ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಯಲ್ಲಿ ನಿಂತು ಲೆಕ್ಕ ಕೇಳುವುದಲ್ಲ: ವಿಶ್ವನಾಥ್‌

Last Updated 24 ಜುಲೈ 2020, 4:00 IST
ಅಕ್ಷರ ಗಾತ್ರ

ಮೈಸೂರು: ‘ಬೀದಿಯಲ್ಲಿ ನಿಂತು ಲೆಕ್ಕ ಕೇಳುವುದಲ್ಲ; ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನಿಸಲಿ. ಲೆಕ್ಕ ಎಲ್ಲಿಗೂ ಹೋಗುವುದಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಗುರುವಾರ ಇಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

‘ಗ್ರಾಮ ಪಂಚಾಯಿತಿ ಸದಸ್ಯ ಕೂಡ ಬೀದಿಯಲ್ಲಿ ನಿಂತು ಈ ರೀತಿ ಲೆಕ್ಕ ಕೇಳುವುದಿಲ್ಲ. ಆದರೆ, ಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ಹಲವಾರು ಬಾರಿ ಬಜೆಟ್‌ ಮಂಡಿಸಿದವರೇ ಈ ರೀತಿ ಪ್ರಶ್ನೆ ಮಾಡಿದರೆ ಹೇಗೆ?’ ಎಂದು ಕುಟುಕಿದರು.

‘ಸಾಹಿತ್ಯ ಕ್ಷೇತ್ರದಿಂದ ನನ್ನನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಕೆಲವರು ಏನೇನೋ ಮಾತನಾಡುತ್ತಿದ್ದಾರೆ. ನಾನು ಬರೆದಿದ್ದು ಕಾದಂಬರಿ ಅಲ್ಲ; ಬದಲಾಗಿ ರಾಜಕೀಯ ಸಾಹಿತ್ಯ. ಅದನ್ನು ಗುರುತಿಸಿ ಗೌರವ ನೀಡಿರುವುದು ಸಂತೋಷ ತಂದಿದೆ. ನನ್ನ ಆಯ್ಕೆಗೆ ಯಾವುದೇ ತಾಂತ್ರಿಕ ಅಡೆತಡೆ ಇಲ್ಲ’ ಎಂದರು.

ಮೈತ್ರಿ ಸರ್ಕಾರದ ಪತನಕ್ಕೆ ತಮ್ಮ ಜೊತೆ ಇದ್ದವರೇ ಕಾರಣ ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕುಮಾರಸ್ವಾಮಿ ಅರ್ಧ ಸತ್ಯ ಮಾತ್ರ ಹೇಳಿದ್ದಾರೆ. ಇನ್ನುಳಿದ ಅರ್ಧ ಸತ್ಯವನ್ನು ಅವರೇ ಹೇಳಬೇಕು. ಆಗ ಎಲ್ಲರಿಗೂ ನಿಜವೇನು ಎಂಬುದು ಅರ್ಥವಾಗುತ್ತದೆ’ ಎಂದರು.

‘ಸಿದ್ದರಾಮಯ್ಯ ಅವರ ಮನೆಯ ಡೈನಿಂಗ್‌ ಟೇಬಲ್‌ ಕೂಡ ನಾನು ನೋಡಿಲ್ಲ. ಅವರು ಮುಖ್ಯಮಂತ್ರಿ ಆಗಿದ್ದಾಗ ಒಂದು ಲೋಟ ಕಾಫಿ ಕೂಡ ನೀಡಿರಲಿಲ್ಲ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆ ಸದಾ ತೆರೆದಿರುತ್ತದೆ. ಸದಾ ತಿಂಡಿ, ಊಟದ ವ್ಯವಸ್ಥೆ ಮಾಡಿರುತ್ತಾರೆ’ ಎಂದರು.

ಕೊನೆಯ ಅವಕಾಶ: ಶ್ರೀನಿವಾಸಪ್ರಸಾದ್‌

‘ವಿಶ್ವನಾಥ್‌ ಅವರಿಗೆ ಇದು ರಾಜಕೀಯವಾಗಿ ಕೊನೆಯ ಅವಕಾಶ. ಇದನ್ನು ಜವಾಬ್ದಾರಿಯುತವಾಗಿ, ಎಚ್ಚರಿಕೆಯಿಂದ ನಿಭಾಯಿಸಬೇಕು’ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಸಲಹೆ ನೀಡಿದರು.

‘ವಿಶ್ವನಾಥ್‌ ಈಗ ಅಟ್ಟಕ್ಕೇರಿದ್ದಾರೆ. ಇನ್ನು ಸ್ವರ್ಗಕ್ಕೆ ಏರಬೇಕು. ಸರ್ಕಾರದಲ್ಲಿ ಕೆಲ ಸಚಿವ ಸ್ಥಾನಗಳು ಬಾಕಿ ಇವೆ. ಅವುಗಳನ್ನು ಎಚ್ಚರಿಕೆಯಿಂದ ಹಂಚಬೇಕು. ಇದು ಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟಿದ್ದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT