ್ರೀಯ ವೈದ್ಯರ ದಿನಾಚರಣೆ. ಒಂದೊಂದು ದೇಶದಲ್ಲಿ ಒಂದೊಂದು ದಿನ ವೈದ್ಯರ ದಿನಾಚರಣೆ ನಡೆಯುತ್ತದೆ. ನಮ್ಮ ದೇಶದಲ್ಲಿ ಡಾ.ಬಿ.ಸಿ.ರಾಯ್ ಜನ್ಮ ದಿನಾಚರಣೆಯನ್ನು ವೈದ್ಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ’ ಎಂದರು.

ಸ್ವತಂತ್ರ ಹೋರಾಟಗಾರರಾಗಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಬಿ.ಸಿ.ರಾಯ್ ವೈದ್ಯ ವೃತ್ತಿಗೆ ಭೂಷಣ ಇದ್ದಂತೆ. ಇವರು ಹುಟ್ಟಿದ್ದು ಮತ್ತು ನಿಧನ ಹೊಂದಿದ್ದು ಎರಡೂ ಜುಲೈ 1. ಅಪರೂಪದಲ್ಲಿ ಅಪರೂಪ ಎನಿಸಿದ ಇವರಿಗೆ ಗೌರವ ಸಲ್ಲಿಸಲು ವೈದ್ಯರ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ವೈದ್ಯರು ದೈಹಿಕ ರೋಗಗಳನ್ನು ಗುಣಪಡಿಸಿದರೆ, ಸಾಹಿತಿಗಳು ಸಾಮಾಜಿಕ ರೋಗಗಳನ್ನು ವಾಸಿ ಮಾಡುತ್ತಾರೆ. ಹಾಗಾಗಿಯೇ ಅವರೂ ಒಂದರ್ಥದಲ್ಲಿ ವೈದ್ಯರೇ ಆಗಿದ್ದರೆ ಎಂದು ಅವರು ಶ್ಲಾಘಿಸಿದರು.

ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಪಿ.ವೆಂಕಟರಾಮಯ್ಯ, ಕಾಂಗ್ರೆಸ್ ಮುಖಂಡ ಎಚ್.ಎ.ವೆಂಕಟೇಶ್, ಸಂಧ್ಯಾ ಸುರಕ್ಷಾ ಟ್ರಸ್ಟ್‌ ಅಧ್ಯಕ್ಷ ಡಾ.ಬಿ.ಆರ್.ನಟರಾಜ ಜೋಯಿಸ್, ಸಾಹಿತಿ ಪ್ರೊ.ಕೆ.ಭೈರವಮೂರ್ತಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಚಂದ್ರಶೇಖರ್, ಮುಖಂಡರಾದ ಡಾ.ಎಂ.ಜಿ.ಆರ್.ಅರಸ್, ಪಿ.ಶಾಂತರಾಜೇಅರಸ್, ಸಾಹಿತಿ ರತ್ನಾ ಹಾಲಪ್ಪಗೌಡ ಭಾಗವಹಿಸಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !