ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಕ್ಕೆ ಪೂರಕ: ಉಳಿತಾಯಕ್ಕೆ ಸಾರ್ಥಕ

₹ 8 ಲಕ್ಷ ವೆಚ್ಚದಲ್ಲಿ ವಿದ್ಯುತ್‌ ವಾಹನಗಳ ಚಾರ್ಜಿಂಗ್‌ ಕೇಂದ್ರ ಆರಂಭಿಸಿದ ಸೆಸ್ಕ್‌
Last Updated 27 ಜನವರಿ 2021, 3:15 IST
ಅಕ್ಷರ ಗಾತ್ರ

ಮೈಸೂರು: ಇಂಧನ (ಪೆಟ್ರೋಲ್‌–ಡೀಸೆಲ್‌) ದರ ದಿನೇ ದಿನೇ ಗಗನಮುಖಿಯಾಗುತ್ತಿರುವ ಕಾಲಘಟ್ಟದಲ್ಲಿ; ವಾಹನ ಸವಾರರ ಆರ್ಥಿಕ ಹೊರೆ ಕಡಿಮೆ ಮಾಡುವ ಜೊತೆಗೆ, ಉಳಿತಾಯಕ್ಕೆ ಉತ್ತೇಜನ ನೀಡಲು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ಗ್ರಾಹಕ ಸ್ನೇಹಿ ಕ್ರಮ ಕೈಗೊಂಡಿದೆ.

ಪರಿಸರಕ್ಕೆ ಪೂರಕವಾದ, ಆರೋಗ್ಯಕ್ಕೆ ಸಹಕಾರಿಯಾದ, ಭವಿಷ್ಯದ ವಾಹನ ಸಾರಿಗೆ ಎಂದೇ ಬಿಂಬಿತಗೊಳ್ಳುತ್ತಿರುವ ವಿದ್ಯುತ್‌ ವಾಹನಗಳ ಚಾರ್ಜಿಂಗ್‌ ಕೇಂದ್ರವನ್ನು ಗಣರಾಜ್ಯೋತ್ಸವ ದಿನದಂದು ತನ್ನ ಕೇಂದ್ರ ಕಚೇರಿ ಆವರಣದಲ್ಲೇ ಆರಂಭಿಸಿದೆ.

₹ 8 ಲಕ್ಷ ವೆಚ್ಚದಲ್ಲಿ ನೇರ ಚಾರ್ಜಿಂಗ್‌ ಘಟಕ ಹಾಗೂ ಎಸಿ ಘಟಕ ಶುರು ಮಾಡಿದೆ. ನೇರ ಚಾರ್ಜಿಂಗ್ ಘಟಕದಲ್ಲಿ ನಾಲ್ಕು ಚಕ್ರದ ವಾಹನಕ್ಕೆ ಮಾತ್ರ ಅವಕಾಶವಿದೆ. ಒಂದರಿಂದ ಒಂದೂವರೆ ತಾಸಿನೊಳಗೆ ಸಂಪೂರ್ಣ ಚಾರ್ಜ್‌ ಆಗಲಿದೆ. ಆಯಾ ವಾಹನದ ಸಾಮರ್ಥ್ಯದ ಅನುಸಾರ ಚಾರ್ಜಿಂಗ್‌ಗೆ 12ರಿಂದ 20 ಯುನಿಟ್‌ ವಿದ್ಯುತ್‌ ಬೇಕಿದೆ. ಇದರ ಅಂದಾಜು ಮೊತ್ತ ₹ 150ರ ಆಸುಪಾಸಿರಲಿದೆ.

ಒಮ್ಮೆ ಚಾರ್ಜ್‌ ಮಾಡಿಕೊಂಡರೆ ಆಯಾ ವಾಹನದ ಬ್ಯಾಟರಿ ಸಾಮರ್ಥ್ಯದ ಅನುಸಾರ 120ರಿಂದ 260 ಕಿ.ಮೀ. ದೂರದವರೆಗೂ ಸಂಚರಿಸಬಹುದು. ಮಾರ್ಗ ಮಧ್ಯೆ ಚಾರ್ಜ್‌ ಮಾಡಿಸಿಕೊಳ್ಳಲು ಇದೀಗ ಅಲ್ಲಲ್ಲೇ ಚಾರ್ಜಿಂಗ್‌ ಕೇಂದ್ರಗಳು ಆರಂಭವಾಗಿವೆ. ಸೆಸ್ಕ್‌ ಅಭಿವೃದ್ಧಿಪಡಿಸಿರುವ ‘ಕರೆಂಟ್‌ ಆ್ಯಪ್‌’ನಲ್ಲಿ ಇದರ ಸಂಪೂರ್ಣ ಮಾಹಿತಿ ಲಭ್ಯವಿದೆ ಎಂದು ಸೆಸ್ಕ್‌ನ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಅಣ್ಣೇಗೌಡ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಎಸಿ ಘಟಕದಲ್ಲಿ ಏಕ ಕಾಲಕ್ಕೆ ಮೂರು ವಿದ್ಯುತ್‌ ವಾಹನಗಳ ಚಾರ್ಜಿಂಗ್‌ ಮಾಡಿಕೊಳ್ಳಬಹುದು. ದ್ವಿಚಕ್ರ ವಾಹನವಾದರೆ 3ರಿಂದ 4 ತಾಸು, ತ್ರಿಚಕ್ರ, ನಾಲ್ಕು ಚಕ್ರದ ವಾಹನಗಳಾದರೆ 6ರಿಂದ 8 ತಾಸಿನ ಸಮಯ ಬೇಕು. ನೇರ ಚಾರ್ಜಿಂಗ್‌ ಘಟಕದಲ್ಲಿ ಒಂದರಿಂದ ಒಂದೂವರೆ ತಾಸು ಸಾಕಾಗಲಿದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಂಚರಿಸಲು ಚಾರ್ಜಿಂಗ್‌ ಸಾಕಷ್ಟಾಗಲಿದೆ ಎಂದು ಅವರು ಹೇಳಿದರು.

ಪವರ್‌ಗ್ರಿಡ್‌ ಜೊತೆ ಒಪ್ಪಂದ: ಮತ್ತೆ ಎರಡು ಕೇಂದ್ರ

‘ಮೈಸೂರಿನಲ್ಲಿ ಲಭ್ಯ ಮಾಹಿತಿಯಂತೆ ಪ್ರಸ್ತುತ 300ಕ್ಕೂ ಹೆಚ್ಚು ವಿದ್ಯುತ್‌ ವಾಹನಗಳಿವೆ. ಈ ಸಂಖ್ಯೆ ಭವಿಷ್ಯದಲ್ಲಿ ದಿನದಿಂದ ದಿನಕ್ಕೆ ಗಗನಮುಖಿಯಾಗಲಿದೆ’ ಎಂದು ಸೆಸ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಮನೋಹರ ಎಂ.ಬೇವಿನಮರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ಚಾರ್ಜಿಂಗ್‌ ಕೇಂದ್ರ ಕಾರ್ಯಾರಂಭಗೊಂಡಿದೆ. ವಿದ್ಯುತ್‌ ವಾಹನ ಸವಾರರ ಅನುಕೂಲಕ್ಕಾಗಿ ಮತ್ತೆ ಎರಡು ಕೇಂದ್ರಗಳನ್ನು ಆರಂಭಿಸಲಿದ್ದೇವೆ. ಇದಕ್ಕಾಗಿ ಬುಧವಾರ (ಜ.27) ಪವರ್‌ಗ್ರಿಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಜೊತೆ ಒಡಂಬಡಿಕೆ ಮಾಡಿಕೊಳ್ಳಲಿದ್ದೇವೆ’ ಎಂದು ಅವರು ಹೇಳಿದರು.

‘ಕುವೆಂಪು ನಗರದಲ್ಲಿನ ಚಿಕ್ಕಮ್ಮ ಕಲ್ಯಾಣ ಮಂಟಪದ ಜೋಡಿ ಬಸವೇಶ್ವರ ರಸ್ತೆಯಲ್ಲಿರುವ ಸೆಸ್ಕ್‌ ಕಚೇರಿಯ ಆವರಣದಲ್ಲಿ ಹಾಗೂ ಕೆಸರೆಯ ರಾಜೇಂದ್ರ ನಗರದಲ್ಲಿರುವ ಸೆಸ್ಕ್‌ ಕಚೇರಿ ಆವರಣದಲ್ಲಿ ಎರಡು ವಿದ್ಯುತ್‌ ವಾಹನ ಚಾರ್ಜಿಂಗ್‌ ಕೇಂದ್ರ ಆರಂಭಿಸಲಿದ್ದೇವೆ. ಜಾಗ ನಮ್ಮದು. ಉಪಕರಣಗಳು, ಬಂಡವಾಳ ಹೂಡಿಕೆ ಪವರ್ ಗ್ರಿಡ್‌ ಕಾರ್ಪೊರೇಷನ್‌ದ್ದು. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಎರಡು ತಿಂಗಳಲ್ಲಿ ಮೈಸೂರಿಗರಿಗೆ ಮತ್ತೆ ಎರಡು ಚಾರ್ಜಿಂಗ್‌ ಕೇಂದ್ರಗಳ ಸೇವೆ ಬಳಕೆಗೆ ಸಿಗಲಿದೆ’ ಎಂದು ಬೇವಿನಮರ ಮಾಹಿತಿ ನೀಡಿದರು.

ಖಾಸಗಿಯವರಿಗೂ ಅವಕಾಶ

‘ಕೇಂದ್ರ ಸರ್ಕಾರದ ಸ್ಪಷ್ಟ ಸೂಚನೆಯಿದೆ. ಅದರಂತೆ ಆಸಕ್ತರು ಚಾರ್ಜಿಂಗ್‌ ಕೇಂದ್ರ ಆರಂಭಿಸಲು ಮುಂದೆ ಬಂದರೆ ಅವಕಾಶ ಒದಗಿಸಿಕೊಡುತ್ತೇವೆ’ ಎಂದು ಬೇವಿನಮರ ತಿಳಿಸಿದರು.

‘10X10 ಅಡಿ ಜಾಗ ಸಾಕು. ಚಾರ್ಜಿಂಗ್‌ ಮಾಡುವ ಉಪಕರಣವನ್ನು ಅವರೇ ಅಳವಡಿಸಿಕೊಳ್ಳಬೇಕು. ನಾವು ಆ ಕೇಂದ್ರಕ್ಕೆ ಪ್ರತಿ ಯುನಿಟ್‌ಗೆ ₹ 5ರ ದರದಲ್ಲಿ ವಿದ್ಯುತ್‌ ಪೂರೈಸುತ್ತೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT