ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ಬೆಳೆಗೆ ನೀರು: ರೈತರ ಆಗ್ರಹ

ಕಾಡಾ ಕಚೇರಿ ಬಳಿ ರೈತರು, ದಲಿತ ಸಂಘರ್ಷ ಸಮಿತಿಯಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ
Last Updated 19 ಫೆಬ್ರುವರಿ 2020, 12:10 IST
ಅಕ್ಷರ ಗಾತ್ರ

ಮೈಸೂರು: ಕಾವೇರಿ, ಕಬಿನಿ ನಾಲಾ ವ್ಯಾಪ್ತಿಯಲ್ಲಿನ ಬೇಸಿಗೆ ಬೆಳೆಗೆ ನೀರು ಬಿಡುವಂತೆ ಆಗ್ರಹಿಸಿ, ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಸಂಘಗಳ ಒಕ್ಕೂಟದ ಸದಸ್ಯರು ಮಂಗಳವಾರ ಕಾಡಾ ಕಚೇರಿ ಮುಂಭಾಗ ಪ್ರತಿಭಟಿಸಿದರು. ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ನಗರದ ಸಯ್ಯಾಜಿರಾವ್ ರಸ್ತೆಯಲ್ಲಿನ ಕಾಡಾ ಕಚೇರಿ ಬಳಿ ಜಮಾಯಿಸಿದ ಕಬ್ಬು ಬೆಳೆಗಾರರು, ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಕಾವೇರಿ ಹಾಗೂ ಕಬಿನಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಚಿವರ ವಿರುದ್ಧವೂ ಧಿಕ್ಕಾರ ಮೊಳಗಿಸಿದರು.

ಕುರುಬೂರು ಶಾಂತಕುಮಾರ್ ಮಾತನಾಡಿ, ‘ಕಬಿನಿ ಜಲಾಶಯದ ಎಡದಂಡೆ, ಬಲದಂಡೆ ನಾಲೆ, ರಾಂಪುರ ನಾಲೆ, ಹುಲ್ಲಹಳ್ಳಿ ನಾಲೆ, ವರುಣಾ ನಾಲೆ, ಚಿಕ್ಕದೇವರಾಜ ನಾಲೆ, ವಿಸಿ, ರಾಮಸ್ವಾಮಿ, ರಾಜಪರಮೇಶ್ವರಿ ನಾಲೆಗಳಿಗೆ ನೀರು ಹರಿಸಬೇಕು. ಇದರ ಜೊತೆಗೆ ಕೆರೆ–ಕಟ್ಟೆಗಳಿಗೆ ನೀರು ತುಂಬಿಸಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲ ಮಾಡಿಕೊಡುವಂತೆ’ ಒತ್ತಾಯಿಸಿದರು.

ನಾಲೆಗಳಿಗೆ ನೀರು ಬಿಡುವಂತೆ ಫೆ.4ರಂದು ನೀರಾವರಿ ಅಧಿಕಾರಿಗಳಿಗೆ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತ ಸಮೂಹ ಮನವಿ ಸಲ್ಲಿಸಿತ್ತು. ಆದರೆ, ಅಧಿಕಾರಿಗಳು ನೀರು ಹರಿಸಿರಲಿಲ್ಲ. ಹೀಗಾಗಿ ನೀರು ಬಿಡುಗಡೆಗೆ ಆಗ್ರಹಿಸಿ, ರೈತರು ಕಾಡಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ರೈತರನ್ನು ತಡೆದರು. ಈ ಸಂದರ್ಭ ಪೊಲೀಸರು, ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

ನೀರು ಬಿಡುವ ತನಕವೂ ಅನಿರ್ದಿಷ್ಟ ಅವಧಿಯ ಮುಷ್ಕರಕ್ಕೆ ರೈತರು ಮುಂದಾದರು. ಈ ವಿಷಯ ತಿಳಿದೊಡನೆ ಕಾಡಾ ಮುಖ್ಯ ಎಂಜಿನಿಯರ್ ಶಂಕರೇಗೌಡ ಸ್ಥಳಕ್ಕೆ ಬಂದು, ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿ, ಫೆ.25ರಿಂದ ನಾಲೆಗಳಿಗೆ ನೀರು ಬಿಡುವ ಭರವಸೆ ನೀಡಿದರು.

15 ದಿನ ನೀರು ಬಿಡುವುದು. 10 ದಿನ ನೀರು ನಿಲ್ಲಿಸುವ ಸಂಬಂಧ ಮಾತುಕತೆ ನಡೆಯಿತು. ನೀರನ್ನು 3 ಹಂತಗಳಲ್ಲಿ ಬಿಡುವುದಾಗಿ ಅಧಿಕಾರಿಗಳು ಹೇಳಿದ್ದರಿಂದ, ರೈತರು ಪ್ರತಿಭಟನೆ ಹಿಂಪಡೆದರು.

ತಿದ್ದುಪಡಿಗೆ ಆಗ್ರಹ; ವರದಿ ಜಾರಿಗೆ ಒತ್ತಾಯ

ಪರಿಶಿಷ್ಟ ಜಾತಿ/ಪಂಗಡದ ಭೂ ಪರಭಾರೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಬೇಕು. ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಕಾರರು, ಬಜೆಟ್ ಅಧಿವೇಶನದಲ್ಲೇ ಪಿಟಿಸಿಎಲ್ ಕಾಯ್ದೆಗೆ ಯಾವುದೇ ಧಕ್ಕೆ ಅಗದಂತೆ ಸೂಕ್ತ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.

ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಹೊರಗುತ್ತಿಗೆ ಪದ್ಧತಿಯನ್ನು ಕೂಡಲೇ ರದ್ದುಗೊಳಿಸಿ, ಬಾಕಿಯಿರುವ ಪರಿಶಿಷ್ಟ ಜಾತಿ/ವರ್ಗಗಳ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬಲು ಪ್ರತ್ಯೇಕ ಆಯೋಗವೊಂದನ್ನು ರಚಿಸಬೇಕು. ಬೆಲೆ ಏರಿಕೆಗೆ ತಕ್ಕಂತೆ ವಿದ್ಯಾರ್ಥಿ ವೇತನವನ್ನು ಹೆಚ್ಚಳ ಮಾಡಬೇಕು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಹತ್ತು ವರ್ಷಗಳಿಂದ ಖಾಲಿಯಿರುವ ಹಾಸ್ಟೆಲ್‌ ವಾರ್ಡನ್ ಹುದ್ದೆಗೆ ನೇಮಕಾತಿ ನಡೆಸದೆ, ಮೇಲಧಿಕಾರಿಗಳು ವಂಚಿಸಿ ಲೂಟಿ ಮಾಡುತ್ತಿದ್ದಾರೆ. ದಲಿತ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಬರೆ ಎಳೆಯುತ್ತಿದ್ದಾರೆ. ಖಾಲಿಯಿರುವ ವಾರ್ಡನ್‌ ನೇಮಕಾತಿಯನ್ನು ಮಾಡಿಕೊಳ್ಳಬೇಕು. ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಮೇಲೆ ಹೋರಾಟದ ಸಂದರ್ಭದಲ್ಲಿ ಹಾಕಿರುವ ಕ್ರಿಮಿನಲ್ ಪ್ರಕರಣಗಳನ್ನು ಮತ್ತು ಹಲವರನ್ನು ರೌಡಿಶೀಟರ್ ಪಟ್ಟಿಯಿಂದ ಕೂಡಲೇ ಕೈಬಿಡಬೇಕು ಎಂದು ಪ್ರತಿಭಟನಕಾರರು ಒಕ್ಕೊರಲ ಹಕ್ಕೊತ್ತಾಯ ಮಂಡಿಸಿದರು.

ಕಾಂತರಾಜ್ ಹುಣಸೂರು, ಎಸ್.ಮಂಜುನಾಥ್, ರಮೇಶ್ ಎ.ಪಿ, ಆರ್.ಮುರುಗೇಶ್, ಕರಡೀಪುರ ರಾಜಣ್ಣ, ರಜನಿಕಾಂತ್, ಗೋಪಾಲ ಹುಣಸೂರು, ಎ.ಸುಬ್ರಹ್ಮಣ್ಯ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕೆಎಸ್‌ಐಸಿ: ನೌಕರರ ಪ್ರತಿಭಟನೆ

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (ಕೆಎಸ್‍ಐಸಿ) ರಾಜಕೀಯ ಪ್ರೇರಿತವಾಗಿ ಆಡಳಿತ ನಡೆಸುತ್ತಿದ್ದು, ಆಯುಧ ಪೂಜೆ ಸಮಯಕ್ಕೆ ನೀಡಬೇಕಿದ್ದ ಬೋನಸ್ ಅನ್ನು ಇದೂವರೆಗೂ ನೀಡದಿರುವುದನ್ನು ಖಂಡಿಸಿ, ಕಾರ್ಮಿಕ ಸಂಘಟನೆಗಳ ವತಿಯಿಂದ ನೌಕರರು ಮಂಗಳವಾರ ಮೈಸೂರಿನಲ್ಲಿರುವ ಕಾರ್ಖಾನೆ ಮುಂಭಾಗ ಪ್ರತಿಭಟಿಸಿದರು.

ಈಚಿನ ದಿನಗಳಲ್ಲಿ ಸಂಸ್ಥೆ ನೌಕರರ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ರಾಜಕೀಯ ಪ್ರತಿಷ್ಠೆಗಾಗಿ ತೆಗೆದುಕೊಳ್ಳುವ ತೀರ್ಮಾನ ಹಾಗೂ ಕಾರ್ಖಾನೆ ಅಭಿವೃದ್ಧಿಗೆ ಪೂರಕವಾಗದ ತೀರ್ಮಾನಗಳನ್ನು ವಿರೋಧಿಸಿ ಸಂಸ್ಥೆಯ ಕಾರ್ಮಿಕ ಸಂಘಟನೆಗಳ ಜಂಟಿಕ್ರಿಯಾ ಸಮಿತಿ ವತಿಯಿಂದ ಪ್ರತಿಭಟಿಸಲಾಯಿತು.

‘ಸರ್ಕಾರಿ ಸ್ವಾಮ್ಯದಲ್ಲಿರುವ ಸಂಸ್ಥೆಗಳ ಪೈಕಿಕೆಎಸ್‍ಐಸಿ ಲಾಭ ಗಳಿಸುವ ಸಂಸ್ಥೆಯಾಗಿದೆ. ಆದರೂ ಸಂಸ್ಥೆಯ ಆಡಳಿತ ವರ್ಗ ಮತ್ತು ರಾಜ್ಯ ಸರ್ಕಾರ ಕಾರ್ಮಿಕರ ಹಿತದೃಷ್ಟಿ ಕಾಪಾಡುವಲ್ಲಿ ವಿಫಲವಾಗಿವೆ. ಕಾನೂನು ಒಪ್ಪಂದ ಹಾಗೂ 2018ರ ವೇತನ ಒಪ್ಪಂದವನ್ನು ಉಲ್ಲಂಘಿಸಿವೆ. ಆಡಳಿತ ವರ್ಗವನ್ನು ಕುರಿತು ಪ್ರಶ್ನಿಸಿದರೆ, ಅಧಿಕಾರಿಗಳು ನಿರ್ಲಕ್ಷ್ಯದ ಉತ್ತರ ನೀಡುತ್ತಾರೆ’ ಎಂದು ಪ್ರತಿಭಟನಕಾರರು ದೂರಿದರು.

ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿಯನ್ನು ಕೆಎಸ್‌ಐಸಿ ಜತೆ ವಿಲೀನಗೊಳಿಸುತ್ತಿರುವುದಕ್ಕೂ ಪ್ರತಿಭಟನಕಾರರು ವಿರೋಧ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT