ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರೀಕರಣದಿಂದಾಗಿ ರೈತ ಅತಂತ್ರ

ತಂಬಾಕು ನಿಯಂತ್ರಣ ಕಾರ್ಯಕ್ರಮ: ನ್ಯಾಯಾಧೀಶ ದೇವಮಾನೆ ಹೇಳಿಕೆ
Last Updated 15 ಡಿಸೆಂಬರ್ 2020, 2:48 IST
ಅಕ್ಷರ ಗಾತ್ರ

ಮೈಸೂರು: ‘ಸ್ವಾವಲಂಬಿಯಾಗಿದ್ದ ರೈತರು ವ್ಯಾಪಾರೀಕರಣದ ವ್ಯವಸ್ಥೆಯಿಂದಾಗಿ ಸಮಸ್ಯೆಗೆ ಸಿಲುಕಿದ್ದಾರೆ. ಕಂಪನಿಗಳ ರಸಗೊಬ್ಬರ, ಬಿತ್ತನೆ ಬೀಜ ಖರೀದಿಗೆಂದು ಖರ್ಚು ಮಾಡುವ ರೈತರಿಗೆ ಕೊನೆಗೆ ಏನೂ ಉಳಿಯದಾಗಿದೆ’ ಎಂದು ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ ತಿಳಿಸಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಸರ್ವೇಕ್ಷಣಾ ಘಟಕ ಸೋಮವಾರ ಇಲ್ಲಿ ಆಯೋಜಿಸಿದ್ದ ‘ತಂಬಾಕು ಬೆಳೆಯ ದುಷ್ಪರಿಣಾಮ ಹಾಗೂ ಪರ್ಯಾಯ ಬೆಳೆ’ ಬಗೆಗಿನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೋ ಕಂಪನಿಗಳ ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜಕ್ಕೆ ಹೆಚ್ಚು ಪ್ರಚಾರ ನೀಡಲಾಗುತ್ತಿದೆ. ಆದರೆ, ಸಾವಯವ ಗೊಬ್ಬರ, ದೇಶಿ ಬಿತ್ತನೆ ಬೀಜಗಳ ಬಗ್ಗೆ ಜಾಗೃತಿ ಮೂಡಿಸುವವರು, ತಿಳಿಸಿಕೊಡುವವರು ಯಾರೂ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನನಗೆ ಉತ್ತಮ ವೇತನ ಸಿಗುತ್ತಿದೆ. ಆದರೆ, ಶುದ್ಧ ಹಾಲು ಖರೀದಿಸಿ ಕುಡಿಯೋಣವೆಂದರೆ ಮೈಸೂರು ನಗರದಲ್ಲಿ ಎಲ್ಲೂ ಸಿಗುತ್ತಿಲ್ಲ. ಊರಿನಲ್ಲಿ ತೋಟವಿದ್ದು, ತಾಜಾ ತರಕಾರಿಗಳು, ಹಸುವಿನ ಹಾಲು ಸಿಗುತ್ತದೆ. ಅದು ನೆಮ್ಮದಿ ಹಾಗೂ ಆರೋಗ್ಯಯುತ ಜೀವನಕ್ಕೆ ಕಾರಣವಾಗುತ್ತದೆ. ನಗರದಲ್ಲಿ ಎಷ್ಟೇ ಹಣ ನೀಡಿದರೂ ಶುದ್ಧ ಪದಾರ್ಥ ಗಳು ಸಿಗುವುದಿಲ್ಲ. ಬದಲಾಗಿ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದೇವೆ’ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಿವಪ್ರಸಾದ್ ಅವರು ಕೋಟ್ಪಾ ಕಾಯ್ದೆ ಕುರಿತು ಮಾಹಿತಿ ಹಾಗೂ ತಂಬಾಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರುದ್ರೇಶ್‌, ಕೃಷಿ ಇಲಾಖೆ ಉಪನಿರ್ದೇಶಕ ಸೋಮಶೇಖರ್, ಶಿವಕುಮಾರ್‌‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT