ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಂದರಲ್ಲಿ ಕಸದ ರಾಶಿ: ರೋಗ ಭೀತಿ

ಮೈಸೂರು ತಾಲ್ಲೂಕಿನ ಶ್ರೀರಾಂಪುರ ಗ್ರಾಮಸ್ಥರ ಅಳಲು; ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹ
Last Updated 17 ಆಗಸ್ಟ್ 2020, 5:29 IST
ಅಕ್ಷರ ಗಾತ್ರ

ಜಯಪುರ: ಮೈಸೂರು ತಾಲ್ಲೂಕಿನ ಶ್ರೀರಾಂಪುರ ಗ್ರಾಮದ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಅನೈರ್ಮಲ್ಯ ತಾಂಡವವಾಡುತ್ತಿದೆ. ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದೆ.

ಪರಸಯ್ಯನಹುಂಡಿ ಹೊರ ವರ್ತುಲ ರಸ್ತೆ ಬದಿಯಲ್ಲೂ ಕಸದ ರಾಶಿ ಬಿದ್ದು, ಗಬ್ಬು ನಾರುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಬಸ್ ನಿಲ್ದಾಣ ಹತ್ತಿರದ ಮುಖ್ಯರಸ್ತೆಯಲ್ಲಿ ಕೊಳಚೆ ನೀರು ಸಂಗ್ರಹವಾಗಿ ವಾಸನೆ ಬೀರುತ್ತಿದೆ. ಇದರಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು
ಪರದಾಡುವಂತಾಗಿದೆ.

‘ಹೊರ ವರ್ತುಲ ರಸ್ತೆಯ ವೃತ್ತದಲ್ಲಿರುವ ನಂದಿನಿ ಪಾರ್ಲರ್‌ ಪಕ್ಕದಲ್ಲಿ ಡಕ್‌ ನಿರ್ಮಿಸಲು ಗುಂಡಿ ತೆಗೆದು ವರ್ಷವಾಗಿದೆ. ಕಾಮಗಾರಿ ಅರ್ಧಕ್ಕೆ ನಿಂತಿದೆ. ಶೀಘ್ರ ಕಾಮಗಾರಿ ಪುನರಾರಂಭಿಸಿ ಸಮಸ್ಯೆ ಬಗೆಹರಿಸಬೇಕು’ ಎಂದು ಗ್ರಾಮದ ಕೆಂಪಣ್ಣ ಒತ್ತಾಯಿಸಿದರು.

‘ಕೆಲ ಬೀದಿಬದಿ ವ್ಯಾಪಾರಿಗಳು ಮತ್ತು ಮಾಂಸದ ಅಂಗಡಿಯವರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೀಸಾಡುತ್ತಿದ್ದಾರೆ. ಮಾಂಸದ ತ್ಯಾಜ್ಯದಿಂದ ಬೀದಿನಾಯಿಗಳ ಕಾಟ ಹೆಚ್ಚಾಗಿದ್ದು, ಜನರ ಮೇಲೆಯೇ ದಾಳಿ ಮಾಡುತ್ತಿವೆ. ದಯಮಾಡಿ ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯದೇ ಗ್ರಾಮದ ಹೊರ ವಲಯದಲ್ಲಿ ಹಾಕಬೇಕು’ ಎಂದು ಅವರು
ಆಗ್ರಹಿಸಿದರು.

‘ಶ್ರೀರಾಂಪುರ ಗ್ರಾಮದ ವ್ಯಾಪ್ತಿಯಲ್ಲಿ ಅನೈರ್ಮಲ್ಯ ಮತ್ತು ಹದಗೆಟ್ಟ ರಸ್ತೆಗಳ ಬಗ್ಗೆ ಗಮನಕ್ಕೆ ಬಂದಿದ್ದು, ಸ್ವಚ್ಛತೆ ಕಾಪಾಡಲು ₹2 ಲಕ್ಷ ಅನುದಾನ ಮೀಸಲಿಡಲಾಗಿದೆ. ಈ ಸಂಬಂಧ ಪಿಡಿಒ ಜೊತೆ ಚರ್ಚಿಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಕುಮಾರ್ ‘ಪ್ರಜಾವಾಣಿ’ಗೆ
ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT