ಗುರುವಾರ , ಆಗಸ್ಟ್ 5, 2021
26 °C

ರೋಗಿ ಅಂದ್ಕೊಳ್ಳಬೇಡಿ, ಆಸ್ಪತ್ರೆಗೆ ಅಂಜಬೇಡಿ: ಕೋವಿಡ್‌ನಿಂದ ಗುಣಮುಖರಾದ ಯುವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕೋವಿಡ್‌ ಪೀಡಿತರು ರೋಗಿ ಅಂದ್ಕೊಳ್ಳಲೇಬಾರದು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಲು ಅಂಜಬಾರದು. ಆಸ್ಪತ್ರೆಗೆ ಹೋಗೋ ಒಂದೇ ಉದ್ದೇಶ ನಮ್ಮಿಂದ ಇನ್ನೊಬ್ಬರಿಗೆ ಸೋಂಕು ಹರಡಬಾರದೆಂದು.

ದುಬೈನಲ್ಲಿ ಕೆಲಸ ಮಾಡುತ್ತಿದ್ದೆ. ಎಲ್ಲೆಡೆ ಕೋವಿಡ್–ಕೊರೊನಾ ವೈರಸ್ ಸೋಂಕು ಎಂಬುದನ್ನು ಕೇಳಿದ್ದೆ. ಮೈಸೂರಿಗೆ ಬಂದ ಮೇಲೆ ಸ್ವತಃ ಕ್ವಾರಂಟೈನ್‌ಗೊಳಪಟ್ಟಿದ್ದೆ. ಕೆಮ್ಮು ಕಾಣಿಸಿಕೊಂಡಿತು. ಜ್ವರ ಇರಲಿಲ್ಲ. ಆದರೂ ಮುನ್ನೆಚ್ಚರಿಕೆಯಾಗಿ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಕೊಟ್ಟೆ. ಪಾಸಿಟಿವ್ ಬಂತು.

ನಾನೇನೂ ಅಂಜಲಿಲ್ಲ. ಇದೇ ಸಮಯಕ್ಕೆ ಸರಿಯಾಗಿ ಕೇರಳದಲ್ಲಿ ನನ್ನಿಬ್ಬರು ಸ್ನೇಹಿತರು ಸಹ ಪೀಡಿತರಾಗಿದ್ದರು. ಮನೆಯವರು ತುಂಬಾ ಹೆದರಿಕೊಂಡಿದ್ದರು. ನಾನೇ ಎಲ್ಲರಿಗೂ ಧೈರ್ಯ ತುಂಬಿದೆ.

ಕೋವಿಡ್ ಸಾಯೋ ರೋಗವಲ್ಲ ಎಂದು ಹೇಳಿದೆ. ಇದಕ್ಕೆ ಔಷಧಿ ಇನ್ನೂ ಸಿಕ್ಕಿಲ್ಲ. ಮುನ್ನೆಚ್ಚರಿಕೆಯಾಗಿ ಅಂತರ ಕಾಯ್ದುಕೊಳ್ಳುವುದು, ಪೌಷ್ಟಿಕ ಆಹಾರ ತಿನ್ನುವುದು, ಬಿಸಿ ನೀರು ಕುಡಿಯುವುದೇ ಇದಕ್ಕಿರುವ ಸದ್ಯದ ಮದ್ದು. ಊಟ–ತಿಂಡಿ ಸಹ ಬಿಸಿ ಬಿಸಿ ಇದ್ದರೆ ಒಳ್ಳೆಯದಷ್ಟೇ.

ಚಿಕಿತ್ಸೆಗೆ ದಾಖಲಾದ ಆಸ್ಪತ್ರೆಯ ಕೊಠಡಿಯೊಳಗೆ ನಾಲ್ಕು ಜನರಿರುತ್ತಿದ್ದೆವು. ಎಲ್ಲರೂ ಪಾಸಿಟಿವ್. ಒಂದೇ ಬಾತ್ ರೂಂ ಬಳಸುತ್ತಿದ್ದರೂ, ನಾವೇ ಸ್ವತಃ ಸ್ವಚ್ಛಗೊಳಿಸಿಟ್ಟುಕೊಂಡಿದ್ದೆವು. ನಾವಿದ್ದ ನಾಲ್ವರು ಪರಸ್ಪರ ಹತ್ತಿರ ಸೇರುತ್ತಿರಲಿಲ್ಲ, ಮುಟ್ಟುತ್ತಿರಲಿಲ್ಲ ಎಂಬುದನ್ನು ಬಿಟ್ಟರೇ, ಇನ್ನೆಲ್ಲವೂ ಸಹಜ ಜೀವನದಂತಿತ್ತು.

ನಮಗೆ ಧೈರ್ಯ, ವಿಶ್ವಾಸವೇ ಮದ್ದಾಗಿತ್ತು. ಕೇರಳದ ಗೆಳೆಯರಿಗೂ ವಿಡಿಯೊ ಕಾಲ್ ಮೂಲಕ ಆತ್ಮವಿಶ್ವಾಸ ತುಂಬಿಕೊಂಡಿದ್ದೆ. ನನಗೆ ಆಸ್ಪತ್ರೆಯಲ್ಲಿ ಕೆಮ್ಮಿಗಷ್ಟೇ ಔಷಧಿ ಕೊಡುತ್ತಿದ್ದರು. ಗುಣಮುಖನಾದ ಬಳಿಕ ನೆಗೆಟಿವ್ ವರದಿ ಬಂತು. ಮನೆಗೆ ಕಳುಹಿಸಿದರು.

ಮನೆಯಲ್ಲಿ ಪುಟ್ಟ ಮಕ್ಕಳು, ವಯಸ್ಸಾದ ತಂದೆ–ತಾಯಿ ಇದ್ದರು. ಆದ್ದರಿಂದ ನಾನು ಆ ಮನೆಗೆ ಹೋಗಲಿಲ್ಲ. ಬೇರೆ ಮನೆಯಲ್ಲಿ 14 ದಿವಸ ಪ್ರತ್ಯೇಕವಾಸ ಮಾಡುವ ಮೂಲಕ ನನ್ನ ಕುಟುಂಬದವರ ಕಾಳಜಿ ಮಾಡಿಕೊಂಡೆ. ಎಲ್ಲರೂ ಮಾಡಬೇಕಾದದ್ದು ಇಷ್ಟೇ.

ಇದೀಗ ಸಂಪೂರ್ಣ ಗುಣಮುಖನಾಗಿರುವೆ. ಸಹಜವಾಗಿರುವೆ. ಹೊರಗೆ ಹೆಚ್ಚಾಗಿ ಸುತ್ತಾಡಲ್ಲ. ಅವಶ್ಯಕ ಕೆಲಸವಿದ್ದರೆ ಮಾತ್ರ ಹೋಗಿ ಬರುವೆ. ಯಾವೊಂದು ಸಣ್ಣ ತೊಂದರೆಯೂ ಮತ್ತೆ ಕಾಣಿಸಿಕೊಂಡಿಲ್ಲ. ದಿನವಿಡಿ ಬಿಸಿ ನೀರು ಕುಡಿದುಕೊಂಡಿರೋದು ಒಳ್ಳೆಯದು. ಆರೋಗ್ಯವರ್ಧಕ ಪೌಷ್ಟಿಕ ಆಹಾರ ಸೇವನೆ ಇನ್ನೂ ಉತ್ತಮವಾದುದು. ಅದೂ ಮನೆಯದ್ದೇ ಆಗಿರಲಿ.

ನಿರೂಪಣೆ: ಡಿ.ಬಿ.ನಾಗರಾಜ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು