ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ರೈತರ ಪ್ರತಿಭಟನೆ

ಸಾಲಮನ್ನಾದ ಶ್ವೇತಪತ್ರಕ್ಕೆ ರೈತಸಂಘದ ಆಗ್ರಹ
Last Updated 24 ಜೂನ್ 2019, 14:17 IST
ಅಕ್ಷರ ಗಾತ್ರ

ಮೈಸೂರು: ಸಾಲ ಮನ್ನಾದ ಶ್ವೇತಪತ್ರ ಹೊರಡಿಸಿ. ಕೆ.ಆರ್.ಎಸ್‌. ಹಾಗೂ ಹೇಮಾವತಿ ಜಲಾಶಯದಿಂದ ನೀರು ಹರಿಸಿ ಮಂಡ್ಯ ಜಿಲ್ಲೆಯ ಕಬ್ಬಿನ ಬೆಳೆ ರಕ್ಷಿಸಿ ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಸೋಮವಾರ ಮೈಸೂರಿನಲ್ಲಿ ಪ್ರತಿಭಟಿಸಿದರು.

ನಗರದ ಗನ್‌ ಹೌಸ್‌ ಬಳಿ ಜಮಾಯಿಸಿದ ರೈತ ಸಂಘಟನೆಯ ಕಾರ್ಯಕರ್ತರು, ಒಂದು ಗಂಟೆಗೂ ಹೆಚ್ಚಿನ ಅವಧಿ ಪ್ರತಿಭಟನಾ ಜಾಥಾ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಬಳಿ ನೆರೆದರು. ರಸ್ತೆಯಲ್ಲೇ ಕುಳಿತು ಪ್ರತಿಭಟನಾ ಸಭೆ ನಡೆಸಿದರು. ಸಭೆ ಆರಂಭಕ್ಕೂ ಮುನ್ನ ರೈತ ಗೀತೆ ಹಾಡಿ, ಹಸಿರು ಶಾಲು ಬೀಸಿ, ತಮ್ಮ ಶಕ್ತಿ ಪ್ರದರ್ಶಿಸಿದರು.

ಸಂಘಟನೆಯ ಮುಖಂಡರು, ಪ್ರಮುಖರು ಪ್ರತಿಭಟನಾ ಸಭೆಯಲ್ಲಿ ಮಾತನಾಡಿ ತಮ್ಮ ಬೇಡಿಕೆ ಈಡೇರಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು. ಸಭೆಯ ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಬಿಎಸ್‌ಪಿ ಪದಾಧಿಕಾರಿಗಳು ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಐದು ವರ್ಷಗಳಿಂದಲೂ ರಾಜ್ಯದಲ್ಲಿ ಬರಗಾಲ ಆವರಿಸಿದೆ. ಹಿಂದಿನ ವರ್ಷ 156 ತಾಲ್ಲೂಕುಗಳನ್ನು ಬರ ಪ್ರದೇಶವೆಂದು ಸರ್ಕಾರ ಘೋಷಿಸಿತ್ತು. ಈ ವರ್ಷ ಆ ತಾಲ್ಲೂಕುಗಳ ಜತೆಗೆ ಮತ್ತಷ್ಟು ತಾಲ್ಲೂಕುಗಳನ್ನು ಸೇರಿಸಿ, 164 ತಾಲ್ಲೂಕುಗಳಲ್ಲಿ ಬರ ತಾಂಡವವಾಡುತ್ತಿದೆ. ನಮ್ಮ ಜಿಲ್ಲೆಯ ಹೆಚ್ಚು ಭಾಗ ಸಹ ಬರ ಎದುರಿಸುತ್ತಿದ್ದು, ಮುಂಗಾರು ಸರಿಯಾದ ವೇಳೆಗೆ ಬೀಳಲಿಲ್ಲ. ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ತಡವಾಗಿ ಕೆಲವು ಭಾಗಗಳಲ್ಲಿ ಮಳೆ ಬಿದ್ದಿದೆ. ಆದರೆ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಇದರಿಂದ ರೈತರ ಬದುಕು ದುಃಸ್ಥಿತಿಗೆ ತಲುಪಿದೆ. ಜನರು ಅನುಭವಿಸುತ್ತಿರುವ ಕಷ್ಟಗಳಿಗೆ ಸರ್ಕಾರದ ಸ್ಪಂದನೆ ಸಮರ್ಪಕ ಮತ್ತು ಸಮಯೋಚಿತವಾಗಿಲ್ಲ. ರೈತರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಎಂದು ಪ್ರತಿಭಟನಾಕಾರರು ಒಕ್ಕೊರಲಿನಿಂದ ಒತ್ತಾಯಿಸಿದರು.

ಬರದ ಸಮಸ್ಯೆಗೆ ತುರ್ತಾಗಿ ಸ್ಪಂದಿಸಬೇಕು. ಒಂದು ಎಕರೆಗೆ ₹ 10,000 ಪರಿಹಾರ ನೀಡಬೇಕು. ಕಬ್ಬಿನ ಬಾಕಿ ಪಾವತಿಸಬೇಕು. ಪ್ರಸಕ್ತ ಸಾಲಿನ ಕಬ್ಬಿನ ಬೆಲೆ ನಿಗದಿ ಪಡಿಸಬೇಕು. ಚುಂಚನಕಟ್ಟೆ, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ, ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಬೇಕು. ಸರ್ಕಾರಿ ಭೂಮಿ, ಕೆರೆ, ಕುಂಟೆ ಒತ್ತುವರಿ ತೆರವು ಮಾಡಿಸಬೇಕು. ಕೆರೆಗಳಿಗೆ ನೀರು ತುಂಬಿಸಬೇಕು. ಭತ್ತ ಖರೀದಿ ಕೇಂದ್ರ ಆರಂಭಿಸಬೇಕು. ಜಡ್ಡುಗಟ್ಟಿರುವ ಆಡಳಿತ ಯಂತ್ರ ಚುರುಕುಗೊಳಿಸಬೇಕು ಎಂದು ರೈತ ಪ್ರಮುಖರು ‍ಪ್ರತಿಭಟನಾ ಸಭೆಯಲ್ಲಿ ಆಗ್ರಹಿಸಿದರು.

ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ನೇತ್ರಾವತಿ, ಬನ್ನೂರು ಕೃಷ್ಣಪ್ಪ, ಎಂ.ಎಸ್.ಅಶ್ವತ್‌ರಾಜೇ ಅರಸ್‌, ಎಚ್‌.ಸಿ.ಲೋಕೇಶ್‌ರಾಜೇ ಅರಸ್‌, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಗುರುಲಿಂಗೇಗೌಡ, ಪಳನಿಸ್ವಾಮಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT