ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಶಾಸಕ ಶಾಸಕ ಸಿ. ಅನಿಲ್‌ ಕುಮಾರ್‌ ವಿರುದ್ಧ ಎಫ್‌ಐಆರ್‌

ಪೊಲೀಸರಿಂದ ಅವಮಾನ ಆರೋಪ: ಶಾಸಕರ ಬೆಂಬಲಿಗರಿಂದ ಧರಣಿ
Last Updated 5 ಡಿಸೆಂಬರ್ 2019, 18:27 IST
ಅಕ್ಷರ ಗಾತ್ರ

ಹುಣಸೂರು: ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಎಚ್‌.ಡಿ. ಕೋಟೆಕ್ಷೇತ್ರದ ಕಾಂಗ್ರೆಸ್‌ ಶಾಸಕ ಸಿ. ಅನಿಲ್‌ ಕುಮಾರ್‌ ಹಾಗೂ ಮೈಸೂರು ಕಾಂಗ್ರೆಸ್‌ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್‌ ಕುಮಾರ್‌ ಸೇರಿದಂತೆ 20 ಮಂದಿಯ ವಿರುದ್ಧ ಪೊಲೀಸರು ಗುರುವಾರ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.

‌ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353 (ಕರ್ತವ್ಯಕ್ಕೆ ಅಡ್ಡಿ), 143 (ಅಕ್ರಮ ಕೂಟ), 147 (ಗಲಭೆ)ಹಾಗೂ 149 (ಒಂದೇ ಉದ್ದೇಶ ದೊಂದಿಗೆ ಕಾನೂನಿನ ವಿರುದ್ಧ ಸಭೆ) ಅನ್ವಯ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ಡಿವೈಎಸ್ಪಿ ಕೆ.ಎಸ್‌.ಸುಂದರ್‌ ರಾಜ್‌ ತಿಳಿಸಿದರು.

ಹುಣಸೂರು ಉಪ ಚುನಾವಣೆಯಲ್ಲಿ ಮತ ಚಲಾಯಿಸಲು ತಮ್ಮ ಹುಟ್ಟೂರು ಹೊಸರಾಮೇನಹಳ್ಳಿಯ ಮತಗಟ್ಟೆಗೆ ಬಂದಿದ್ದ ಶಾಸಕ ಅನಿಲ್‌ ಕುಮಾರ್‌ ಮತ್ತು ಪೊಲೀಸರ ನಡುವೆ ಬೆಳಿಗ್ಗೆ ಮಾತಿನ ಚಕಮಕಿ ನಡೆದಿತ್ತು. ಜನ ಪ್ರತಿನಿಧಿಯನ್ನು ಅವಮಾನಿಸಿದ ಪೊಲೀಸರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.

ಘಟನೆಯ ವಿವರ: ಹೊಸರಾಮೇನ ಹಳ್ಳಿಯ ಮತಗಟ್ಟೆಯಲ್ಲಿ ಬೆಳಿಗ್ಗೆ ಮತ ಚಲಾಯಿಸಿ ಹೊರಬಂದಾಗ ಅನಿಲ್‌ ಅವರನ್ನು ಬೆಂಬಲಿಗರು ಸುತ್ತುವರಿದರು. ಈ ವೇಳೆ ಅಲ್ಲಿದ್ದ ಇನ್ಸ್‌ಪೆಕ್ಟರ್‌ ಸುನಿಲ್‌ ಕುಮಾರ್‌, ಮತಗಟ್ಟೆಯ 100 ಮೀಟರ್‌ ವ್ಯಾಪ್ತಿಯಿಂದ ಹೊರಹೋಗುವಂತೆ ಸೂಚಿಸಿದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರ ಬೆಂಬಲಿಗರು, ಶಾಸಕರನ್ನು ಏಕವಚನದಲ್ಲಿ ಬೈದು ಅವಮಾನಿಸಿದ್ದಾರೆ ಎಂದು ಆರೋಪಿಸಿ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ನಂತರ ಬೆಟ್ಟದ ಚಿಕ್ಕಮ್ಮ ದೇವಸ್ಥಾನದ ಆವರಣದಲ್ಲಿ ಶಾಸಕರ ಜತೆ ಪ್ರತಿಭಟಿಸಿದರು. ಆಗ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಮೈಸೂರು ಜಿಲ್ಲಾ ಎಎಸ್ಪಿ ಪಿ.ವಿ.ಸ್ನೇಹಾ ಸ್ಥಳಕ್ಕೆ ಬಂದು ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ‘ಅವಮಾನ ಮಾಡಿರುವ ಇನ್ಸ್‌ಪೆಕ್ಟರ್‌ ಕ್ಷಮೆ ಕೇಳಬೇಕು’ ಎಂದು ಶಾಸಕ ಪಟ್ಟುಹಿಡಿದರು. ಸ್ಥಳದಲ್ಲಿದ್ದ ಬಿ.ಜೆ.ವಿಜಯ್‌ಕುಮಾರ್‌ ಅವರು ವಿಧಾನಸಭೆ ವಿರೋಧ
ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕರೆಮಾಡಿ ಘಟನೆ ವಿವರಿಸಿದರು.

ಸಿದ್ದರಾಮಯ್ಯ ಎಎಸ್ಪಿ ಜತೆಯೂ ಮಾತನಾಡಿದರು. ಶಾಸಕರು ಲಿಖಿತ ದೂರು ನೀಡಿದರೆ ಅದನ್ನು ಪರಿಶೀಲಿಸಿ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಎಸ್ಪಿ ಭರವಸೆ ನಂತರ ಪ್ರತಿಭಟನೆ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT