ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಕ್ಷೇತ್ರದಲ್ಲಿ ಹಿರಿಯ ನಾಗರಿಕರ ಕಡೆಗಣನೆ: ಡಾ.ವಿ.ಪ್ರಕಾಶ್ ವಿಷಾದ

Last Updated 30 ಮಾರ್ಚ್ 2019, 10:45 IST
ಅಕ್ಷರ ಗಾತ್ರ

ಮೈಸೂರು: ‘ಹಿರಿಯ ನಾಗರಿಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಬೇಕಿರುವ ಆಹಾರ ತಂತ್ರಜ್ಞಾನ ಸಂಶೋಧನೆಗೆ ನಮ್ಮ ದೇಶದಲ್ಲಿ ಒತ್ತು ನೀಡುತ್ತಿಲ್ಲ’ ಎಂದು ಎಂದು ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ನಿವೃತ್ತ ನಿರ್ದೇಶಕ ಡಾ.ವಿ.ಪ್ರಕಾಶ್ ವಿಷಾದ ವ್ಯಕ್ತಪಡಿಸಿದರು.

ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಸಿಎಸ್‌ಐಆರ್‌ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘವು ಶನಿವಾರ ಹಮ್ಮಿಕೊಂಡಿದ್ದ 27ನೇ ಸರ್ವ ಸದಸ್ಯರ ಸಭೆ ಹಾಗೂ ‘ಆಹಾರ ಮತ್ತು ಆರೋಗ್ಯ’ ಕುರಿತ ಸಮಾವೇಶದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಖಾಸಗಿ ಹಾಗೂ ಸರ್ಕಾರಿ ಆಹಾರ ಉದ್ಯಮಗಳು ಹಿರಿಯ ನಾಗರಿಕರಿಗೆ ಬೇಕಾದ ಆಹಾರ ಉತ್ಪಾದನೆಯನ್ನು ಕಡೆಗಣಿಸಿವೆ. ಇದರಿಂದಾಗಿ ಹಿರಿಯ ನಾಗರಿಕರ ಆರೋಗ್ಯ ಕ್ಷೀಣಿಸುತ್ತಿದೆ. ಜೀವಿತಾವಧಿಯೂ ಕಡಿಮೆಯಾಗಿದೆ. ಆಹಾರ ಉತ್ಪಾದನೆಯಲ್ಲಿ ಈ ಕುರಿತು ಆದ್ಯತೆ ನೀಡಿದಲ್ಲಿ ಅನುಕೂಲವಾಗುವುದು ಎಂದು ಅಭಿಪ್ರಾಯಪಟ್ಟರು.

‘ಆಹಾರ ತಂತ್ರಜ್ಞಾನ ಹಾಗೂ ಪೌಷ್ಟಿಕತೆಯನ್ನು ಸಮಾಜಕ್ಕೆ ತಲುಪಿಸಬೇಕಾದರೆ ಮಾಹಿತಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಅತ್ಯಗತ್ಯ. ರಸಾಯನವಿಜ್ಞಾನ ಸೇರಿದಂತೆ ವಿವಿಧ ವಿಜ್ಞಾನ ಕ್ಷೇತ್ರಗಳಲ್ಲಿ ಆಹಾರ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದಂತೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಲೇ ಇವೆ. ಈ ಸಂಶೋಧನೆಗಳು ಜನ ಸಾಮಾನ್ಯರಿಗೆ ತಲುಪಬೇಕು ಎನ್ನುವುದಾದರೆ ಅವನ್ನು ವಿವಿಧ ಅಕ್ಷರ, ದೃಶ್ಯ– ಶ್ರವ್ಯ ಮಾಧ್ಯಮಗಳ ಮೂಲಕವೇ ತಲುಪಿಸಬೇಕು’ ಎಂದು ಸಲಹೆ ನೀಡಿದರು.

‘ಅಂತೆಯೇ, ಭಾರತೀಯರು ಆಹಾರ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ನಾವು ವಿಶ್ವಮಟ್ಟದಲ್ಲಿ ಪ್ರಚುರಪಡಿಸಬೇಕಿದೆ. ದೇಹ, ಮನಸು ಹಾಗೂ ಆತ್ಮ ಎಂಬ ವಿಚಾರಗಳನ್ನು ಭಾರತೀಯರು ಪಳಗಿಸಿದ್ದಾರೆ. ಆ ಸೂತ್ರಗಳನ್ನು ನಾವು ನಮ್ಮಲ್ಲಿಯೇ ಇಟ್ಟುಕೊಳ್ಳದೇ ವಿಶ್ವಕ್ಕೆ ಹಂಚಬೇಕು. ಅಂತೆಯೇ, ನಮ್ಮ ಸಾಧಕ ಕ್ಷೇತ್ರಗಳಿಗೆ ಆಧುನಿಕತೆಯ ಸ್ಪರ್ಶ ನೀಡಿ ವಿಪುಲ ಅವಕಾಶಗಳನ್ನು ಅಗತ್ಯ ರೀತಿಯಲ್ಲಿ ಬಳಸಿಕೊಳ್ಳಬೇಕು’ ಎಂದು ಅವರು ಹೇಳಿದರು.

ಯೋಗ, ಧ್ಯಾನ ಅಗತ್ಯ: ಪೌಷ್ಟಿಕ ಆಹಾರ, ಆರೋಗ್ಯ ತಂತ್ರಜ್ಞಾನ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಯೋಗ ಹಾಗೂ ಧ್ಯಾನದ ಅಗತ್ಯವಿದೆ. ಇದುವೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಗುಟ್ಟು. ಆದರೆ, ಇದು ಪಾಲನೆಯಾಗದೇ ಇರುವ ಕಾರಣ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಆಗುತ್ತಿಲ್ಲ ಎಂದರು.

ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಕೆ.ಎಸ್‌.ಎಂ.ಎಸ್‌.ರಾಘವ ರಾವ್ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ನಿವೃತ್ತರಿಗೆ ಅನುಕೂಲಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ ಹಲವು ಹೊಸ ಹೆಜ್ಜೆಗಳನ್ನು ಇಡಲಾಗಿದೆ. ನಗರದಲ್ಲಿರುವ ವಿವಿಧ ಖಾಸಗಿ ಆಸ್ಪತ್ರೆಗಳ ಜತೆಗೆ ಒಪ್ಪಂದ ಮಾಡಿಕೊಂಡು ಆರೋಗ್ಯ ವಿಮೆ ಸೌಲಭ್ಯ ನೀಡಲಾಗುತ್ತಿದೆ. ಇದರಿಂದ ಆರ್ಥಿಕವಾಗಿ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಸಿಎಸ್‌ಐಆರ್‌ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಪಿ.ಕೆ.ಸೇಥ್ ಅಧ್ಯಕ್ಷತೆವಹಿಸಿದ್ದರು. ಲಖನೌ ಸಿಎಸ್‌ಐಆರ್‌ ನಿವೃತ್ತ ನಿರ್ದೇಶಕ ಡಾ.ವಿ.ಪಿ.ಕಂಬೋಜ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ವಾರ್ತಾಪತ್ರಿಕೆಯನ್ನು ಡಾ.ಕೆ.ಎಸ್‌.ಎಂ.ಎಸ್‌.ರಾಘವ ರಾವ್ ಬಿಡುಗಡೆಗೊಳಿಸಿದರು. ಆಹಾರ ಮತ್ತು ಆರೋಗ್ಯ ಜೀವನ ಕೃತಿಯನ್ನು ಲಖನೌ ಸಿಎಸ್‌ಐಆರ್‌ ನಿವೃತ್ತ ನಿರ್ದೇಶಕ ಡಾ.ಸಿ.ಎಂ.ಗುಪ್ತಾ ಬಿಡುಗಡೆಗೊಳಿಸಿದರು.

ಸಿಎಸ್‌ಐಆರ್‌ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಮೈಸೂರು ಶಾಖೆಯ ಕಾರ್ಯದರ್ಶಿ ಡಾ.ರೇಣು ಅಗರವಾಲ್, ಅಧ್ಯಕ್ಷ ಡಾ.ಎನ್‌.ಕೃಷ್ಣಮೂರ್ತಿ, ಲಖನೌ ಶಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಜಯೇಂದ್ರ ಕೆ.ಜೋರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT