ಸೋಮವಾರ, ಮೇ 23, 2022
28 °C
ಮಹಾನಗರ ಪಾಲಿಕೆಯದ್ದು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ, ಇ–ಶೌಚಾಲಯಗಳ ದುರಸ್ತಿಗೆ ಆಗ್ರಹ

ಮೈಸೂರಿನಲ್ಲಿ ಇದ್ದೂ ಇಲ್ಲದಂತಾದ ಇ–ಶೌಚಾಲಯ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪ್ರತಿ ವರ್ಷ ಸ್ವಚ್ಛ ಭಾರತ ಸಮೀಕ್ಷೆ ಬಂದಾಗ ಪಾಲಿಕೆ ನಿದ್ದೆಯಿಂದ ಎದ್ದವರಂತೆ ಚುರುಕಾಗುತ್ತದೆ. ಸ್ವಚ್ಛತೆಗಾಗಿ ಹಲವು ಕೆಲಸ ಕಾರ್ಯಗಳನ್ನು ಸಮರೋಪಾದಿಯಲ್ಲಿ ಮಾಡುತ್ತದೆ. ರಿಂಗ್ ರಸ್ತೆಯ ಸ್ವಚ್ಛತೆಗೆ ಸಚಿವ ಎಸ್.ಟಿ.ಸೋಮಶೇಖರ್, ಹುಣಸೂರು ರಸ್ತೆಯ ಸ್ವಚ್ಛತೆಗೆ ಸಂಸದ ಪ್ರತಾಪಸಿಂಹ ಈಚೆಗಷ್ಟೇ ಚಾಲನೆ ನೀಡಿದ್ದಾರೆ. ಕಟ್ಟಡ ತ್ಯಾಜ್ಯದ ಮರು ಬಳಕೆ ಮಾಡುವ ಯೋಜನೆಗೆ ಕೌನ್ಸಿಲ್ ಸಭೆ ಕಳೆದ ತಿಂಗಳಷ್ಟೇ ಅನುಮೋದನೆ ನೀಡಿದೆ. ಈ ಸಾಲಿಗೆ ಸೇರುವಂತದ್ದು ಇ– ಶೌಚಾಲಯದ ದುರಸ್ತಿ ಕಾರ್ಯ.

‘ಯುದ್ದ ಕಾಲೇ ಶಸ್ತ್ರಾಭ್ಯಾಸೇ’ ಎಂಬಂತೆ ಪಾಲಿಕೆ ‘ಇ–ಶೌಚಾಲಯ’ಗಳ ನಿರ್ವಹಣೆಗಾಗಿ ಮತ್ತೊಮ್ಮೆ ಟೆಂಡರ್ ಕರೆಯಲು ಮುಂದಾಗಿದೆ. ಇದಕ್ಕೂ ಮುನ್ನ ಟೆಂಡರ್ ಕರೆಯಲಾಗಿತ್ತಾದರೂ ಯಾವ ಕಂಪನಿಗಳೂ ಇದನ್ನು ನಿರ್ವಹಣೆ ಮಾಡಲು ಮುಂದಾಗಲಿಲ್ಲ. ಸದ್ಯ, ಒಂದು ಕಂಪನಿ ನಿರ್ವಹಣೆಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

2016–17ರಲ್ಲಿ ಇ–ಶೌಚಾಲಯಗಳನ್ನು ನಗರದ ಅಲ್ಲಲ್ಲಿ ಅಳವಡಿಸಲಾಯಿತು. ಒಟ್ಟು 23 ಕಡೆ ಈ ಶೌಚಾಲಯಗಳನ್ನು ಹಾಕಲಾಗಿದೆ. ಆರಂಭದಲ್ಲಿ ಜನರಿಂದ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಯಿತು. ಒಂದು ವರ್ಷದ ನಂತರ ಈ ಶೌಚಾಲಯಗಳನ್ನು ರೂಪಿಸಿದ್ದ ಕಂಪನಿ ನಿರ್ವಹಣೆಯಿಂದ ಹಿಂದೆ ಸರಿಯಿತು. ನಂತರ, ನಿರ್ವಹಣೆ ಮಾಡುವ ಜವಾಬ್ದಾರಿ ಪಾಲಿಕೆಯದ್ದೇ ಆಗಿತ್ತು. ಆದರೆ, ಪಾಲಿಕೆ ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ.

ಕನಿಷ್ಠ ಎಂದರೂ ಒಂದೊಂದು ಶೌಚಾಲಯಕ್ಕೂ ₹5 ಲಕ್ಷದಿಂದ ₹6 ಲಕ್ಷ ವೆಚ್ಚವಾಗಿದೆ. ಇವುಗಳು ಪರಿಸರ ಸ್ನೇಹಿಯೂ ಆಗಿವೆ. ಸಾಮಾನ್ಯ ಶೌಚಾಲಯಗಳು ಇದಕ್ಕಿಂತ ಉತ್ತಮ, ನಿರ್ವಹಣೆಯೂ ಸುಲಭ ಎಂಬ ಮಾತು ಸುಳ್ಳಲ್ಲ. ಆದರೆ, ಪರಿಸರದ ವಿಚಾರ ಬಂದಾಗ ಇ–ಶೌಚಾಲಯಗಳು ಸಾಮಾನ್ಯ ಶೌಚಾಲಯಕ್ಕಿಂತ ಉತ್ತಮ. ಆದರೆ, ಇವುಗಳನ್ನು ನಿರ್ವಹಣೆ ಸರಿಯಾದರೆ ಮಾತ್ರ ಇದನ್ನು ಸ್ಥಾಪಿಸಿರುವುದಕ್ಕೆ ಸಾರ್ಥಕತೆ ಬರುತ್ತದೆ.

ಪಾಲಿಕೆ ಏನು ಮಾಡಬೇಕಿತ್ತು?: ಟೆಂಡರ್ ಕರೆಯಲಾಗಿದ್ದರೂ ಯಾರೊಬ್ಬರೂ ಮುಂದೆ ಬರಲಿಲ್ಲ ಎಂಬ ಮಾತನ್ನು ಹೇಳಿ ಅಧಿಕಾರಿಗಳು ಕೈ ಚೆಲ್ಲಿ ಕುಳಿತುಕೊಳ್ಳುತ್ತಾರೆ. ಆದರೆ, ಯಾರೊಬ್ಬರಿಗೂ ಈ ವಲಯದಲ್ಲಿ ಸಕ್ರಿಯವಾಗಿರುವ ಕಂಪನಿಗಳ ಜತೆ ಮಾತುಕತೆ ನಡೆಸುವ, ಅವರನ್ನು ಮನವೊಲಿಸುವ ಕಾರ್ಯ ಮಾಡುವ ಇಚ್ಛಾಶಕ್ತಿ ಇಲ್ಲ. ಕನಿಷ್ಠ ಪಕ್ಷ ಪಾಲಿಕೆಯೇ ನಿರ್ವಹಣೆ ಮಾಡುವತ್ತ ಗಮನವನ್ನೂ ಹರಿಸುತ್ತಿಲ್ಲ. ಇದಕ್ಕೆ ಬೇಕಾದ ತಾಂತ್ರಿಕ ನೈಪುಣ್ಯತೆಯನ್ನು ಪಡೆದುಕೊಳ್ಳುವುದಕ್ಕೂ ಆಸಕ್ತಿ ವಹಿಸುತ್ತಿಲ್ಲ. ಹೀಗಾದರೆ, ಹೇಗೆ ಎಂಬ ಪ್ರಶ್ನೆಯನ್ನು ನಾಗರಿಕರು ಕೇಳುತ್ತಾರೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತಿಗಿಳಿದ ಶಿಕ್ಷಕಿ ಸರೋಜಮ್ಮ, ‘ಟೆಂಡರ್ ಕರೆದರೆ ಯಾವುದೇ ಕಂಪನಿ ಭಾಗವಹಿಸುವುದಿಲ್ಲ ಎಂದಾದರೆ ಟೆಂಡರ್‌ನಲ್ಲೇ ಲೋಪ ದೋಷಗಳಿರಬಹುದು. ಅವುಗಳನ್ನು ಸರಿಪಡಿಸಬೇಕು. ಇಲ್ಲವೇ ಅದೇನು ಬ್ರಹ್ಮವಿದ್ಯೆಯೇ? ಅವುಗಳನ್ನು ನಿರ್ವಹಣೆ ಕುರಿತು ಕೆಲವೊಂದಿಷ್ಟು ಸಿಬ್ಬಂದಿಗೆ ತರಬೇತಿ ಕೊಡಿಸಿ, ಪಾಲಿಕೆಯೇ ನಿರ್ವಹಿಸಿದರೆ ಹಣ ಉಳಿತಾಯವಾಗುತ್ತದೆ. ಆದರೆ, ಯಾರೊಬ್ಬರೂ ಪರ್ಯಾಯಗಳತ್ತ ಚಿಂತಿಸುವುದೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಎಲ್ಲೆಲ್ಲಿದೆ?: ಸಿಟಿ ಬಸ್‌ ನಿಲ್ದಾಣ, ದೇವರಾಜ ಅರಸು ರಸ್ತೆ, ಮಹಾರಾಣಿ ಕಾಲೇಜು ಆವರಣ, ಜಗನ್ಮೋಹನ ಅರಮನೆ, ಮಕ್ಕಾಜಿ ಚೌಕ, ಚೆಲುವಾಂಬ ಆಸ್ಪತ್ರೆ,  ಅಪೋಲೊ ಆಸ್ಪತ್ರೆ ಹತ್ತಿರ,  ರಾಮಕೃಷ್ಣನಗರ ವೃತ್ತ, ರಾಮಕೃಷ್ಣನಗರ ಸಬ್‌ರಿಜಿಸ್ಟ್ರಾರ್‌ ಕಚೇರಿ, ರಾಮಕೃಷ್ಣ ನಗರ ಉದ್ಯಾನ, ನ್ಯೂ ಕಾಂತರಾಜ್‌ ಅರಸ್‌ ರಸ್ತೆ, ಕೆ.ಜಿ.ಕೊಪ್ಪಲು ಸರ್ಕಲ್‌, ಸುಮಾ ಸೋಪಾನ ಪಾರ್ಕ್‌ ಕುವೆಂಪುನಗರ, ವಿದ್ಯಾರಣ್ಯಪುರಂ ಬಸ್‌ ನಿಲ್ದಾಣ, ಲವ–ಕುಶ ಪಾರ್ಕ್‌, ಶ್ಯಾಂ ಸ್ಟುಡಿಯೊ ಹತ್ತಿರ, ಮೃಗಾಲಯ, ಮೈಸೂರು ಕ್ಲಬ್‌ ಹತ್ತಿರ, ರೈಲು ನಿಲ್ದಾಣ, ಗಂಗೋತ್ರಿ ಲೇಔಟ್‌, ವಿಶ್ವಕರ್ಮ ಹಾಸ್ಟೆಲ್‌.

ಇಷ್ಟು ಕಡೆ ಅಳವಡಿಸಲಾಗಿದ್ದ ಇ–ಶೌಚಾಲಯಗಳನ್ನು ನಂತರ ಕೆಲವೊಂದು ಕಡೆ ಬದಲಿಸಲಾಗಿದೆ. ಬಹುಪಾಲು ಶೌಚಾಲಯಗಳು ಬಾಗಿಲು ಗಳು ತೆರೆಯುತ್ತಿಲ್ಲ. ಕೆಲವು ಶೌಚಾಲಯ ಗಳಲ್ಲಿ ಕಳ್ಳತನಗಳೂ ಸಂಭವಿಸಿವೆ.

ಈ ಹಿಂದೆಯೇ ಮೈಸೂರು ರಕ್ಷಣಾ ವೇದಿಕೆ ನೇತೃತ್ವದಲ್ಲಿ ಇ–ಶೌಚಾಲಯದ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆಯೂ ನಡೆದಿತ್ತು.

ದೇವರಾಜ ಅರಸು ರಸ್ತೆಯಲ್ಲಿ ನೀಗದ ಶೌಚ ಸಂಕಟ

ದೇವರಾಜ ಅರಸು ರಸ್ತೆಯಲ್ಲಿರುವ ಅಂಗಡಿಗಳಲ್ಲಿ ಕನಿಷ್ಠ ಎಂದರೂ 200ರಿಂದ 300 ಮಂದಿ ಕೆಲಸ ಮಾಡುತ್ತಾರೆ. ಶಿವರಾಮಪೇಟೆಯಲ್ಲೂ ನೂರಾರು ಮಂದಿ ಕೆಲಸಗಾರರು ಇದ್ದಾರೆ. ಇವರಿಗೆಲ್ಲ ಶೌಚಾಲಯದ್ದೇ ದೊಡ್ಡ ಸಂಕಟವಾಗಿದೆ. ಅಳವಡಿಸಿದ್ದ ಏಕೈಕ ಇ–ಶೌಚಾಲಯ ಕೆಟ್ಟು ನಿಂತಿದೆ. ಇವರು ಶೌಚಾಲಯಕ್ಕೆ ಹೋಗಬೇಕಾದರೆ ಸಿಟಿ ಬಸ್‌ ನಿಲ್ದಾಣ, ಶಾಂತಲಾ ಸಿನಿಮಾ ಮಂದಿರ, ಕೆ.ಆರ್.ಆಸ್ಪತ್ರೆ, ದೇವರಾಜ ಮಾರುಕಟ್ಟೆ ಹಿಂಭಾಗ ಇಷ್ಟು ಕಡೆಗೆ ಹೋಗಬೇಕಿದೆ. ಇನ್ನಾದರೂ ಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಸ್ವಚ್ಛ ಭಾರತ ಸಮೀಕ್ಷೆಗೆ ತೊಡಕು?

ಕೆಟ್ಟು ನಿಂತಿರುವ 23 ಇ–ಶೌಚಾಲಯಗಳು ಸ್ವಚ್ಛ ಭಾರತ ಸಮೀಕ್ಷೆಗೆ ದೊಡ್ಡ ತೊಡಕಾಗುವ ಸಾಧ್ಯತೆ ಇದೆ. ಸಮೀಕ್ಷೆಗೆಂದು ಬರುವ ತಂಡದ ಸದಸ್ಯರು ಇದಕ್ಕೆ ಕಾಯಿನ್ ಹಾಕಿದರೆ ಇವುಗಳ ಬಂಡವಾಳ ಬಯಲಾಗುತ್ತದೆ. ಇವುಗಳ ಸಮೀಪದಲ್ಲಿರುವ ಮನೆ, ಅಂಗಡಿಗಳ ಮಾಲೀಕರು ಹಾಗೂ ಸಾರ್ವಜನಿಕರಿಗೆ ಸಮೀಕ್ಷಾ ತಂಡ ಈ ಕುರಿತು ಪ್ರಶ್ನಿಸಿದರೂ ಇ–ಶೌಚಾಲಯಗಳ ತಾಕತ್ತು ತಿಳಿಯಲಿದೆ. ಸಾರ್ವಜನಿಕರು ಈ ಕುರಿತು ಸಮೀಕ್ಷಾ ತಂಡಕ್ಕೆ ತಮ್ಮ ಅಭಿಪ್ರಾಯವನ್ನು ದೂರವಾಣಿ ಮೂಲಕವೂ ಹೇಳಬಹುದಾಗಿದೆ. ಯಾವುದೇ ದೃಷ್ಟಿಯಿಂದ ನೋಡಿದರೂ ಇ– ಶೌಚಾಲಯದ ದುರಸ್ತಿ ಅನಿವಾರ್ಯ ಎನಿಸಿದೆ.

ಬಳಸುವುದು ಹೇಗೆ?

ಒತ್ತುಗುಂಡಿಯಲ್ಲಿ ಹಸಿರು ಬಣ್ಣದ ದೀಪ ಇದ್ದರೆ ಶೌಚಾಲಯ ಬಳಕೆಗೆ ಸಿದ್ಧವಾಗಿದೆ ಎಂದರ್ಥ. ಆಗ ನಾಣ್ಯ ಹಾಕಬೇಕು.

ಶೌಚಾಲಯ ಕೆಟ್ಟಿದ್ದರೆ ಅಥವಾ ಒಳಗೆ ಯಾರಾದರೂ ಇದ್ದರೆ ನಾಣ್ಯವನ್ನು ತಿರಸ್ಕರಿಸುತ್ತದೆ

ಒಳ ಪ್ರವೇಶಿಸಿದಾಕ್ಷಣ ಲೈಟು, ಫ್ಯಾನ್‌ ಮತ್ತು ಸೂಚನೆಗಳ ಧ್ವನಿ ಆರಂಭವಾಗುತ್ತದೆ

ಒಳಗಡೆಯಿಂದ ಬಾಗಿಲು ಬಂದ್‌ ಮಾಡಲು ಚಿಲಕವಿದೆ

ಉಪಯೋಗಿಸಿದ ನಂತರ ಫ್ಲಷ್‌ ಗುಂಡಿ ಒತ್ತಿ

ಒಬ್ಬರು ಬಳಸಿದ ಮೇಲೆ ಮತ್ತೊಬ್ಬರು ಬಳಸಲು ಕನಿಷ್ಠ ಒಂದು ನಿಮಿಷ ಬೇಕು

***

ಸಾರ್ವಜನಿಕರಿಗೆ ಎಷ್ಟು ಅನುಕೂಲವಾಗುತ್ತದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಆ ಯೋಜನೆಯನ್ನು ಕಾರ್ಯಗತ ಮಾಡಬೇಕು.
-ಕುಮಾರ್, ಗಾಂಧಿನಗರದ ನಿವಾಸಿ

***

ಇ– ಶೌಚಾಲಯದ ಬದಲಿಗೆ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿ ಎಂದು ಆಯುಕ್ತರಿಗೆ ಪತ್ರ ಬರೆದಿದ್ದೇನೆ.

-ಪ್ರಮೀಳಾ ಭರತ್, ಸುಬ್ಬರಾಯರಕೆರೆಯ ಪಾಲಿಕೆ ಸದಸ್ಯೆ

***

ದೇವರಾಜ ಅರಸು ರಸ್ತೆಯಲ್ಲಿ ಶೌಚಾಲಯ ಇಲ್ಲ ಎನ್ನುವುದು ತಲೆತಗ್ಗಿಸುವ ವಿಚಾರ. ಈ ಕುರಿತು ಪ್ರತಿಭಟನೆಯನ್ನೂ ಮಾಡಿದ್ದೆ.

-ಮೈಕಾ ಪ್ರೇಮ್‌ಕುಮಾರ್, ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ

***

ಇ–ಶೌಚಾಲಯ ಕೆಟ್ಟು ನಿಂತಿರುವುದರಿಂದ ಪ್ರವಾಸಿ ತಾಣಗಳ ಸುತ್ತಮುತ್ತ ಅನೈರ್ಮಲ್ಯ ತಾಂಡವವಾಡುತ್ತಿದೆ.

-ರಾಕೇಶ್‌ ಭಟ್, ಶಾರದಾದೇವಿ ನಗರ

***

ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಒಂದು ಕಂಪನಿ ಆಸಕ್ತಿ ವಹಿಸಿದೆ. ಮತ್ತೊಮ್ಮೆ ಟೆಂಡರ್ ಕರೆಯಲಾಗುವುದು. ಒಂದು ತಿಂಗಳಲ್ಲಿ ಇ–ಶೌಚಾಲಯಗಳು ದುರಸ್ತಿಯಾಗಲಿವೆ

-ಶ್ರೀನಿವಾಸ, ಪಾಲಿಕೆಯ ಒಳಚರಂಡಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್

***

ದೇವರಾಜ ಅರಸು ರಸ್ತೆಯಲ್ಲಿ ಇ–ಶೌಚಾಲಯದ ಅಗತ್ಯ ಇದೆ. ಇನ್ನಾದರೂ ಪಾಲಿಕೆ ಅಧಿಕಾರಿಗಳು ಕೆಟ್ಟಿರುವ ಶೌಚಾಲಯಗಳನ್ನು ದುರಸ್ತಿಗೊಳಿಸಬೇಕು

-ಪರಮೇಶ್ವರ, ದೇವರಾಜ ಅರಸು ರಸ್ತೆ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು