ಮೈಸೂರಿನಲ್ಲಿ ಸಲೀಸಾಗಿ ನಡೆಯುತ್ತಿದೆ ಮಾದಕವಸ್ತು ಕಳ್ಳಸಾಗಾಣಿಕೆ

7
ಪಾರ್ಸಲ್, ಪೋಸ್ಟ್‌ಗಳೇ ಇದಕ್ಕೆ ಮಾಧ್ಯಮ, ಆಫ್ರಿಕಾದಿಂದ ರವಾನೆ

ಮೈಸೂರಿನಲ್ಲಿ ಸಲೀಸಾಗಿ ನಡೆಯುತ್ತಿದೆ ಮಾದಕವಸ್ತು ಕಳ್ಳಸಾಗಾಣಿಕೆ

Published:
Updated:
Deccan Herald

ಮೈಸೂರು: ಇಲ್ಲಿ ಮಾದಕವಸ್ತು ಕಳ್ಳಸಾಗಾಣಿಕೆ ಸಿನಿಮಾಗಳಲ್ಲಿ ತೋರಿಸುವಂತೆ ರಾತ್ರಿ ವೇಳೆಯಲ್ಲೋ, ಮುಸಕುಧಾರಿಗಳಿಂದಲೋ ನಡೆಯುತ್ತಿಲ್ಲ. ಪಾರ್ಸಲ್‌ ಮೂಲಕ ಸಲೀಸಾಗಿ ನಡೆಯುತ್ತಿದೆ. ಇದನ್ನು ಇತ್ತೀಚಿನ ದಿನಗಳಲ್ಲಿ ನಡೆದ ಪ್ರಕರಣಗಳೇ ಸಾಬೀತುಪಡಿಸಿವೆ.

ಯೆಮನ್ ದೇಶದಿಂದ ಇಲ್ಲಿಗೆ ವಿದ್ಯಾರ್ಥಿ ವೀಸಾದಡಿ ಬಂದು ನೆಲೆಸಿದ್ದ ಹಮ್ಜಾ ಅಬ್ದೊ ಖಾಸಿಂ ಅಬ್ದುಲ್ಲಾ (23)ನನ್ನು ಬಂಧಿಸಿ 7 ಕೆ.ಜಿಯಷ್ಟು ಖಾಟ್ ಮಾದಕವಸ್ತುವನ್ನು ವಶಕ್ಕೆ ಪಡೆದ ಮೇಲೆ ಸಾಗಾಟಕ್ಕೆ ಪಾರ್ಸಲ್‌ ಮಾಧ್ಯಮ ಬಳಕೆಯಾಗುತ್ತಿದೆ ಎಂಬುದು ಬಯಲಾಗಿದೆ. ಕಾಳಸಂತೆಯಲ್ಲಿ ಇದರ ಮೌಲ್ಯ ಅಂದಾಜು ₹ 18 ಲಕ್ಷ ಎಂದು ಹೇಳಲಾಗುತ್ತಿದೆ.

ಜುಲೈ 18ರಂದು ಮುಂಬೈನ್ ‘ಡೈರೆಕ್ಟರೇಟ್‌ ರೆವಿನ್ಯು ಆಫ್ ಇಂಟಿಲಿಜೆನ್ಸ್’ ವಿಭಾಗದ ಅಧಿಕಾರಿಗಳು ಅಂದಾಜು ₹ 3.5 ಕೋಟಿ ಬೆಲೆ ಬಾಳುವ, 132 ಕೆ.ಜಿಯಷ್ಟು ‘ಖಾಟ್‌’ನ್ನು ವಶಪಡಿಸಿಕೊಂಡಿದ್ದರು. ಇದು ಮುಂಬೈನಲ್ಲಿ ವಿದ್ಯಾರ್ಥಿ ವೀಸಾದಡಿ ನೆಲೆಸಿದ್ದ ವ್ಯಕ್ತಿಯೊಬ್ಬನಿಗೆ ಇಥಿಯೋಪಿಯಾದಿಂದ ಬಂದಿತ್ತು. ದೇಶದಲ್ಲಿ ಇದುವರೆಗೆ ಪತ್ತೆಯಾದ ಅತಿ ದೊಡ್ಡ ಮೌಲ್ಯದ ಖಾಟ್ ಇದಾಗಿತ್ತು.

ಈ ಘಟನೆ ನಡೆದ ಹತ್ತೇ ದಿನಕ್ಕೆ ಮೈಸೂರಿನಲ್ಲೂ ಇಂಥದ್ದೇ ಪ್ರಕರಣ ನಡೆದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಪೊಲೀಸ್ ಮೂಲಗಳ ಪ್ರಕಾರ ಮಾದಕವಸ್ತು ಸಾಗಣೆಗೆ ಕೊರಿಯರ್ ಹಾಗೂ ಪಾರ್ಸಲ್ ಮಾಧ್ಯಮವನ್ನು ಈತ ಬಳಸಿಕೊಂಡಿರುವುದು ಮೊದಲೇನಲ್ಲ. ಈ ಹಿಂದೆ ಅನೇಕ ಬಾರಿ ಇಂಥ ಕೃತ್ಯಗಳನ್ನು ಈತ ಮಾಡಿದ್ದಾನೆ.

ಪಾರ್ಸಲ್ ಮಾಡುವಾಗ ದೊಡ್ಡ ಬಾಕ್ಸ್ ಆಗಿದ್ದರೆ ಮಾತ್ರ ಪಾರ್ಸಲ್ ಏಜೆನ್ಸಿಯವರು ಬಾಕ್ಸ್ ಒಳಗೆ ಇರುವುದು ಏನು ಎಂದು ಕೇಳುತ್ತಾರೆ. ಅದಕ್ಕೆ ಸಂಬಂಧಿಸಿದ ಬಿಲ್ ಕೊಡಿ ಎಂದು ಕೇಳುತ್ತಾರೆ. ಸಣ್ಣಪುಟ್ಟ ಬಾಕ್ಸ್ ಆಗಿದ್ದರೆ ಏನನ್ನೂ ಕೇಳದೇ ಹಾಗೆಯೇ ಪಾರ್ಸಲ್ ಮಾಡುತ್ತಾರೆ.

‘ಖಾಟ್’ ಎಂಬುದು ಸೊಪ್ಪು ಆಗಿರುವುದರಿಂದ ಸಣ್ಣ ಬಾಕ್ಸ್‌ನಲ್ಲಿಯೇ ಕಳುಹಿಸಬಹುದು. ಇಂಥ ಸಮಯದಲ್ಲಿ ಒಳಗೇನಿದೆ ಎಂದು ಯಾರೂ ಕೇಳುವುದಿಲ್ಲ. ಆದರೆ, ಆರೋಪಿ ದೊಡ್ಡ ಬಾಕ್ಸ್‌ನಲ್ಲಿ ಪಾರ್ಸಲ್ ಮಾಡಲು ಯತ್ನಿಸಿದಾಗ ಪ್ರಕರಣ ಪೊಲೀಸರ ಗಮನಕ್ಕೆ ಬಂದಿದೆ.

ಇದುವರೆಗೂ ಸಣ್ಣ ಬಾಕ್ಸ್‌ನಲ್ಲಿ ಸರಾಗವಾಗಿ ಪಾರ್ಸಲ್ ಮಾಡಿದ್ದ ಆರೋಪಿಗೆ ಒಳಗೇನಿದೆ ಎಂದು ಪ್ರಶ್ನಿಸಿದಾಗ ಕೋಪ ಬಂದಿದೆ. ಬಿಲ್ ಕೇಳಿದಾಗ ಮತ್ತಷ್ಟು ಕೋಪಗೊಂಡು ಜಗಳಕ್ಕೆ ಬಿದ್ದಿದ್ದಾನೆ. ಸ್ಥಳದಲ್ಲಿದ್ದ ಪೊಲೀಸರು ಗಲಾಟೆ ಗಮನಿಸಿ ಸಮೀಪ ಹೋದಾಗ ಆರೋಪಿ ಪರಾರಿಯಾಗಲು ಯತ್ನಿಸಿದ. ಅನುಮಾನಗೊಂಡು ಬಾಕ್ಸ್ ತೆರೆದಾಗ ಖಾಟ್ ಸಿಕ್ಕಿದೆ. ಇದು ಆಕಸ್ಮಿಕವಾಗಿ ಪತ್ತೆಯಾದ ಪ್ರಕರಣವೇ ಹೊರತು ಪೊಲೀಸರು ಮಾದಕವಸ್ತು ಸಾಗಾಣಿಕೆ ವಿರುದ್ಧ ನಡೆಸಿದ ಕಾರ್ಯಾಚರಣೆಯಿಂದ ಬಹಿರಂಗಗೊಂಡಿದ್ದಲ್ಲ.

ಮೈಸೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆಯದೆ ಕೆಲವು ಕೋರ್ಸ್‌ಗಳಿಗೆ ವಿದೇಶಿಯರಿಗೆ ಪ್ರವೇಶ ನೀಡಿ ಅವರು ಇಲ್ಲಿ ನೆಲೆಸುವುದಕ್ಕೆ ಅವಕಾಶ ಮಾಡಿಕೊಟ್ಟ ಪ್ರಕರಣ ನಗರದಲ್ಲಿ ಈಚೆಗೆ ಪತ್ತೆಯಾಗಿತ್ತು. ಸುಮಾರು 600 ಮಂದಿ ಆಫ್ರಿಕಾದಿಂದ ಅಧ್ಯಯನಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ನಗರದಲ್ಲಿ ಇರುವ ಒಟ್ಟು ವಿದೇಶಿ ವಿದ್ಯಾರ್ಥಿಗಳ ಪೈಕಿ ಆಫ್ರಿಕಾದವರೇ ಹೆಚ್ಚು. ಇದರಲ್ಲಿ ಯೆಮನ್ ದೇಶದವರ ಸಂಖ್ಯೆ 345 ಇದೆ. ದೇಶದಲ್ಲಿ ಖಾಟ್ ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿಬಿದ್ದವರೆಲ್ಲ ಆಫ್ರಿಕಾ ಮೂಲದವರೇ ಎಂಬುದೂ ಗಮನಾರ್ಹ.

ತಡೆ ಹೇಗೆ?

* ಪಾರ್ಸಲ್ ಏಜೆನ್ಸಿಗಳು ಪಾರ್ಸಲ್ ಮಾಡುವ ವಸ್ತುವಿನ ಕುರಿತು ಕಡ್ಡಾಯವಾಗಿ ಪರಿಶೀಲಿಸಬೇಕು

* ವಸ್ತುವನ್ನು ಪಾರ್ಸಲ್ ಮಾಡುವ ಸ್ಥಳದಲ್ಲೇ ಪ್ಯಾಕ್ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು

* ವಿದೇಶಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಿಗಾ ಇಡಬೇಕು

* ಪ್ರತಿ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿರುವ ವಿದೇಶಿಯರು ಯಾವ ವೀಸಾದಡಿ ಬಂದಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು

* ವಿದ್ಯಾರ್ಥಿ ಎಷ್ಟು ವರ್ಷದಿಂದ ಇಲ್ಲಿ ಕಲಿಯುತ್ತಿದ್ದಾನೆ, ಆತನ ಕೋರ್ಸ್, ಕಾಲೇಜಿನ ಮಾನ್ಯತೆ ಕುರಿತು ವಿವರ ಕಲೆಹಾಕಬೇಕು

* ವಿದೇಶಿ ವಿದ್ಯಾರ್ಥಿಗಳ ಅಕ್ರಮ ವಾಸ್ತವ್ಯಕ್ಕೆ ಕಡಿವಾಣ ಹಾಕಬೇಕು

ನಗರದಲ್ಲಿ ನೆಲೆಸಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ

ಇರಾನ್‌- 436, ಯೆಮನ್‌-345, ಸೊಮಾಲಿಯಾ-202, ಅಫ್ಘಾನಿಸ್ತಾನ- 162, ಮಾಲ್ಡೀವ್ಸ್‌- 145, ತಾಂಜೇನಿಯಾ-116, ನಮಿಬಿಯಾ-1, ಕಿನ್ಯಾ-1, ಮಲೇಶಿಯಾ-1, ಸೊಮಾಲಿಯಾ-2, ಮೊಜಾಂಬಿಕ್‌ -1.

ಏಜೆಂಟ್‌ರು ಇಲ್ಲಿದ್ದಾರೆ!
ಖಾಟ್ ಮಾದಕವಸ್ತು ಕಳ್ಳಸಾಗಾಣಿಕೆಯ ಏಜೆಂಟರು ನಗರದಲ್ಲಿದ್ದಾರೆ ಎಂಬುದು ಖಚಿತಗೊಂಡಿದೆ. ಇವರು ಆಫ್ರಿಕಾದಿಂದ ತರಿಸಿ ಮುಂಬೈ ಹಾಗೂ ಇತರೆಡೆ ನೆಲೆಸಿರುವ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಈ ರೀತಿ ಮಾಡುವುದು ನಾರ್ಕೋಟಿಕ್ಸ್‌, ಡ್ರಗ್ಸ್‌, ಸೈಕೋಟ್ರೋಪಿಕ್‌ ಸಬ್‌ಸ್ಟಾನ್ಸ್‌ (ಎನ್‌ಸಿಬಿ) ಕಾಯ್ದೆಯಡಿ ಅಪರಾಧ. ಇಂಥ ಆರೋಪದಡಿ ಸಿಕ್ಕಿದವರನ್ನು ಇದೇ ಕಾಯ್ದೆಯಡಿ ದೋಷಾರೋಪ ಸಲ್ಲಿಸಬೇಕು. ಆಗ ಮಾತ್ರ ಕಠಿಣ ಶಿಕ್ಷೆ ಆಗಲು ಸಾಧ್ಯ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !